ಮತ್ತೆ ಫಾರ್ಮ್‍ಗೆ ಮರಳಿದ ಕೊಹ್ಲಿ ಪಡೆಗೆ 8 ವಿಕೆಟ್ ಜಯ
ಅಬುಧಾಬಿ, ಅಕ್ಟೋಬರ್ 3, 2020 (ಕರಾವಳಿ ಟೈಮ್ಸ್) : ಇಲ್ಲಿನ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಐಪಿಎಲ್ ಕ್ರಿಕೆಟ್ ಕೂಟದ 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು ಅಮೋಘ 8 ವಿಕೆಟ್‍ಗಳಿಂದ ಸೋಲಿಸುವ ಮೂಲಕ ಕೂಟದ 3ನೇ ಗೆಲುವು ದಾಖಲಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಆರ್‍ಸಿಬಿ ಅಗ್ರಪಟ್ಟಕ್ಕೇರಿದೆ.
ಪಡಿಕ್ಕಲ್ (63) ಹಾಗೂ ನಾಯಕ ವಿರಾಟ್ ಕೊಹ್ಲಿ (72) ಅವರ ಅತ್ಯಮೋಘ ಅರ್ಧ ಶತಕದ ನೆರವಿನಿಂದ 155 ರನ್‍ಗಳ ಗುರಿಯನ್ನು ಪಡೆದ ಆರ್‍ಸಿಬಿ 19.1 ಓವರ್‍ಗಳಲ್ಲಿ 2 ವಿಕೆಟ್ ಮಾತ್ರ ಕಳೆದುಕೊಂಡು 158 ರನ್ ಗಳಿಸುವ ಮೂಲಕ 5 ಎಸೆತ ಬಾಕಿ ಇರುವಂತೆಯೇ ಆರ್‍ಸಿಬಿ ಪಂದ್ಯವನ್ನು ಗೆದ್ದುಕೊಂಡಿರು.
155 ರನ್‍ಗಳ ಕಷ್ಟವಲ್ಲದ ಗುರಿ ಬೆನ್ನಟ್ಟಿದ ಆರ್‍ಸಿಬಿ ತಂಡಕ್ಕೆ ದೇವದತ್ ಪಡಿಕ್ಕಲ್ ಬೌಂಡರಿ, ಸಿಕ್ಸರ್ ಮೂಲಕ ಸ್ಫೋಟಕ ಆರಂಭವನ್ನೇ ನೀಡಿದರು. ಆದರೆ ತಂಡ 2.3 ಓವರ್ ಗಳಲ್ಲಿ 25 ರನ್ ಗಳಿಸಿದ್ದ ವೇಳೆ ಫಿಂಚ್, ಗೋಪಾಲ್‍ಗೆ ವಿಕೆಟ್ ಒಪ್ಪಿಸಿದರು. ಈ ಸಂದರ್ಭದಲ್ಲಿ ರಾಜಸ್ಥಾನ ತಂಡ ನಾಯಕ ತೆಗೆದುಕೊಂಡ ಡಿಆರೆಸ್ ಮನವಿ ಸಫಲತೆಯನ್ನು ನೀಡಿತ್ತು. ಬಿರುಸಿನ ಬ್ಯಾಟಿಂಗ್‍ಗೆ ಮುಂದಾಗಿದ್ದ ಪಡಿಕ್ಕಲ್ ಜೊತೆ ಸೇರಿಕೊಂಡ ನಾಯಕ ಕೊಹ್ಲಿ ತಾಳ್ಮೆ ಆಟಕ್ಕೆ ಮುಂದಾದರು. ಪವರ್ ಪ್ಲೇ ಅಂತ್ಯದ ವೇಳೆಗೆ ಆರ್‍ಸಿಬಿ ವಿಕೆಟ್ 1 ಕಳೆದುಕೊಂಡು 50 ರನ್ ಗಳಿಸಿತ್ತು.
ಇನ್ನಿಂಗ್ಸಿನ ಆರಂಭದಿಂದಲೂ ರಾಜಸ್ಥಾನ ಬೌಲರ್‍ಗಳನ್ನು ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಎದುರಿಸಿದ ಪಡಿಕ್ಕಲ್ 2020ರ ಆವೃತ್ತಿಯಲ್ಲಿ 3ನೇ ಅರ್ಧ ಶತಕ ಸಿಡಿಸಿದರು. 34 ಎಸೆತಗಳಲ್ಲಿ ಅರ್ಧ ಶತಕ ಪೂರ್ಣಗೊಳಿಸಿದ್ದರು. ತಂಡ 124 ರನ್ ಗಳಿಸಿದ್ದ ವೇಳೆ ಭಾರೀ ಹೊಡೆತಕ್ಕೆ ಮುಂದಾದ ಪಡಿಕ್ಕಲ್ ಆರ್ಚರ್‍ಗೆ ಕ್ಲೀನ್ ಬೌಲ್ಡ್ ಆದರು. 45 ಎಸೆತಗಳ ಇನ್ನಿಂಗ್ಸ್‍ನಲ್ಲಿ ಪಡಿಕ್ಕಲ್ 6 ಬೌಂಡರಿ, 1 ಸಿಕ್ಸರ್‍ನೊಂದಿಗೆ 63 ಗಳಿಸಿದ್ದರು.
ಐಪಿಎಲ್ 2020ರ ಆವೃತ್ತಿಯ ಆರಂಭಿಕ ಮೂರು ಪಂದ್ಯಗಳಲ್ಲಿ ವೈಫಲ್ಯ ಎದುರಿಸಿದ್ದ ನಾಯಕ ಕೊಹ್ಲಿ ರಾಜಸ್ಥಾನದ ವಿರುದ್ಧ ಪಂದ್ಯದಲ್ಲಿ ಫಾರ್ಮ್‍ಗೆ ಮರಳಿದ್ದು ಅಜೇಯ ಇನ್ನಿಂಗ್ಸ್ ಕಟ್ಟಿದ್ದಾರೆ. 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 8 ಇನ್ನಿಂಗ್ಸ್‍ಗಳ ಬಳಿಕ ಬಂದ ಕೊಹ್ಲಿಯ ಮೊದಲ ಅರ್ಧ ಶತಕ ಇದಾಗಿದೆ. ವೈಯುಕ್ತಿಕ ಮೊತ್ತ 71 ರನ್ ಆಗಿದ್ದಾಗ ಕೊಹ್ಲಿ ಐಪಿಎಲ್‍ನಲ್ಲಿ 5500 ರನ್ ಪೂರ್ಣಗೊಳಿಸಿದರು.
ಪಂದ್ಯದಲ್ಲಿ ಪಡಿಕ್ಕಲ್-ಕೊಹ್ಲಿ ಜೋಡಿ 80 ಎಸೆತಗಳಲ್ಲಿ 99 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣವಾಯಿತು. ನಾಯಕ ಕೊಹ್ಲಿ ಅಂತಿಮವಾಗಿ 53 ಎಸೆತಗಳಲ್ಲಿ 7 ಬೌಂಡತರಿ, 2 ಸಿಕ್ಸರ್ ನೆರವಿನಿಂದ 72 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಆರೋನ್ ಫಿಂಚ್ 8 ರನ್, ಎಬಿಡಿ ಔಟಾಗದೆ 10 ಎಸೆತಗಳಲ್ಲಿ 12 ರನ್ ಗಳಿಸಿದರು.
ಇದಕ್ಕೂ ಮುನ್ನ ಆರ್‍ಸಿಬಿ ಸ್ಪಿನ್ ಮಾಂತ್ರಿಕ ಚಹಲ್, ವೇಗಿ ಇಸುರು ಉದಾನಾ ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್ ತಂಡ ಬೆಂಗಳೂರು ತಂಡಕ್ಕೆ 155 ರನ್‍ಗಳ ಟಾರ್ಗೆಟ್ ನೀಡಿತ್ತು. ಆರ್‍ಸಿಬಿ ಪರ ಚಹಲ್ ಪ್ರಮುಖ 3 ವಿಕೆಟ್ ಪಡೆದರೆ, ಉದಾನಾ 2 ಹಾಗೂ ಸೈನಿ 1 ವಿಕೆಟ್ ಪಡೆದರು.
ರಾಜಸ್ಥಾನ ರಾಯಲ್ಸ್ ಪರ ಲೊಮರ್ ಗಳಿಸಿದ ತಾಳ್ಮೆಯ 47 ರನ್ ಹಾಗೂ ಅಂತಿಮ ಸ್ಲಾಗ್ ಓವರ್‍ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಆಡಿದ ರಾಹುಲ್ ತೇವಟಿಯಾ ಮತ್ತು ಜೋಫ್ರಾ ಆರ್ಚರ್ ಅವರು, 6ನೇ ವಿಕೆಟ್‍ಗೆ ಉತ್ತಮ ಜೊತೆಯಾಟವಾಡಿದರು. ಕೊನೆಯ 21 ಬಾಲಿಗೆ ಈ ಜೋಡಿ ಬರೋಬ್ಬರಿ 40 ರನ್ ಚಚ್ಚಿದ್ದು, ರಾಜಸ್ಥಾನ ತಂಡ ಇ£್ನಂಗ್ಸ್‍ನಲ್ಲಿ ಸ್ಪಧಾತ್ಮಕ ಮೊತ್ತ ದಾಖಲಿಸಲು ಕಾರಣವಾಗಿತ್ತು.
0 comments:
Post a Comment