ಬೆಂಗಳೂರು, ಅಕ್ಟೋಬರ್ 1, 2020 (ಕರಾವಳಿ ಟೈಮ್ಸ್) : ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಯ ಬಿಲ್‍ಗಳಲ್ಲಿ ಅವ್ಯವಹಾರ ಆಗಿದೆ ಹಾಗೂ ಎಸ್.ಸಿ., ಎಸ್.ಟಿ. ಜನಾಂಗದ ಅಭಿವೃದ್ದಿಗಾಗಿ ಮೀಸಲಿಟ್ಟಿರುವ ಅಭಿವೃದ್ದಿ ಅನುದಾನ ಕಾನೂನು ಬಾಹಿರವಾಗಿ ಕ್ರಿಯಾ ಯೋಜನೆಯಿಲ್ಲದೆ ಜಾಬ್ ಕೋಡ್‍ಗಳನ್ನು ಜಾರಿ ಮಾಡಿರುವುದರ ಮುಖಾಂತರ ಸದರಿ ವರ್ಗದ ಹಕ್ಕುಗಳು ಉಲ್ಲಂಘನೆಯಾಗಿರುತ್ತದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸದಸ್ಯರು ಗುರುವಾರ ರಾಜ್ಯಾಧ್ಯಕ್ಷ ಡಾ ಸಿ ಎಸ್ ರಘು ನೇತೃತ್ವದಲ್ಲಿ ಬಿಬಿಎಂಪಿ ಮುಖ್ಯ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ದಿಗಾಗಿ ಮೀಸಲಿಟ್ಟ ಅನುದಾನವನ್ನು ಬಳಕೆಮಾಡುವಲ್ಲಿ ಶಾಸನಬದ್ದ ಕಾನೂನು ನಿಯಾಮವಳಿಗಳನ್ನು ಉಲ್ಲಂಘಿಸಿ ಜಾಬ್ ಕೋಡ್‍ಗಳನ್ನು ಸೃಷ್ಟಿಸಿರುವುದು ಪರಿಶಿಷ್ಟರ ಆರ್ಥಿಕ ಅಭಿವೃದ್ದಿಯ ವಿರೋಧಿ ನೀತಿಯಾಗಿರುತ್ತದೆ. ಆದ್ದರಿಂದ ಸಂವಿಧಾನಬದ್ದ ಎಸ್.ಸಿ, ಎಸ್.ಟಿ. ವರ್ಗದ ಹಕ್ಕುಗಳು ಉಲ್ಲಾಂಘನೆಯಾಗಿರುವ ಬಗ್ಗೆ ಕಾನೂನ್ಮತಕ ಕ್ರಮವನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಾ ಸಿ ಎಸ್ ರಘು ಆಗ್ರಹಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕೆ.ಟಿ.ಪಿ.ಪಿ ಕಾಯ್ದೆ ಹಾಗೂ ಕೆ.ಎಂ.ಸಿ ಕಾಯ್ದೆ ಸಂಪೂರ್ಣವಾಗಿ ಉಲ್ಲಂಘನೆ ಮಾಡಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸದೆ ಬಿಲ್‍ಗಳನ್ನು ಪಾವತಿಸಿರುತ್ತಾರೆ. ಕೆ.ಆರ್. ಮಾರ್ಕೆಟ್ ವಾರ್ಡ್ ಸಂಖ್ಯೆ 139 ಮಧ್ಯಾಹ್ನ ಪಾಳಿ ಹಾಗೂ ರಾತ್ರಿ ಪಾಳಿ ಕಾನೂನುಬಾಹಿರವಾಗಿ ಕಾರ್ಯದೇಶವನ್ನು ನೀಡಿ ಬಿಲ್‍ಗಳ ಮೊತ್ತವನ್ನು ನೀಡಿರುತ್ತಾರೆ. ಗುತ್ತಿಗೆ ಪೌರ ಕಾರ್ಮಿಕರಿಗೆ ಹಾಗೂ ಖಾಯಂ ಪೌರ ಕಾರ್ಮಿಕರಿಗೆ ಸಲಕರಣಿಗಳನ್ನು ನೀಡಲು ನೆಪ ಮಾತ್ರಕ್ಕೆ ಕಾರ್ಯದೇಶವನ್ನು ನೀಡಿ ಪೌರಕಾರ್ಮಿಕರ ರಕ್ಷಣೆಗೆ ನೀಡಬೇಕಾದ ಸಲಕರಣಿಗಳನ್ನೂ ನೀಡದೆ ಬೋಗಸ್ ಬಿಲ್‍ಗಳನ್ನು ನೀಡಿರುತ್ತಾರೆ ಎಂದು ಸಿ ಎಸ್ ರಘು ಆರೋಪಿಸಿದರು.
ಘನತ್ಯಾಜ್ಯ ಸಂಗ್ರಹಣೆ ವಿಲೇವಾರಿಯ ಸಂಬಂಧ ಗುತ್ತಿಗೆ ಕಾಂಪ್ಯಾಕ್ಟರ್‍ಗಳಿಗೆ ಆಟೋ ಟಿಪ್ಪರ್ ಬಿಲ್‍ಗಳ ತಯಾರಿಸುವ ಪೂರ್ವದಲ್ಲಿ 01-04-2019ರಲ್ಲಿ ಪರಿಶೀಲಿಸಿಕೊಳ್ಳಬೇಕಾದ ದಾಖಲಾತಿಗಳ ಕುರಿತು ನಿರ್ದೇಶನಗಳನ್ನು ನೀಡಲಾಗಿರುತ್ತದೆ. ಆಟೋ ಟಿಪ್ಪರ್ ಕಾಂಪ್ಯಾಕ್ಟರ್‍ಗಳ ಆರ್.ಎಫ್.ಐ.ಡಿ ಕಾರ್ಡ್ ಕೇಂದ್ರ ಕಛೇರಿಯಿಂದಲೇ ಜಿ.ಪಿ.ಎಸ್ ಟ್ರಾಕಿಂಗ್ ಆದರಿಸಿ ಮುಖ್ಯ ಲೆಕ್ಕಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳು ಹಣ ನಿಗದಿ ಮಾಡಬೇಕಾಗಿರುವುದು ಸರಿಯಷ್ಟೆ. ಪಾಲಿಕೆಯ ಕೇಂದ್ರ ಕಛೇರಿಯ ವಿಶೇಷ ಆಯುಕ್ತರಾದ ರಂಧೀಪ್ ಹಾಗೂ ಇತರರು ನಿಯಾಮವಳಿಗಳಂತೆ ಕ್ರಮವಹಿಸದೆ ಘನತ್ಯಾಜ್ಯ ನಿರ್ವಹಣೆ ಹೆಸರಿನಲ್ಲಿ ದಿನಾಂಕ 01-12-2018 ರಿಂದ 30-06-2020ರವರೆಗೆ ಕೇಂದ್ರ ಕಛೇರಿಯಿಂದ ಬಿಡುಗಡೆಯಾದ ಮೊತ್ತ ರೂ. 1063,75,52,661/- ನಿಯಾಮವಳಿಗಳನ್ನು ಉಲ್ಲಂಘಿಸಿ ಸುತ್ತೋಲೆಗಳನ್ವಯ ಕ್ರಮವಹಿಸದೆ ಬಿಲ್ಲಗಳನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿರುವುದು ಕಂಡುಬಂದಿರುತ್ತದೆ ಎಂದರು.
ಈಗಾಗಲೇ ಪಾಲಿಕೆಯ ಆಧಾರದಲ್ಲಿ 629 ಕಾಂಪ್ಯಾಕ್ಟರ್‍ಗಳನ್ನು ಘಟಕಗಳು, ಕ್ವಾರೆಗಳಿಗೆ ನಿಯೋಜಿಸಲಾಗಿದ್ದು ಇದರಲ್ಲಿ ಕೇವಲ 489 ಕಾಂಪ್ಯಾಕ್ಟರ್‍ಗಳು ಮಾತ್ರ ಅಧಿಕೃತವಾಗಿವೆ, ಅವುಗಳಲ್ಲಿ ಕೇವಲ 340 ರಿಂದ 350 ಕಾಂಪ್ಯಾಕ್ಟರ್‍ಗಳು ಮಾತ್ರ ಪ್ರತಿದಿನ ಘಟಕಗಳು, ಕ್ವಾರೆಗಳಿಗೆ ತಲುಪಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಇಷ್ಟೆಲ್ಲಾ ಮಾಹಿತಿ ಇದ್ದರೂ ಅಧಿಕಾರಿಗಳು ಪಾಲಿಕೆ ಆರ್ಥಿಕ ಹಿತದೃಷ್ಟಿಯಿಂದ ಕಾನೂನ್ಮತಕ ಕ್ರಮಕೈಗೊಳ್ಳದೆ ನಿಯೋಜಿತ ಎಲ್ಲಾ ವಾಹನಗಳಿಗೂ ಸಹಾ ಕಸ ವಿಲೇವಾರಿ ಘಟಕಗಳಿಗೆ ತೆರಳದೆ ಇದ್ದರೂ ಗುತ್ತಿಗೆದಾರರಿಗೆ ನೂರಕ್ಕೆ ನೂರರಷ್ಟು ಹಣ ಪಾವತಿಸಿರುವುಸುದು ಅಕ್ರಮ ಹಾಗೂ ಕಾನೂನು ಬಾಹಿರವಾದ ಕ್ರಮವಾಗಿದ್ದು ಇದು ಪಾಲಿಕೆಯ ಆರ್ಥಿಕ ವಿರೋಧಿ ನೀತಿಯಾಗಿರುತ್ತದೆ ಎಂದವರು ಆಪಾದಿಸಿದರು.
ಗುತ್ತಿಗೆ ಪೌರಕರ್ಮಿಕರಿಗೆ 2018 ರಿಂದ ಇಲ್ಲಿಯವರೆವಿಗೂ ಇ.ಎಸ್.ಐ ಹಾಗೂ ಪಿ.ಎಫ್ ಪಾವತಿ ಮಾಡದೇ ನಿರ್ಲಕ್ಷಿಸಿರುತ್ತಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿದಿನ ಸುಮಾರು 4 ಸಾವಿರ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಪಾಲಿಕೆಯಿಂದ ನಿಯೋಜಿಸಿದ ಸಂಖ್ಯೆಯಲ್ಲಿ ಕಾಂಪ್ಯಕ್ಟರ್ ವಾಹನಗಳು, ಸಂಸ್ಕರಣಾ ಘಟಕಗಳು, ವೈಜ್ಞಾನಿಕ ಭೂ-ಭರ್ತಿ ಜಾಗಗಳಿಗೆ ಕೇಳದೆ ಇರುವುದು ಕಂಡುಬಂದಿದ್ದರೂ ಸಹಾ ಪ್ರತಿ ತಿಂಗಳು ಕೊನೆಯಲ್ಲಿ ನಿಯೋಜಿತ ಎಲ್ಲಾ ವಾಹನಗಳಿಗೂ ನೂರಕ್ಕೆ ನೂರರಷ್ಟು ಅಕ್ರಮವಾಗಿ ಗುತ್ತಿಗೆದಾರರಿಗೆ ಹಣ ಪಾವತಿಯಾಗುತ್ತಿರುವುದು ಪಾಲಿಕೆಗೆ ಆರ್ಥಿಕ ನಷ್ಟ ಆಗುತ್ತಿರುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಿ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
0 comments:
Post a Comment