ಬಂಟ್ವಾಳ, ನ 07, 2020 (ಕರಾವಳಿ ಟೈಮ್ಸ್) : ಕೊನೆ ಕ್ಷಣದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಪ್ರತಿಷ್ಠಿತ ಬಂಟ್ವಾಳ ಪುರಸಭೆಯಲ್ಲಿ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಎರಡೂ ಹುದ್ದೆಗಳೂ ಕಾಂಗ್ರೆಸ್ ಪಾಲಾಗಿವೆ.
ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಹಾಗೂ ಉಪಾಧ್ಯಕ್ಷರಾಗಿ ಜೆಸಿಂತಾ ಡಿ’ಸೋಜ ಅವರು ತಲಾ 16 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. 2018 ರಲ್ಲಿ ಇಲ್ಲಿನ ಪುರಸಭೆಗೆ ನಡೆದ ಚುನಾವಣೆಯಲ್ಲಿ ಒಟ್ಟು 27 ಸ್ಥಾನಗಳ ಪೈಕಿ ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದುಕೊಂಡು ಅತಿದೊಡ್ಡ ಪಕ್ಷವಾಗಿ ಮೂಡಿ ಬಂದಿತ್ತು. ಬಿಜೆಪಿ 11 ಹಾಗೂ ಎಸ್‍ಡಿಪಿಐ ಪಕ್ಷ 4 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು.
ಶನಿವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆ ಚುನಾವಣೆಯಲ್ಲಿ ಮೂರು ಪಕ್ಷಗಳ ಉಮೇದುವಾರರು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಶರೀಫ್ ಶಾಂತಿಅಂಗಡಿ, ಬಿಜೆಪಿಯಿಂದ ಎ ಗೋವಿಂದ ಪ್ರಭು ಹಾಗೂ ಎಸ್‍ಡಿಪಿಐ ಪಕ್ಷದಿಂದ ಮೂನಿಶ್ ಅಲಿ ಬಂಟ್ವಾಳ ಅವರು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಹುದ್ದೆಗೆ ಕಾಂಗ್ರೆಸ್ ಪಕ್ಷದಿಂದ ಜೆಸಿಂತಾ ಡಿ’ಸೋಜ ಹಾಗೂ ಬಿಜೆಪಿಯಿಂದ ಮೀನಾಕ್ಷಿ ಗೌಡ ಅವರು ಮೀಸಲಾತಿಯಂತೆ ನಾಮಪತ್ರ ಸಲ್ಲಿಸಿದ್ದು, ಎಸ್‍ಡಿಪಿಐ ಪಕ್ಷದಲ್ಲಿ ಮೀಸಲಾತಿ ಪ್ರಕಾರ ಅಭ್ಯರ್ಥಿ ಇಲ್ಲದ್ದರಿಂದ ನಾಮಪತ್ರ ಸಲ್ಲಿಸಲಾಗಿರಲಿಲ್ಲ. ಕೊನೆ ಕ್ಷಣದಲ್ಲಿ ಎಸ್‍ಡಿಪಿಐ ಅಧ್ಯಕ್ಷ ಆಕಾಂಕ್ಷಿ ಮೂನಿಶ್ ಅಲಿ ನಾಮಪತ್ರ ವಾಪಾಸು ಪಡೆದಿದ್ದು, ಕೈ-ಕಮಲ ನಡುವೆ ನೇರ ಸ್ಪರ್ಧೆ ನಡೆಯಿತು.
ಚುನಾವಣಾ ಪ್ರಕ್ರಿಯೆಯಲ್ಲಿ ಪುರಸಭೆಗೆ ಮೂರೂ ಪಕ್ಷಗಳಿಂದ ಆಯ್ಕೆಯಾಗಿದ್ದ ಎಲ್ಲ 27 ಸದಸ್ಯರುಗಳ ಸಹಿತ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರುಗಳು ಭಾಗವಹಿಸಿದ್ದರು. ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿದ್ದು, ಕಾಂಗ್ರೆಸ್ ಅಧ್ಯಕ್ಷ-ಉಪಾಧ್ಯಕ್ಷ ಉಮೇದುವಾರರ ಪರವಾಗಿ ಕಾಂಗ್ರೆಸ್ಸಿನ 12 ಮಂದಿ ಸದಸ್ಯರು ಹಾಗೂ ಎಸ್‍ಡಿಪಿಐ ಪಕ್ಷದ 4 ಮಂದಿ ಸದಸ್ಯರುಗಳು ಕೂಡಾ ಮತ ಚಲಾಯಿಸಿದ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿಗಳು ತಲಾ 16 ಮತಗಳನ್ನು ಪಡೆದುಕೊಳ್ಳುವ ಮೂಲಕ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದರು. ಈ ಮೂಲಕ ಬಂಟ್ವಾಳ ಪುರಸಭೆಯ ಚುಕ್ಕಾಣಿಯನ್ನು ಕಾಂಗ್ರೆಸ್ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಬಿಜೆಪಿ ಪಕ್ಷದ ಅಭ್ಯರ್ಥಿಗಳು 11 ಮಂದಿ ಸದಸ್ಯರು ಹಾಗೂ ಎಂಪಿ, ಎಂಎಲ್‍ಎ ಅವರ ಮತ ಸೇರಿ ಒಟ್ಟು ತಲಾ 13 ಮತಗಳನ್ನು ಮಾತ್ರ ಪಡೆದುಕೊಂಡು ಸೋಲನುಭವಿಸಿದರು.
0 comments:
Post a Comment