ಬಂಟ್ವಾಳ ವೃತ್ತ ವ್ಯಾಪ್ತಿಯ ಪೊಲೀಸರಿಗೆ ಸವಾಲಾದ ಪ್ರಕರಣ : ಬೇಧಿಸಲು ಪೊಲೀಸರ ಕಾರ್ಯಾಚರಣೆ
ವಿಟ್ಲ, ಅ. 09, 2020 (ಕರಾವಳಿ ಟೈಮ್ಸ್) : ಇಲ್ಲಿಗೆ ಸಮೀಪದ ಮೇಗಿನಪೇಟೆಯ ಒಂಟಿ ಮಹಿಳೆ ಇರುವ ಮನೆಗೆ ನುಗ್ಗಿದ ಕಳ್ಳರು ಮಹಿಳೆಯ ಮೇಲೆ ಹಲ್ಲೆ ನಡೆಸಿ, ಕೈ ಕಾಲು ಕಟ್ಟಿ ಹಾಕಿ ದರೋಡೆ ಮಾಡಿರುವ ಘಟನೆ ಶುಕ್ರವಾರ ಬೆಳಗ್ಗಿನ ಜಾವ ನಡೆದಿದೆ.
ಶುಕ್ರವಾರ ಬೆಳಗ್ಗಿನ ಜಾವ ಕಳ್ಳರು ಲಲಿತಾ ಅವರ ಮನೆಯ ಮುಂಬಾಗಿಲು ಮುರಿದು ಒಳನುಗ್ಗಿದ್ದು, ಲಲಿತಾ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಚಿನ್ನಾಭರಣ ಹಾಗೂ ಹಣಕ್ಕಾಗಿ ಮನೆಯಿಡೀ ಹುಡುಕಾಟ ನಡೆಸಿದ್ದಾರೆ. ಮನೆಯಲ್ಲಿ ಏನೂ ದೊರೆಯದೆ ಇದ್ದಾಗ ಬೆಳ್ಳಿಯ ಸರವೊಂದು ಮಾತ್ರ ದೊರೆತಿದ್ದು, ಅದನ್ನೇ ಎಗರಿಸಿಕೊಂಡು ಪರಾರಿಯಾಗಿದ್ದಾರೆ. ಲಲಿತಾ ಒಂಟಿಯಾಗಿ ಮನೆಯಲ್ಲಿರುವ ಬಗ್ಗೆ ತಿಳಿದವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಬಗ್ಗೆ ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ವಿಟ್ಲ ಪೆÇಲೀಸ್ ಉಪನಿರೀಕ್ಷಕ ವಿನೋದ್ ಕುಮಾರ್ ರೆಡ್ಡಿ ನೇತೃತ್ವದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯವಾಗಿರುವ ಸೀಸಿ ಟಿವಿ ಫೂಟೇಜ್‍ಗಳನ್ನು ಪಡೆದುಕೊಂಡಿರುವ ಪೊಲೀಸರು ಕಳ್ಳರ ಭೇಟೆಗಾಗಿ ಬಲೆ ಬೀಸಿದ್ದಾರೆ.
ಮಂಗಳವಾರ ರಾತ್ರಿಯಷ್ಟೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಕಲ್ಲಡ್ಕ ಸಮೀಪದ ಅಮ್ಟೂರು ಮಸೀದಿ ಬಳಿ ನಿವಾಸಿ ಸುಲೈಮಾನ್ ಅವರ ಮನೆಗೆ ನುಗ್ಗಿದ್ದ ಕಳ್ಳರು ಸುಮಾರು 28 ಪವನ್ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಇದೀಗ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಒಂಟಿ ಮಹಿಳೆಯ ಮನೆ ಮೇಲೆ ಕಳ್ಳರ ಲಗ್ಗೆ ಪ್ರಕರಣ ನಡೆದಿದೆ. ಎರಡೂ ಪ್ರಕರಣಗಳನ್ನು ಸವಾಲಾಗಿ ಸ್ವೀಕರಿಸಿರುವ ಬಂಟ್ವಾಳ ವೃತ್ತ ವ್ಯಾಪ್ತಿಯ ಪೊಲೀಸರು ಬೇಧಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
0 comments:
Post a Comment