ಬೆಂಗಳೂರು, ನ. 12, 2020 (ಕರಾವಳಿ ಟೈಮ್ಸ್) : ರಾಷ್ಟ್ರವ್ಯಾಪಿ ಲಾಕ್‍ಡೌನ್ ಘೋಷಣೆ ಆಗಿದ್ದ ಸಂದರ್ಭದಲ್ಲಿ ಕೈಗಾರಿಕಾ ಚಟುವಟಿಕೆಗಳ ಸುಗಮ ಕಾರ್ಯಾಚರಣೆಗೆ ರಾಜ್ಯ ಸರಕಾರ ಕೈಗೊಂಡ ಕ್ರಮಗಳ ಕುರಿತ ಚಿತ್ರ ‘ರೆಸಿಲಿಯಂಟ್ ಕರ್ನಾಟಕ’ವನ್ನು ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಬುಧವಾರ ಬಿಡುಗಡೆ ಮಾಡಿದರು.
ಕಳೆದ 8 ತಿಂಗಳಿಂದೀಚೆಗೆ ಇಡೀ ಜಗತ್ತು ಬದಲಾಗಿದೆ. ಕೊವಿಡ್ ವಿರುದ್ಧದ ಹೋರಾಟದ ಜತೆಗೆ, ಆರ್ಥಿಕತೆಗೆ ಹೊಡೆತ ಬೀಳದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಕೊವಿಡ್ ಸಮಯದಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಕೊರತೆ ಆಗದಂತೆ ಎಚ್ಚರ ವಹಿಸಲಾಗಿತ್ತು. ಈ ಎಲ್ಲ ವಿಷಯಗಳನ್ನು ಚಿತ್ರ ಒಳಗೊಂಡಿದೆ ಎಂದು ಸಚಿವರು ತಿಳಿಸಿದರು.
ಲಾಕ್‍ಡೌನ್ ಇದ್ದಾಗಲೂ ಉತ್ಪಾದನೆಗೆ ತೊಡಕಗಾದಂತೆ ಉದ್ಯಮಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಾಗಿತ್ತು. ಜನ ಜೀವನ ಹಾಗೂ ಆರ್ಥಿಕತೆ ನಡುವೆ ಸಮತೋಲನ ಕಾಯ್ದುಕೊಂಡಿದ್ದೇವೆ. ಹಾಗಾಗಿಯೇ ಕರ್ನಾಟಕ ಈಗಲೂ ಹೂಡಿಕೆದಾರರ ಮೆಚ್ಚಿನ ತಾಣ. ಕೈಗಾರಿಕಾ ಅಭಿವೃದ್ಧಿಯಲ್ಲಿ ಉತ್ತಮ ಸಾಧನೆ ಮಾಡಿರುವ ರಾಜ್ಯ ನಮ್ಮದು. ಹಲವು ವಲಯಗಳಲ್ಲಿ ನಾವು ಮುಂಚೂಣಿ ಸಾಧಿಸಿದ್ದೇವೆ ಎಂದರು.
ಹೂಡಿಕೆದಾರರನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ, ಹೊಸ ಕೈಗಾರಿಕಾ ನೀತಿ 2020-2025 ಪರಿಚಯಿಸಿದೆ. ಜತೆಗೆ ಕಾರ್ಮಿಕ ಕಾನೂನಿನಲ್ಲಿ ತಂದಿರುವ ಸುಧಾರಣೆಗಳು, ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಹೊಸ ನೀತಿ ನೆರವಾಗಲಿದೆ. ಆರ್ಥಿಕತೆ ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುವುದು ನಮ್ಮ ಸರಕಾರದ ಮೊದಲ ಆದ್ಯತೆ. ಕೊವಿಡ್ ನಡುವೆಯೂ ಆರ್ಥಿಕ ಚಟುವಟಿಕೆಗಳನ್ನು ಬೆಂಬಲಿಸುವ ಮೂಲಕ ಆರ್ಥಿಕ ಪುನಶ್ಚೇತನಗೊಳಿಸಲು ರಾಜ್ಯ ಹಲವಾರು ಕ್ರಮಗಳನ್ನ ಕೈಗೊಂಡಿದೆ. ಹೂಡಿಕೆ ಸ್ನೇಹಿ ನೀತಿ ಹಾಗೂ ಪೂರಕ ಸೌಲಭ್ಯ, ಭತ್ಯೆ ಒದಗಿಸುವ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಕಂಪನಿಗಳನ್ನು ಆಹ್ವಾನಿಸುತ್ತೇವೆ ಎಂದು ಸಚಿವರು ತಿಳಿಸಿದರು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿ, ಲಾಕ್‍ಡೌನ್ ಸಮಯದಲ್ಲಿ ಕೈಗಾರಿಕೆಗಳ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸರಕಾರ ಕೈಗೊಂಡ ಕ್ರಮಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಅಗತ್ಯ ವಸ್ತುಗಳ ಉತ್ಪಾದಿಸುವ ಕೈಗಾರಿಕೆಗಳಿಗೆ ಸರಬರಾಜು ಸರಪಳಿಯು ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದೆ. ಕೋವಿಡ್ ಆರಂಭಿಕ ದಿನಗಳಲ್ಲೂ ರಾಜ್ಯ ಸರಕಾರ ಏರೋಸ್ಪೇಸ್ ಮತ್ತು ರಕ್ಷಣಾ ಸಂಸ್ಥೆಗಳ ಕಾರ್ಯಾಚರಣೆಗೆ ಅಗತ್ಯ ಬೆಂಬಲ ಒದಗಿಸಿತ್ತು ಎಂದರು.
ಕೈಗಾರಿಕಾಭಿವೃದ್ದಿ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ರೇವಣ್ಣಗೌಡ, ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ, ಎಫ್‍ಕೆಸಿಸಿಐ ಅಧ್ಯಕ್ಷ ಪೆರಿಕಲ್ ಸುಂದರ್, ಜಿಇ ಮುಖ್ಯಸ್ಥ ಮಹೇಶ್ ಕಪ್ರಿ, ವೊಲ್ವೊ ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ, ವಿಸ್ಟ್ರಾನ್ ವ್ಯವಸ್ಥಾಪಕ ನಿರ್ದೇಶಕ ಸುದಿಪೆÇ್ತೀ ಸಭೆಯಲ್ಲಿ ಪಾಲ್ಗೊಂಡಿದ್ದರು.
0 comments:
Post a Comment