ದುಬೈ, ಅಕ್ಟೋಬರ್ 14, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಸನ್‍ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ ಸಿಎಸ್‍ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಆಕ್ರೋಶದ ನಡತೆಗೆ ವೈಡ್ ಸೂಚನೆ ನೀಡಲು ಮುಂದಾದ ಅಂಪೈರ್ ಬಳಿಕ ತೀರ್ಮಾನ ಬದಲಿಸಿದ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಂದ ಭಾರೀ ಟೀಕೆ, ವಿಮರ್ಶೆಗಳು ಕೇಳಿ ಬರಲಾರಂಭಿಸಿದೆ.
ಸನ್‍ರೈಸರ್ಸ್ ಹೈದರಾಬಾದ್ ವಿಜಯಕ್ಕೆ ಕೊನೆಯ 2 ಓವರ್‍ಗಳಲ್ಲಿ 27 ರನ್‍ಗಳ ಅಗತ್ಯವಿತ್ತು. 18ನೇ ಓವರ್‍ನಲ್ಲಿ 19 ರನ್ ಗಳಿಸಿದ್ದ ಎಸ್‍ಆರ್‍ಎಚ್‍ಗೆ ಇದು ಕಷ್ಟದ ಸಂಗತಿಯಾಗಿರಲಿಲ್ಲ. ಶಾರ್ದೂಲ್ ಠಾಕೂರ್ ಎಸೆದ 19ನೇ ಓವರ್‍ನ ಮೊದಲನೇ ಎಸೆತದಲ್ಲಿ ಮೂರು ರನ್ ಬಂದಿತ್ತು. 2ನೇ ಎಸೆತ ಕೂಡಾ ವೈಡ್ ಆಗಿತ್ತು. ಅಂಪೈರ್ ರೀಫೆಲ್ ಅವರು ಈ ಎಸೆತ ವೈಡ್ ಎಂಬ ಘೋಷಣೆ ನೀಡಲು ಮುಂದಾಗಿ ತಿರುಗಿ ತಮ್ಮ ಕೈಗಳನ್ನು ಬದಿಗೆ ಚಾಚುವ ಪ್ರಯತ್ನ ನಡೆಸಿದ್ದು ಈ ವೇಳೆ ಚೆನ್ನೈ ತಂಡದ ನಾಯಕ ಧೋನಿ ವಿಕೆಟ್ ಹಿಂದುಗಡೆ ಆಕ್ರೋಶಭರಿತರಾಗಿ ಅಂಪೈರ್ ಕಡೆ ನೋಡಿದ್ದಾರೆ. ಈ ಸಂದರ್ಭ ಅಂಪೈರ್ ಅವರು ವೈಡ್ ಸಿಗ್ನಲ್ ನೀಡಲು ಮುಂದಾಗಿದ್ದ ತಮ್ಮ ಕೈಗಳನ್ನು ಅರ್ಧದಲ್ಲೇ ಕೆಳಕ್ಕೆ ಬಿಟ್ಟಿದ್ದರು.
ಈ ಒಂದು ಘಟನೆ ಇದೀಗ ಕ್ರಿಕೆಟ್ ಅಭಿಮಾನಿ ಲೋಕದಲ್ಲಿ ವ್ಯಾಪಕ ಆಕ್ರೋಶ, ವಿಮರ್ಶೆ, ಟೀಕೆಗೆ ಗುರಿಯಾಗಿದೆ. ಚೆನ್ನೈ ನಾಯಕ ಧೋನಿಯವರಂತೂ ಅಭಿಮಾನಿಗಳಿಂದ ಇನ್ನಷ್ಟು ಟೀಕೆಗೆ ಗುರಿಯಾಗಿದ್ದಾರೆ. ವೈಡ್ ವಿಚಾರವಾಗಿ ಎಂಎಸ್ ಧೋನಿ ಅಂಪೈರ್ ಮೇಲೆ ತೋರಿದ ಪ್ರಭಾವದ ನಡೆಯನ್ನು ಅಭಿಮಾನಿಗಳು ಬಲವಾಗಿ ಖಂಡಿಸಿದ್ದಾರೆ ಹಾಗೂ ಸಿಎಸ್‍ಕೆ ಫ್ರಾಂಚೈಸಿಯನ್ನು ರದ್ದು ಮಾಡಿ ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಜರೆದಿದ್ದಾರೆ.
ಈ ಒಂದು ವೈಡ್ ಎಸೆತದ ತೀರ್ಮಾನ ಹಿಂತೆಗೆದ ಬಳಿಕ ಹೈದರಾಬಾದ್ ತಂಡ ಮಾನಸಿಕವಾಗಿ ಕುಗ್ಗಿದ ಪರಿಣಾಮ ಪಂದ್ಯವನ್ನು ಚೆನ್ನೈ ಸುಲಭ ಜಯ ಸಾಧಿಸಿದೆ ಎಂದು ಕ್ರಿಕೆಟ್ ಪ್ರೇಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
0 comments:
Post a Comment