ಬಂಟ್ವಾಳ, ಅ. 31, 2020 (ಕರಾವಳಿ ಟೈಮ್ಸ್) : ಇಲ್ಲಿಗೆ ಸಮೀಪದ ಬೈಪಾಸ್ ವಸ್ತಿ ಅಪಾರ್ಟ್‍ಮೆಂಟಿನಲ್ಲಿ ಅ 20 ರಂದು ನಡೆದ ಸುರೇಂದ್ರ ಭಂಡಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ 5 ವಿಶೇಷ ಪೊಲೀಸ್ ತಂಡ ಕೃತ್ಯದ ಹಿನ್ನಲೆ ಬಯಲಿಗೆಳೆಯುವಲ್ಲಿ ಸಫಲರಾಗಿದ್ದಾರೆ.
ಜಿಲ್ಲಾ ಎಸ್ಪಿ ಡಾ ಬಿ ಎಂ ಲಕ್ಷ್ಮಿಪ್ರಸಾದ್ ಹಾಗೂ ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿ’ಸೋಜ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಸಿಐ ಟಿ ಡಿ ನಾಗರಾಜ್, ಬಂಟ್ವಾಳ ನಗರ ಪಿಎಸ್ಸೈಗಳಾದ ಅವಿನಾಶ್ ಎಚ್ ಗೌಡ, ಕಲೈಮಾರ್, ಗ್ರಾಮಾಂತರ ಪಿಎಸ್ಸೈಗಳಾದ ಪ್ರಸನ್ನ ಎಂ ಸ್, ಸಂಜೀವ ಕೆ, ಬೆಳ್ತಂಗಡಿ ಠಾಣಾ ಪಿಎಸ್ಸೈ ನಂದಕುಮಾರ್, ವಿಟ್ಲ ಠಾಣಾ ಪಿಎಸ್ಸೈ ವಿನೋದ್ ರೆಡ್ಡಿ, ಬಂಟ್ವಾಳ ಟ್ರಾಫಿಕ್ ಪಿಎಸ್ಸೈ ರಾಜೇಶ್ ಕೆ ವಿ, ಬೆಳ್ತಂಗಡಿ ಟ್ರಾಫಿಕ್ ಪಿಎಸೈ ಕುಮಾರ್ ಕಾಂಬ್ಳೆ, ಡಿಎಸ್‍ಬಿ ಪಿಐಗಳಾದ ರವಿ ಬಿ ಎಸ್, ಡಿಸಿಐಬಿ ಪಿಐ ಚೆಲುವರಾಜ್ ಹಾಗೂ ಡಿಸಿಐಬಿ ಸಿಬ್ಬಂದಿಗಳು, ತಾಂತ್ರಿಕ ವಿಭಾಗದ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ಪೊಲೀಸ್ ತಂಡ ಈ ಪ್ರಕರಣ ಪತ್ತೆಯಲ್ಲಿ ತನಿಖೆ ನಡೆಸುತ್ತಿದೆ.
ಪ್ರಕರಣದಲ್ಲಿ ಆರೋಪಿ ತಾಲೂಕಿನ ಅಮ್ಟಾಡಿ ಗ್ರಾಮದ ಅಜೆಕಲ ನಿವಾಸಿ ವೇಣುಗೋಪಾಲ ಎಂಬವರ ಪುತ್ರ ಸತೀಶ್ ಕುಮಾರ್ (39) ಎಂಬಾತ ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದಾನೆ. ಆತನೊಂದಿಗೆ ಮತ್ತೋರ್ವ ವ್ಯಕ್ತಿ ಭಾಗಿಯಾಗಿರುವ ಬಗ್ಗೆ ತನಿಖೆ ವೇಳೆ ತಿಳಿದು ಬಂದಿರುತ್ತದೆ ಎಂದು ತಿಳಿಸಿರುವ ಪೊಲೀಸ್ ತಂಡ ಬಳಿಕ ಇಬ್ಬರನ್ನು ದಸ್ತಗಿರಿ ಮಾಡಲಾಗಿದ್ದು, ಮತ್ತೋರ್ವ ಆರೋಪಿ ಮಂಗಳೂರು ತಾಲೂಕು, ಬೊಂಡಂತಿಲ ಗ್ರಾಮದ, ನೀರುಮಾರ್ಗ ನಿವಾಸಿ ಆನಂದ ಎಂಬವರ ಪುತ್ರ ಗಿರೀಶ್ (28) ಎಂಬುದಾಗಿ ತನಿಖೆಯ ವೇಳೆ ತಿಳಿದು ಬಂದಿರುತ್ತದೆ. ಈತ ಕಿಶನ್ ಹೆಗ್ಡೆಯ ಆಪ್ತನಾಗಿರುತ್ತಾನೆ. ಪ್ರಕರಣದ ಪ್ರಮುಖ ಆರೋಪಿ ಸತೀಶ್ ಕುಮಾರ್‍ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸದ್ರಿ ಕೃತ್ಯವೆಸಗಲು ಪ್ರದೀಪ್ ಕುಮಾರ್ ಆಲಿಯಾಸ್ ಪಪ್ಪು, ಶರೀಪ್ ಆಲಿಯಾಸ್ ಸಯ್ಯದ್ ಶರೀಪ್, ವೆಂಕಪ್ಪ ಪೂಜಾರಿ ಆಲಿಯಾಸ್ ವೆಂಕಟೇಶ ಮತ್ತು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ಆಕಾಶಭವನ ಶರಣ್ ಎಂಬವರುಗಳು ಒಳಸಂಚು ನಡೆಸಿ ಕೃತ್ಯ ನಡೆಸಲು ಸೂಚಿಸಿರುವುದಾಗಿ ತಿಳಿಸಿರುತ್ತಾನೆ.
ಸದ್ರಿ ಆರೋಪಿಗಳನ್ನು ದಸ್ತಗಿರಿ ಮಾಡಿ ಹೆಚ್ಚಿನ ವಿಚಾರಣೆ ನಡೆಸಲಾಗಿ ಪ್ರದೀಪ್ ಕುಮಾರ್ ಆಲಿಯಾಸ್ ಪಪ್ಪು ಎಂಬವನು ಮೃತ ಸುರೇಂದ್ರ ಬಂಟ್ವಾಳ್ ಸ್ನೇಹಿತನಾಗಿದ್ದು, ಆತನಿಂದ ತನ್ನ ಚಿನ್ನದ ಅಂಗಡಿ ಉದ್ಯಮಕ್ಕಾಗಿ ಈ ಹಿಂದೆ ಹಣವನ್ನು ಪಡೆದಿದ್ದು ಅದರಲ್ಲಿ ಸುಮಾರು 7 ಲಕ್ಷ ರೂಪಾಯಿ ಹಣವನ್ನು ವಾಪಾಸ್ಸು ನೀಡಲು ಬಾಕಿಯಿರುತ್ತದೆ. ವಾಪಾಸ್ಸು ಹಿಂದಿರಿಗಿಸುವ ವಿಚಾರದಲ್ಲಿ ಈ ಕೃತ್ಯವನ್ನು ನಡೆಸಿರುವುದಾಗಿದೆ. ಅಲ್ಲದೇ ಕೃತ್ಯ ನಡೆಸಲು 2 ಲಕ್ಷ ರೂಪಾಯಿ ಹಣವನ್ನು ಆಕಾಶ್ ಭವನ ಶರಣನಿಗೆ ಆತನ ಪರಿಚಿತ ವ್ಯಕಿಯ ಮೂಲಕ ನೀಡಿರುತ್ತಾನೆ. ಸದ್ರಿ ಪರಿಚಿತ ವ್ಯಕ್ತಿಯ ದಸ್ತಗಿರಿಗೆ ಬಾಕಿಯಿರುತ್ತದೆ.
ಆರೋಪಿ ವೆಂಕಪ್ಪ ಪೂಜಾರಿ ಆಲಿಯಾಸ್ ವೆಂಕಟೇಶ ಎಂಬಾತನು ಕೂಡಾ ಮೃತ ಸುರೇಂದ್ರ ಬಂಟ್ವಾಳನಿಂದ ಹಣ ಪಡೆದಿದ್ದು ಸ್ವಲ್ಪ ಹಣವನ್ನು ನೀಡಲು ಬಾಕಿಯಿದ್ದು ಈ ಕಾರಣಕ್ಕಾಗಿ ಕೃತ್ಯ ನಡೆಸಲು ಆರೋಪಿ ಸತೀಶ್ ಕುಮಾರ್‍ಗೆ 90 ಸಾವಿರ ಹಣವನ್ನು ಮುಂಚಿತವಾಗಿ ನೀಡಿರುತ್ತಾನೆ. ಹಾಗೂ ಕೃತ್ಯದ ನಂತರ ಹೆಚ್ಚಿನ ಹಣವನ್ನು ನೀಡುವುದಾಗಿ ತಿಳಿಸಿರುತ್ತಾನೆ. ಆರೋಪಿ ಶರೀಪ್ ಆಲಿಯಾಸ್ ಸಯ್ಯದ್ ಶರೀಪ್ ಎಂಬಾತನು ಮೃತ ಸುರೇಂದ್ರ
ಬಂಟ್ವಾಳ್‍ನೊಂದಿಗೆ ವೈಯಕ್ತಿಕವಾಗಿ ವೈಮನಸ್ಸು ಹೊಂದಿದ್ದು ಈ ಕಾರಣಕ್ಕಾಗಿ ಕೃತ್ಯದಲ್ಲಿ ಸಹಕರಿಸಿರುತ್ತಾನೆ.
ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ಆರೋಪಿ ಶರಣ್ ಯಾನೆ ಆಕಾಶ್‍ಭವನ ಶರಣನಿಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಕೂಲಂಕುಷವಾಗಿ ವಿಚಾರಿಸಲಾಗಿ ಆತನು ಮೃತ ಸುರೇಂದ್ರ ಬಂಟ್ವಾಳನೊಂದಿಗೆ ವೈಯಕ್ತಿಕವಾಗಿ ದ್ವೇಷ ಹೊಂದಿದ್ದು, ಈ ಹಿನ್ನಲೆಯಲ್ಲಿ ಮೇಲಿನ ಆರೋಪಿಗಳೊಂದಿಗೆ ಸೇರಿಕೊಂಡು ಆರೋಪಿ ಗಿರೀಶನಿಗೆ ಕಿಶನ್ ಹೆಗ್ಡೆಯ ಹತ್ಯೆಗೆ ಪ್ರತೀಕಾರಕ್ಕಾಗಿ ಎಂದು ಪುಸಲಾಯಿಸಿ ಕೃತ್ಯ ಮಾಡಿಸಿ ನಂತರ ಕೊಲೆ ಮಾಡಿದ ಆರೋಪಿಗಳಿಗೆ ತಲೆ ಮರೆಸಿಕೊಳ್ಳಲು ದಿವ್ಯರಾಜ್, ಅನಿಲ್ ಪಂಪ್‍ವೆಲ್ ಮೂಲಕ ವಾಹನದ ವ್ಯವಸ್ಥೆಯನ್ನು ಮಾಡಿದ್ದು ಮತ್ತು ಬೆಳ್ತಂಗಡಿ ತಾಲೂಕು, ಉಜಿರೆ ನಿವಾಸಿ ರಾಮಸ್ವಾಮಿ ಎಂಬವರ ಪುತ್ರ ರಾಜೇಶ್ (33) ಎಂಬಾತನಿಂದ ಉಜಿರೆ ಹಾಗೂ ಅದರ ಪರಿಸರದಲ್ಲಿ ತಂಗಲು ವ್ಯವಸ್ಥೆ ಮಾಡಿಸಿರುತ್ತಾನೆ. ಹಾಗೂ ಕೃತ್ಯದಲ್ಲಿ ಸಿಕ್ಕ 50 ಸಾವಿರ ರೂಪಾಯಿ ಹಣ, ಆರೋಪಿಗಳ ಮೊಬೈಲ್ ಫೋನ್ ಇವನ ವಶದಲ್ಲಿದ್ದು ಆರೋಪಿಗಳು ತಪ್ಪಿಸಿಕೊಂಡು ಹೋಗಲು ತನ್ನ ಓಮ್ನಿ ವಾಹನವನ್ನು ನೀಡಿರುತ್ತಾನೆ. ಇವರೆಲ್ಲರನ್ನು ಕೂಡಾ ಪ್ರಕರಣದಲ್ಲಿ ದಸ್ತಗಿರಿ ಮಾಡಲಾಗಿರುತ್ತದೆ. ದಿವ್ಯರಾಜ್ ಎಂಬಾತನು ಪಂಪ್‍ವೆಲ್ ನಿವಾಸಿಯಾಗಿದ್ದು, 2017 ರಲ್ಲಿ ಬೆಂಜನಪದವಿನಲ್ಲಿ ನಡೆದ ಅಶ್ರಫ್ ಕಲಾಯಿ ಕೊಲೆ ಪ್ರಕರಣದ ಆರೋಪಿ ಕೂಡಾ ಆಗಿರುತ್ತಾನೆ ಹಾಗೂ ಕಿಶನ್ ಹೆಗ್ಡೆಯ ಆಪ್ತನಾಗಿರುತ್ತಾನೆ.
ಆರೋಪಿ ಶರಣ್ ಯಾನೆ ಆಕಾಶಭವನ ಶರಣ್ ಮೇಲೆ ಸುಮಾರು 20 ಪ್ರಕರಣಗಳು ದಾಖಲಾಗಿದ್ದು, ಮಂಗಳೂರು ದಕ್ಷಿಣ ಠಾಣೆಯಲ್ಲಿ 2, ಬರ್ಕೆ ಠಾಣೆಯಲ್ಲಿ 1, ಕಾವೂರು ಠಾಣೆಯಲ್ಲಿ 1 ಹಾಗೂ ಸುಳ್ಯ ಠಾಣೆಯಲ್ಲಿ 1 ಪ್ರಕರಣ ಸಹಿತ ಒಟ್ಟು 5 ಕೊಲೆ ಪ್ರಕರಣಗಳು ದಾಖಲಾಗಿರುತ್ತದೆ. ಈತ ಪ್ರಸ್ತುತ ಮಣಿಪಾಲ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತನಾಗಿ ಕಳೆದ 2 ವರ್ಷಗಳಿಂದ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರುವುದಾಗಿರುತ್ತದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ರೀತಿಯಲ್ಲಿ ಯೋಜಿತವಾಗಿ ತನಿಖೆ ಮುಂದುವರೆಸಿದ್ದು,
ಆರೋಪಿಗಳು ಹಣಕಾಸಿನ ಹಾಗೂ ವೈಯಕ್ತಿಕ ದ್ವೇಷದಿಂದ ಒಳಸಂಚು ನಡೆಸಿ ಕೃತ್ಯ ಎಸಗಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ ಎಂದು ತಿಳಿಸಿರುವ ಪೊಲೀಸರು ದಸ್ತಗಿರಿಯಾಗಿರುವ ಎಲ್ಲಾ ಆರೋಪಿಗಳು ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳು ಶ್ರಮಿಸುತ್ತಿದ್ದು ತನಿಖೆ ಮುಂದುವರೆದಿದೆ ಎಂದು ಜಿಲ್ಲಾ ಎಸ್ಪಿ ಡಾ ಲಕ್ಷ್ಮಿ ಪ್ರಸಾದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
0 comments:
Post a Comment