ಬಂಟ್ವಾಳ, ಅ. 25, 2020 (ಕರಾವಳಿ ಟೈಮ್ಸ್) : ತಾಲೂಕಿನ ರೌಡಿ ಶೀಟರ್ ಸುರೇಂದ್ರ ಬಂಟ್ವಾಳ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆತನ ಆಪ್ತ ಸ್ನೇಹಿತ ಬಂಟ್ವಾಳ ನಿವಾಸಿ ಸತೀಶ್ ಕುಲಾಲ್ ಹಾಗೂ ಮುಲ್ಕಿ ಸಮೀಪದ ಕಿನ್ನಿಗೋಳಿ ನಿವಾಸಿ ಗಿರಿ ಯಾನೆ ಗಿರೀಶ್ ಎಂಬವರನ್ನು ಬಂಟ್ವಾಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳು ಕೇರಳದಿಂದ ಮಂಗಳೂರು ಕಡೆ ಕಾರಿನಲ್ಲಿ ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಬಂಟ್ವಾಳ ಡಿವೈಎಸ್ಪಿ ನೇತೃತ್ವದ ಬಂಟ್ವಾಳ ಪೊಲೀಸರು ಕಾರನ್ನು ತಡೆದು ಆರೋಪಿಗಳನ್ನು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ದೃಢಪಡಿಸಿಲ್ಲ.
ಬಂಟ್ವಾಳ ಸಮೀಪದ ಭಂಡಾರಿ ಹಿತ್ಲು ನಿವಾಸಿ ಸುರೇಂದ್ರ ಭಂಡಾರಿ ಬಂಟ್ವಾಳ (39) ಅವರನ್ನು ಬಂಟ್ವಾಳ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಸಮೀಪದ ವಸ್ತಿ ವಸತಿ ಸಂಕೀರ್ಣದ ಕೋಣೆಯೊಂದರಲ್ಲಿ ಮಾರಕಾಯುಧಗಳಿಂದ ಕಡಿದು ಕೊಲೆಗೈದು ಪರಾರಿಯಾಗಿದ್ದು, ಅ. 20 ರಂದು ಮಧ್ಯಾಹ್ನ ಬೆಳಕಿಗೆ ಬಂದಿತ್ತು.
ಘಟನೆಯ ಬಳಿಕ ಸುರೇಂದ್ರನ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸತೀಶ್ ಕುಲಾಲ್ ಎಂಬಾತ ಆಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಸುರೇಂದ್ರನನ್ನು ನಾನೇ ಕೊಂದಿದ್ದು, ಹಿರಿಯಡ್ಕ ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರ ಎಂದುಕೊಂಡಿದ್ದನಲ್ಲದೆ ನಾನು ಪೊಲೀಸರಿಗೆ ಶರಣಾಗುವುದಾಗಿ ತಿಳಿಸಿದ್ದ. ಈ ಧ್ವನಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳ ಜಾಡು ಪತ್ತೆ ಹಚ್ಚುವಲ್ಲಿ ಕೊನೆಗೂ ಯಶಸ್ವಿಯಾಗಿದ್ದು, ಇಬ್ಬರನ್ನು ದಸ್ತಗಿರಿ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣದ ಹಿಂದೆ ಇನ್ಯಾರ್ಯಾರ ಕೈವಾಡ ಇದೆ ಎಂಬುದು ಪೊಲೀಸ್ ತನಿಖೆಯ ಬಳಿಕವಷ್ಟೆ ಹೊರಜಗತ್ತಿಗೆ ಗೊತ್ತಾಗಲಿದೆ.
0 comments:
Post a Comment