ಟಿ-20 ಕ್ರಿಕೆಟ್‍ನಲ್ಲಿ ಸಿಕ್ಸರ್ ಹಾಗೂ ಬೌಂಡರಿಗಳ ಮೂಲಕವೇ 10 ಸಾವಿರ ರನ್ ಪೂರೈಸಿದ ವಿಶ್ವದ ಏಕೈಕ ಬ್ಯಾಟ್ಸ್‍ಮನ್
ದುಬೈ, ಅ. 16, 2020 (ಕರಾವಳಿ ಟೈಮ್ಸ್) : ವೆಸ್ಟ್ ಇಂಡೀಸ್ ತಂಡ ದೈತ್ಯ ಕ್ರಿಕೆಟ್ ಆಟಗಾರ ಕ್ರಿಸ್ ಗೇಲ್ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಅನಾರೋಗ್ಯದಿಂದ ಕ್ರಿಕೆಟ್‍ನಿಂದ ಕೊಂಚ ದೂರವಿದ್ದ ಗೇಲ್ ದುಬೈಯಲ್ಲಿ ನಡೆಯುತ್ತಿರುವ ಐಪಿಎಲ್ ಕೂಟದ ಗುರುವಾರದ ಪಂದ್ಯದಲ್ಲಿ ಮತ್ತೆ ಮೈದಾನಕ್ಕೆ ಇಳಿದು ಅಬ್ಬರಿಸಿದ್ದಾರೆ. ಈ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಪರ ಆಡುತ್ತಿರುವ ಕ್ರಿಸ್ ಗೇಲ್ ಗುರುವಾರದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಭರ್ಜರಿಯಾಗಿ ಬ್ಯಾಟ್ ಬೀಸಿ 5 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 45 ಎಸೆತಗಳಲ್ಲಿ 53 ರನ್‍ಗಳಿಸಿ ಕೊನೆಯ ಒಂದು ಎಸೆತ ಇರುವಾಗ ರನೌಟ್‍ಗೆ ಬಲಿಯಾಗಿದ್ದರು.
ಪಂದ್ಯದಲ್ಲಿ 5 ಸಿಕ್ಸರ್ ಹಾಗೂ ಒಂದು ಬೌಂಡರಿ ಭಾರಿಸಿದ್ದ ಗೇಲ್ ಟಿ-20 ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ದಾಟಿದ್ದಾರೆ. ಈ ಮೂಲಕ ಟಿ-20 ಇತಿಹಾಸದಲ್ಲೇ ಬೌಂಡರಿ ಹಾಗೂ ಸಿಕ್ಸರ್ ಮೂಲಕ 10 ಸಾವಿರ ರನ್ ಸಿಡಿಸಿದ ಏಕೈಕ ಬ್ಯಾಟ್ಸ್‍ಮ್ಯಾನ್ ಎಂಬ ಹೊಸ ದಾಖಲೆ ನಿರ್ಮಿಸಿ ಹಾಕಿದ್ದಾರೆ. ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿರುವ ಕ್ರಿಸ್ ಗೇಲ್ ತಮ್ಮ ವೃತ್ತಿ ಜೀವನದಲ್ಲಿ ಅಂತಾರಾಷ್ಟ್ರೀಯ ಮತ್ತು ಇತರ ಲೀಗ್‍ಗಳಿಂದ 397 ಟಿ-20 ಇನ್ನಿಂಗ್ಸ್‍ಗಳನ್ನು ಆಡಿದ್ದಾರೆ. ಇದರಲ್ಲಿ ಒಟ್ಟು 1,027 ಬೌಂಡರಿಗಳು ಮತ್ತು 983 ಸಿಕ್ಸರ್‍ಗಳನ್ನು ಭಾರಿಸುವ ಮೂಲಕ ಟಿ-20ಯಲ್ಲಿ 13,349 ರನ್‍ಗಳಿಸಿದ್ದಾರೆ. ಇದರಲ್ಲಿ 10,006 ರನ್ ಸಿಕ್ಸರ್ ಹಾಗೂ ಬೌಂಡರಿಗಳಿಂದಲೇ ಬಂದಿವೆ ಎನ್ನುವುದು ವಿಶೇಷ.
ಐಪಿಎಲ್‍ನಲ್ಲೂ ಗೇಲ್ ಹಲವಾರು ದಾಖಲೆ ಮಾಡಿದ್ದಾರೆ. 125 ಐಪಿಎಲ್ ಪಂದ್ಯಗಳಿಂದ 4,537 ರನ್ ಗಳಿಸಿ ಐಪಿಎಲ್‍ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪೈಕಿ 9ನೇ ಸ್ಥಾನದಲ್ಲಿದ್ದಾರೆ. 41.13 ಸರಾಸರಿಯಲ್ಲಿ 6 ಶತಕ ಮತ್ತು 29 ಅರ್ಧಶತಕ ಭಾರಿಸಿದ್ದಾರೆ. ಐಪಿಎಲ್‍ನಲ್ಲಿ 331 ಸಿಕ್ಸರ್ ಭಾರಿಸಿ ಅತೀ ಹೆಚ್ಚು ಸಿಕ್ಸರ್ ಭಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 6 ಶತಕ ಸಿಡಿಸಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್ ಮ್ಯಾನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿರುವ ಗೇಲ್ 175 ರನ್ ಹೊಡೆದು ಅತಿ ಹೆಚ್ಚು ವೈಯಕ್ತಿಕ ರನ್ ಗಳಿಕೆಯ ದಾಖಲೆಯನ್ನೂ ತನ್ನ ಹೆಸರಿನಲ್ಲಿ ಉಳಿಸಿಕೊಂಡಿದ್ದಾರೆ.
0 comments:
Post a Comment