ಬಂಟ್ವಾಳ, ಅ. 07, 2020 (ಕರಾವಳಿ ಟೈಮ್ಸ್) : ಪಂಚಾಯತ್ ಪಿಡಿಒಗಳು ಸರಕಾರದ ಮನೆ ನಿವೇಶನಗಳನ್ನು ಮಂಜೂರು ಮಾಡುವ ಸಂದರ್ಭ ಕೂಲಂಕುಶವಾಗಿ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳನ್ನೇ ಆರಿಸಿಕೊಳ್ಳಿ ಎಂದು ಮಂಗಳೂರು ಶಾಸಕ ಯು ಟಿ ಖಾದರ್ ಕಿವಿಮಾತು ಹೇಳಿದರು.
ಬಂಟ್ವಾಳ ತಾ ಪಂ ಸಭಾಂಗಣದಲ್ಲಿ ಮಂಗಳವಾರ ಸಂಜೆ ಮಂಗಳೂರು ಕ್ಷೇತ್ರಕ್ಕೊಳಪಟ್ಟ ಗ್ರಾಮ ಪಂಚಾಯತ್ ಪಿಡಿಒಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪಿಡಿಒಗಳ ಮೇಲಿನ ಸಂಪೂರ್ಣ ವಿಶ್ವಾಸದಿಂದ ಶಾಸಕರಾದ ನಾವು ಮೇಲಿಂದ ಮೇಲೆ ಮಾತ್ರ ನೋಡಿಕೊಂಡು ಸಹಿ ಮಾಡುತ್ತೇವೆ. ಇಂತಹ ಸಂದರ್ಭಗಳಲ್ಲಿ ಅರ್ಹ ಫಲಾನುಭವಿಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಬಾರದು ಎಂದು ತಾಕೀತು ಮಾಡಿದರು.
ಗ್ರಾಮ ಪಂಚಾಯತಿಗಳಲ್ಲಿ ವಿತರಣೆಗೆ ಬಾಕಿ ಉಳಿದಿರುವ 94ಸಿ ಹಕ್ಕುಪತ್ರ ವಿತರಣೆ, ಪರಿಹಾರ ಧನ ವಿತರಣೆಯ ಕುರಿತು ತಾಲೂಕು ತಹಶೀಲ್ದಾರ್ ರಶ್ಮಿ ಅವರಿಂದ ಮಾಹಿತಿ ಪಡೆದ ಶಾಸಕರು ಅ 12 ರಂದು ಈ ಬಗ್ಗೆ ವಿತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇದೇ ವೇಳೆ ಸಜಿಪಪಡು, ಪಜೀರು ಹಾಗೂ ಕುರ್ನಾಡು ಗ್ರಾ ಪಂಗಳಿಗೆ ಸಂಬಂಧಿಸಿ ಒಬ್ಬರೇ ಆಡಳಿತಾಧಿಕಾರಿ ಇದ್ದು, ಅಲ್ಲಿನ ಡೋಂಗಲ್ ಗೊಂದಲದ ಕುರಿತು ಪಿಡಿಒಗಳು ಶಾಸಕರ ಗಮನ ಸೆಳೆದರು. ಈ ಬಗ್ಗೆ ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು.
15ನೇ ಹಣಕಾಸು ಯೋಜನೆಯ ಕ್ರೀಯಾ ಯೋಜನೆಯ ಅನ್ ಲೈನ್ ಫೀಡಿಂಗ್ ಹಾಗೂ ಸರಕಾರದ ಇತ್ತೀಚೆಗಿನ ಮಾರ್ಗಸೂಚಿ ಗೊಂದಲಗಳ ಕುರಿತು ಪಿಡಿಒಗಳು ಶಾಸಕರ ಗಮನಕ್ಕೆ ತಂದರು. ಈ ಬಗ್ಗೆ ಪಿಡಿಒಗಳಿಂದ ಸಮಗ್ರ ಮಾಹಿತಿ ಪಡೆದ ಶಾಸಕರು ಸುದೀರ್ಘ ಚರ್ಚಿಸಿದ ಬಳಿಕ ಇಒ ಅವರೊಂದಿಗೂ ಮಾತನಾಡಿ ಪರಿಹಾರ ಸೂಚಿಸಿದರು. ಇರಾ ಗ್ರಾ ಪಂ ನಿಕಟಪೂರ್ವಾಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಅವರು ಕೂಡಾ ಇದೇ ವೇಳೆ ಪಿಡಿಒಗಳ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು.
ಸಭೆಯಲ್ಲಿ ತಾ ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ತಾ ಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಹಶೀಲ್ದಾರ್ ರಶ್ಮಿ ಎಸ್ ಆರ್, ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಶಾಸಕರ ಆಪ್ತ ಕಾರ್ಯದರ್ಶಿ ಚಂದ್ರಶೇಖರ್ ಪಾತೂರು ಮೊದಲಾದವರು ಭಾಗವಹಿಸಿದ್ದರು.
0 comments:
Post a Comment