ಬಂಟ್ವಾಳ, ಅ. 31, 2020 (ಕರಾವಳಿ ಟೈಮ್ಸ್) : ಧುಮ್ಮುಕ್ಕಿ ಹರಿಯುವ ನದಿಯೊಂದಿಗೆ ಸೆಣಸಾಟ ನಡೆಸಿ ಹಲವ ಜೀವಕ್ಕೆ ಆಸರೆಯಾಗುವುದರ ಜೊತೆಗೆ ಸಾಹಸ, ಕ್ರೀಡೆ, ಕಲೆ ಮೊದಲಾದ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದ, ‘ನೇತ್ರಾವತಿ ವೀರ’ ಬಿರುದಾಂಕಿತ ಅಬ್ದುಲ್ ಸತ್ತಾರ್ ಗೂಡಿನಬಳಿ ಅವರ ಸಾಧನೆಗೆ ಕೊನೆಗೂ ಗೌರವ ಸಂದಿದೆ. ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಅವರ ಪಾಲಿಗೆ ಒಲಿದು ಬಂದಿದೆ.
ಭಾನುವಾರ (ನವೆಂಬರ್ 1 ರಂದು) ಮಂಗಳೂರಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಗಣ್ಯರಿಂದ ಪ್ರಶಸ್ತಿ ಸ್ವೀಕರಿಸುವರು. ನೇತ್ರಾವತಿ ನದಿಯಲ್ಲಿ ಮುಳುಗುತ್ತಿರುವವರನ್ನು ರಕ್ಷಿಸಿದ ಕಾರಣಕ್ಕೆ ಕೊಲ್ಯ ಸ್ವಾಮೀಜಿಗಳಿಂದ ‘ನೇತ್ರಾವತಿ ವೀರ’ ಎಂಬ ಬಿರುದು ಪಡೆದುಕೊಂಡ ಸತ್ತಾರ್ ಗೂಡಿನಬಳಿ ವೃತ್ತಿಯಲ್ಲಿ ರಿಕ್ಷಾ ಚಾಲಕ. ತನ್ನ ವೃತ್ತಿಯಲ್ಲೂ ನಿಯ್ಯತ್ತನ್ನು ಮೈಗೂಡಿಸಿಕೊಂಡಿರುವ ಇವರು ತನ್ನ ಅಟೋದಲ್ಲಿ ಪ್ರಯಾಣಿಕರಾಗಿ ಬಂದವರು ಮರೆತು ಬಿಟ್ಟು ಹೋದ ಮೌಲ್ಯಯುತ ಸೊತ್ತುಗಳನ್ನು ವಾರೀಸುದಾರರಿಗೆ ಮರಳಿಸಿ ಹಲವು ಬಾರಿ ಸತ್ಯ ಸಂಧತೆ ಮೆರೆದು ನಾಡಿನಾದ್ಯಂತ ಸುದ್ದಿಯಾಗಿದ್ದರು. ಅಷ್ಟಕ್ಕೂ ತನ್ನ ಯಾವುದೇ ಮಾನವೀಯ ಮುಖಗಳಿಗೆ ಯಾರಿಂದಲೂ ಯಾವುದೇ ಪ್ರತಿಫಲ ನಿರೀಕ್ಷಿಸದೆ ಹಾಗೂ ಪ್ರಚಾರ ಬಯಸದೆ ಕೇವಲ ಹೃದಯ ವೈಶಾಲ್ಯತೆಯಿಂದಲೇ ಎಲ್ಲವನ್ನೂ ಮಾಡಿದ್ದರು ಎಂಬುದು ಉಲ್ಲೇಖನೀಯ. ಆದರೂ ಇವರ ಸೇವಾ ಮನೋಭಾವಕ್ಕೆ ನಾಡಿನ ಮಾಧ್ಯಮಗಳು ಕನ್ನಡಿ ಹಿಡಿದಿವೆ. ಇತ್ತೀಚೆಗಷ್ಟೆ (ಅ 6ರಂದು) ಇವರು ಅಸ್ಸಾಂ ಮೂಲಕ ಇಬ್ಬರು ಪ್ರಯಾಣಿಕರು ರಿಕ್ಷಾದಲ್ಲಿ ಬಿಟ್ಟು ಹೋಗಿದ್ದ 10 ಸಾವಿರಕ್ಕೂ ಮಿಕ್ಕಿದ ನಗದು ಹಾಗೂ ಅಮೂಲ್ಯ ಸೊತ್ತುಗಳುಳ್ಳ ಪರ್ಸ್‍ನ್ನು ವಾರೀಸುದಾರರನ್ನು ಹುಡುಕಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸಹದೇವ್ ಅವರ ಸಮ್ಮುಖದಲ್ಲಿ ಮರಳಿ ನೀಡುವ ಮೂಲಕ ಮತ್ತೊಮ್ಮೆ ಪ್ರಾಮಾಣಿಕತೆ ಮೆರೆದಿದ್ದು, ಈ ಬಗ್ಗೆ ಕರಾವಳಿ ಟೈಮ್ಸ್ ಸಚಿತ್ರ ವರದಿ ಪ್ರಕಟಿಸಿ ಬೆನ್ನು ತಟ್ಟಿತ್ತು.
ಸತ್ತಾರ್ ಅವರು ವಾಲಿಬಾಲ್, ಹಗ್ಗ-ಜಗ್ಗಾಟ ಮೊದಲಾದ ಕ್ರೀಡೆಗಳಲ್ಲದೆ ಬ್ಯಾರಿ, ತುಳು, ಕನ್ನಡ ಮೊದಲಾದ ನಾಟಕಗಳಲ್ಲೂ ಪಾತ್ರಧಾರಿಯಾಗಿ ಕಲಾ ಕ್ಷೇತ್ರದಲ್ಲೂ ಕೈಯಾಡಿಸಿ ಮನಗೆದ್ದಿದ್ದರು ಎಂಬುದು ಉಲ್ಲೇಖನೀಯ. ಇದೀಗ ಸತ್ತಾರ್‍ಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿರುವುದು ಅವರ ಸೇವೆಗೆ ಸಂದ ಗೌರವ.
0 comments:
Post a Comment