1977ರ ಬಿಹಾರದ ಬೆಲ್ಚಿ ಘಟನೆಗೆ ಹೋಲಿಸುತ್ತಿರುವ ಕೈ ನಾಯಕರು
ನವದೆಹಲಿ, ಅಕ್ಟೋಬರ್ 04, 2020 (ಕರಾವಳಿ ಟೈಮ್ಸ್) : ಹತ್ರಾಸ್ ಘಟನೆಯ ಸಂತ್ರಸ್ತ ಯುವತಿಯ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬಳಿ ಉತ್ತರ ಪ್ರದೇಶ ಪೊಲೀಸರು ಅವಮಾನಕಾರಿಯಾಗಿ ನಡೆದುಕೊಂಡ ಬಗ್ಗೆ ಸಾರ್ವತ್ರಿಕ ಟೀಕೆ, ಆಕ್ರೋಶ, ವಿಮರ್ಶೆಗಳು ಕೇಳಿಬಂದ ಹಿನ್ನಲೆಯಲ್ಲಿ ಪೊಲೀಸರು ಇಬ್ಬರು ನಾಯಕರ ಬಳಿ ಕ್ಷಮೆ ಕೋರಿದ್ದಾರೆ.
ಹತ್ರಾಸ್‍ಗೆ ಕಾಂಗ್ರೆಸ್ ನಾಯಕರು ತೆರಳುವ ವೇಳೆ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಘರ್ಷಣೆ ನಡೆದಿದ್ದು, ಈ ಸಂದರ್ಭ ನಾಯಕರ ಮೇಲೆ ಪೊಲೀಸರು ಕೈ ಮಾಡಿದ್ದರು. ಈ ಘಟನೆಯ ಹಿನ್ನೆಲೆಯಲ್ಲಿ ಇದೀಗ ಯುಪಿ ಹಿರಿಯ ಪೊಲೀಸ್ ಅಧಿಕಾರಿಗಳು ಇಬ್ಬರು ನಾಯಕರ ಬಳಿ ಕ್ಷಮೆ ಕೋರಿದ್ದು, ಘಟನೆಗೆ ಸಂಬಂಧಿಸಿ ತನಿಖೆಗೆ ಆದೇಶ ನೀಡಲಾಗಿದೆ ಎಂದಿದ್ದಾರೆ. ಸೆ. 30 ರಂದು ನಡೆದ ಸಂಘರ್ಷದ ಸಂದರ್ಭ ರಾಹುಲ್ ಗಾಂಧಿ ನೆಲಕ್ಕೆ ಬಿದ್ದಿದ್ದರು ಹಾಗೂ ಅ. 3 ರಂದು ನಡೆದ ಸಂಘರ್ಷದಲ್ಲಿ ಪುರುಷ ಪೊಲೀಸ್ ಅಧಿಕಾರಿ ಪ್ರಿಯಾಂಕಾ ಗಾಂಧಿಯವರ ಕುರ್ತಾ ಹಿಡಿದಿಳೆದಿದ್ದರು. ಈ ಎರಡೂ ಘಟನೆಗಳ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪೊಲೀಸರ ನಡೆಯನ್ನು ತೀವ್ರವಾಗಿ ಖಂಡಿಸಿದ್ದರಲ್ಲದೆ, ಯುಪಿ ಸರಕಾರವನ್ನು ತರಾಟೆಗೆಳೆದಿದ್ದರು. ಈ ಬಗ್ಗೆ ಶಿವಸೇನಾ ಸಂಸದ ಸಂಜಯ್ ರಾವತ್ ಕೂಡಾ ಯೋಗಿ ಸರಕಾರವನ್ನು ಝಾಡಿಸಿದ್ದರು.
1977ರ ಬಿಹಾರದ ಬೆಲ್ಚಿ ಘಟನೆಗೆ ಹೋಲಿಸುತ್ತಿರುವ ಕೈ ನಾಯಕರು
ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆಯನ್ನು ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ರಾಜಕೀಯ ವಿಶ್ಲೇಷಕರು 1977ರಲ್ಲಿ ಬಿಹಾರದ ಬೆಲ್ಚಿ ಘಟನೆಗೆ ಹೋಲಿಕೆ ಮಾಡಿ ವಿಶ್ಲೇಷಣೆ ನಡೆಸುತ್ತಿದ್ದಾರೆ.
1977 ರಲ್ಲಿ ಬಿಹಾರದ ಬೆಲ್ಚಿಯಲ್ಲಿ 10 ದಲಿತರು ಮೇಲ್ಜಾತಿಯ ಶ್ರೀಮಂತರಿಂದ ಕೊಲೆಯಾಗಿದ್ದರು. ಈ ಸಂದರ್ಭ ವಿರೋಧ ಪಕ್ಷದಲ್ಲಿದ್ದ ಇಂದಿರಾ ಗಾಂಧಿ ರೈಲು, ಜೀಪ್, ಟ್ರ್ಯಾಕ್ಟರ್ ಮತ್ತು ಆನೆ ಮೇಲೆ ಸವಾರಿ ನಡೆಸಿ ಬೆಲ್ಚಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿ ಮೊನ್ನೆ ಯುಪಿಯಲ್ಲಿ ನಡೆದಂತಹ ಘಟನೆಗಳೇ ನಡೆದಿತ್ತು ಎಂದು ನೆನಪಿಸಿರುವ ಕೈ ನಾಯಕರು ಹಾಗೂ ರಾಜಕೀಯ ವಿಮರ್ಶಕರು ಇಂದಿರಾ ಭೇಟಿಯ ಬಳಿಕ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಅಮೋಘ ಗೆಲುವು ಸಾಧಿಸಿತ್ತು. ಅಲ್ಲದೆ 1980ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು ಎಂದು ವಿಶ್ಲೇಷಕರು ವಿಶ್ಲೇಷಣೆ ಮಾಡುತ್ತಾರೆ. ಕಾಂಗ್ರೆಸ್ ಹಿರಿಯ ನಾಯಕ ಓಮನ್ ಚಾಂಡಿ, ಇದು ಪ್ರಿಯಾಂಕಾ ಗಾಂಧಿಯವರ ಬೆಲ್ಚಿ ಘಟನೆ ಎಂದು ಬಣ್ಣಿಸಿದ್ದಾರೆ.
0 comments:
Post a Comment