ಅಬುಧಾಬಿ, ನ. 09, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ದ್ವಿತೀಯ ಕ್ವಾಲಿಫಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 17 ರನ್‍ಗಳ ಅಂತರದಲ್ಲಿ ಸೋಲಿಸುವ ಮೂಲಕ ಐಪಿಎಲ್-2020ಯ ಫೈನಲ್‍ಗೆ ಲಗ್ಗೆ ಇಟ್ಟಿದೆ. ಮಂಗಳವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಡೆಲ್ಲಿ ಎದುರಿಸಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶಿಖರ್ ಧವನ್ ಮತ್ತು ಶಿಮ್ರಾನ್ ಹೆಟ್ಮಿಯರ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 189 ರನ್ ಪೇರಿಸಿತ್ತು. ಗುರಿ ಬೆನ್ನಟ್ಟಿದ ಸನ್‍ರೈಸರ್ಸ್ ಹೈದರಾಬಾದ್ ತಂಡ ತೀವ್ರ ಪೈಪೋಟಿ ನೀಡಿತಾದರೂ ರಬಾಡಾ ಹಾಗೂ ಮಾರ್ಕಸ್ ಸ್ಟೊಯಿನಿಸ್ ದಾಳಿಗೆ ಸಿಲುಕಿ 8 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್ ಹಂತಕ್ಕೆ ತಲುಪಿದೆ. ಕಳೆದ 13 ಐಪಿಎಲ್ ಆವೃತ್ತಿಗಳಲ್ಲೂ ಡೆಲ್ಲಿ ತಂಡ ಆಡಿದ್ದರೂ ಫೈನಲ್ ಮತದವರೆಗೆ ಇದುವರೆಗೂ ತಲುಪಿರಲಿಲ್ಲ. ಪ್ರವೇಶ ಮಾಡಿರಲಿಲ್ಲ. ಈ ಬಾರಿ ಡೆಲ್ಲಿ ತಂಡದ ಫೈನಲ್ ಪ್ರವೇಶಿಸುವ ಕನಸು ನನಸಾಗಿದೆ.
ಡೆಲ್ಲಿ ವೇಗಿಗಳಾದ ಮಾರ್ಕಸ್ ಸ್ಟೊಯಿನಿಸ್, ಕಗಿಸೊ ರಬಾಡಾ ಉತ್ತಮ ದಾಳಿ ಸಂಘಟಿಸಿದರು. ರಬಾಡಾ 4 ಓವರ್ ಬೌಲ್ ಮಾಡಿ 29 ರನ್ ನೀಡಿ 4 ವಿಕೆಟ್ ಕಿತ್ತರೆ, ಸ್ಟೋಯಿನಿಸ್ 3 ಓವರ್ ಬೌಲ್ ಮಾಡಿ 26 ರನ್ ನೀಡಿ 3 ವಿಕೆಟ್ ಕಿತ್ತರು. ರಬಾಡಾ ಇನ್ನಿಂಗ್ಸಿನ 19ನೇ ಓವರಿನಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ ಹೈದ್ರಾಬಾದ್ ಬೆನ್ನೆಲುಬು ಮುರಿದರು.
ಡೆಲ್ಲಿ ನೀಡಿದ 189 ರನ್‍ಗಳ ಬೃಹತ್ ಮೊತ್ತ ಬೆನ್ನಟ್ಟಿದ ಸನ್‍ರೈಸರ್ಸ್ ಹೈದರಾಬಾದ್ ತಂಡದಿಂದ ನಾಯಕ ಡೇವಿಡ್ ವಾರ್ನರ್ ಮತ್ತು ಪ್ರಿಯಮ್ ಗರ್ಗ್ ಕಣಕ್ಕಿಳಿದರು. ಆದರೆ ಡೆಲ್ಲಿ ವೇಗಿ ಕಗಿಸೊ ರಬಾಡಾ ನಾಯಕ ಡೇವಿಡ್ ವಾರ್ನರ್ ಅವರನ್ನು ಎರಡನೇ ಓವರಿನ ಮೊದಲ ಎಸೆತದಲ್ಲೇ ಔಟ್ ಮಾಡಿ ಹೈದರಾಬಾದ್‍ಗೆ ಆರಂಭಿಕ ಆಘಾತ ನೀಡಿದ್ದರು. ನಂತರ ಜೊತೆಯಾದ ಮನೀಶ್ ಪಾಂಡೆ ಮತ್ತು ಪ್ರಿಯಮ್ ಗರ್ಗ್ ಸ್ಫೋಟಕ ಆಟಕ್ಕೆ ಮುಂದಾದರು.
ಆದರೆ 4ನೇ ಓವರಿನ 4ನೇ ಎಸೆತದಲ್ಲಿ 17 ರನ್ ಸಿಡಿಸಿದ್ದ ಪ್ರಿಯಮ್ ಗರ್ಗ್ ಮಾರ್ಕಸ್ ಸ್ಟೊಯಿನಿಸ್‍ಗೆ ಕ್ಲೀನ್ ಬೌಲ್ಡ್ ಆದರು. ನಂತರ ಇದೇ ಓವರಿನಲ್ಲಿ 21 ರನ್ ಹೊಡೆದಿದ್ದ ಮನೀಶ್ ಪಾಂಡೆ ಕೂಡ ಬಲಿಯಾದರು. ನಂತರ ಜೊತೆಯಾದ ಕೇನ್ ವಿಲಿಯಮ್ಸನ್ ಮತ್ತು ಜೇಸನ್ ಹೋಲ್ಡರ್ 46 ರನ್‍ಗಳ ಜೊತೆಯಾಟವಾಡಿದರು. ಆದರೆ 11 ನೇ ಓವರಿನ ನಾಲ್ಕನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಜೇಸನ್ ಹೋಲ್ಡರ್ ಅವರು ಕ್ಯಾಚ್ ಔಟ್ ಆದರು.
ನಂತರ ಜೊತೆಯಾದ ಕೇನ್ ವಿಲಿಯಮ್ಸನ್ ಮತ್ತು ಅಬ್ದುಲ್ ಸಮದ್ ಐದನೇ ವಿಕೆಟ್‍ಗೆ ಅರ್ಧಶತಕದ ಜೊತೆಯಾಟವಾಡಿದರು. ಆದರೆ 16ನೇ ಓವರಿನ ನಾಲ್ಕನೇ ಎಸೆತದಲ್ಲಿ 45 ಬಾಲಿಗೆ 67 ರನ್ ಬಾರಿಸಿದ್ದ ಕೇನ್ ವಿಲಿಯಮ್ಸನ್ ಅವರು ಮಾರ್ಕಸ್ ಸ್ಟೊಯಿನಿಸ್ ಅವರಿಗೆ ಬಲಿಯಾದರು. ನಂತರದ ಎಸೆತದಲ್ಲಿ 16 ಎಸೆತಗಳಲ್ಲಿ 33 ರನ್ ಸಿಡಿಸಿ ಆಡುತ್ತಿದ್ದ ಅಬ್ದುಲ್ ಸಮದ್ ಕೂಡಾ ಔಟ್ ಆದರು. ಇವರ ಬೆನ್ನಲ್ಲೇ ರಶೀದ್ ಖಾನ್ ಕೂಡಾ ಔಟ್ ಆದರು.
ಒಂದು ಹಂತದಲ್ಲಿ ಹೈದರಾಬಾದ್ 4 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿ ಗೆಲುವಿನತ್ತ ಧಾವಿಸಿತ್ತು. ಆದರೆ 16.5 ಓವರಿನಲ್ಲಿ ಕೇನ್ ವಿಲಿಯಮ್ಸನ್ ಔಟ್ ಆಗುವುದರೊಂದಿಗೆ ಪತನ ಆರಂಭವಾಯಿತು. 21 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡು ಪಂದ್ಯವನ್ನು ಕೈ ಚೆಲ್ಲಿತು. ಈ ಮೂಲಕ ಡೆಲ್ಲಿ ಫೈನಲ್ ಹಂತ ಪ್ರವೇಶಿಸಿತು.
0 comments:
Post a Comment