ಬಂಟ್ವಾಳ, ಅ. 19, 2020 (ಕರಾವಳಿ ಟೈಮ್ಸ್) : ಹಾಸನ ಮೂಲದ ಕುಮಾರ್ ಎಂಬಾತನ ಸಾಲದ ಹೊರೆಯಿಂದ ಬೇಸತ್ತು ಸೋಮವಾರ ಬೆಳಿಗ್ಗೆ ಪಾಣೆಮಂಗಳೂರು ಸಮೀಪದ ಗೂಡಿನಬಳಿ ನೇತ್ರಾವತಿ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಈತನನ್ನು ಗಮನಿಸಿದ ಗೂಡಿನಬಳಿ ಪರಿಸರದ ಈಜುಪಟು ಯುವಕರು ನದಿಗೆ ಧುಮುಕಿ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಾಸನ ನಿವಾಸಿ ಖಾಸಗಿ ಬಸ್ಸು ಚಾಲಕನಾಗಿ ದುಡಿಯುವ ಅವಿವಾಹಿತ ನೌಕರ ಕುಮಾರ್ (27) ಎಂಬಾತ ತನ್ನ ಕುಟುಂಬದ ಉದ್ದೇಶಕ್ಕಾಗಿ ಬ್ಯಾಂಕಿನಲ್ಲಿ ಸಾಲ ಮಾಡಿಕೊಂಡಿದ್ದು, ಲಾಕ್‍ಡೌನ್ ಕಾರಣದಿಂದ ಆರ್ಥಿಕ ಸ್ಥಿತಿ ಹದಗೆಟ್ಟ ಪರಿಣಾಮ ಸಾಲವನ್ನು ನಿಭಾಯಿಸಲಾಗದೆ ಮನನೊಂದು ಸೋಮವಾರ ಬೆಳಿಗ್ಗೆ ಬಂಟ್ವಾಳಕ್ಕೆ ಬಂದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕುಮಾರ್ ನದಿಗೆ ಹಾರಿದ್ದನ್ನು ಕಂಡ ಸ್ಥಳೀಯ ಗೂಡಿನಬಳಿ ಈಜುಪಟು ಯುವಕರಾದ ಮುಹಮ್ಮದ್, ಶಿಹಾಬ್, ಸ್ವಾಲಿ ಅವರು ನದಿಗೆ ಧುಮುಕಿ ಆತನನ್ನು ರಕ್ಷಿಸಿ ದೋಣಿ ಮೂಲಕ ಆತನನ್ನು ದಡಕ್ಕೆ ಕರೆ ತಂದಿದ್ದು, ಬಳಿಕ ಸತ್ತಾರ್ ಅವರ ಅಟೋ ರಿಕ್ಷಾದಲ್ಲಿ ಆತನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment