ಬಂಟ್ವಾಳ, ಅ. 02, 2020 (ಕರಾವಳಿ ಟೈಮ್ಸ್) : ವೋಟಿಗಾಗಿ ಹೆಂಡ ಹಂಚುವ ನೀಚ ಸಂಸ್ಕøತಿ ಏನಾದರೂ ಕಂಡು ಬಂದರೆ ಅಂತಹ ಚುನಾವಣೆಯನ್ನೇ ಬಹಿಷ್ಕರಿಸುವ ಗಟ್ಟಿ ಧೈರ್ಯವನ್ನು ನವಜೀವನ ಸದಸ್ಯರು ಒಟ್ಟಾಗಿ ಮಾಡಬೇಕಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಸಾರಿದರು.
ಬಂಟ್ವಾಳದ ಯೋಜನೆಯ ಜಿಲ್ಲಾ ಕಚೇರಿ ‘ಉನ್ನತಿ ಸೌಧ’ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಸಮಿತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಬಂಟ್ವಾಳ, ಮಂಜುನಾಥೇಶ್ವರ ವ್ಯಸನಮುಕ್ತ ಸಂಶೋಧನ ಕೇಂದ್ರ ಉಜಿರೆ, ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ “ನವಜೀವನೋತ್ಸವ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನವಜೀವನ ಸಮಿತಿ ಸಮಾಜವನ್ನು ಮದ್ಯಮುಕ್ತಗೊಳಿಸಲು ಶಕ್ತಿ ಮೀರಿ ಶ್ರಮಿಸಿದೆ. ಪರಿಣಾಮ ಇಂದು ಹಲವಾರು ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿದೆ. ಇದರ ಹಿಂದೆ ನಮ್ಮ ನವಜೀವನ ಯೋಧರು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಅವರಿಗೆ ಕೃತಜ್ಞತೆ ಸಲ್ಲಿಸುವ ಸುದಿನ ಇದಾಗಿದೆ ಎಂದರು.
ನವಜೀವನ ಸಮಿತಿ ಅಮಲು ಪದಾರ್ಥಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವಾಗ ಅಣಕಿಸಿದವರು ಇದೀಗ ಅದರ ಘೋರ ಪರಿಣಾಮವನ್ನು ಕಣ್ಣಾರೆ ಕಾಣುತ್ತಿದ್ದಾರೆ. ಡ್ರಗ್ಸ್ ನಿರ್ಮೂಲನೆಗೆ ಪರಿಣಾವiಕಾರಿ ಕಾನೂನುಗಳು ಬತ್ತಳಿಕೆಯಲ್ಲಿದ್ದರೂ ಇಂದು ಕಬಂಧಬಾಹು ವಿಸ್ತರಿಸಿದ ಡ್ರಗ್ಸ್ ಪ್ರಕರಣವನ್ನು ತಹಬಂದಿಗೆ ತರಲು ಸರಕಾರಗಳೂ ಇನ್ನಿಲ್ಲದ ಪೇಚಾಟ ನಡೆಸುತ್ತಿದೆ ಎಂದರೆ ಅದರ ಪರಿಣಾಮ ಊಹಿಸಿಕೊಳ್ಳಬಹುದು ಎಂದ ಸತೀಶ್ ಶೆಟ್ಟಿ ಇನ್ನು ಕೆಲವೇ ದಿನಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಸಮೀಪಿಸುತ್ತಿದ್ದು, ವಿವಿಧ ರಾಜಕೀಯ ಪಕ್ಷಗಳಿಗೆ ಸಂಬಂಧಪಟ್ಟವರು ಜನರ ಬಳಿ ವೋಟಿಗಾಗಿ ಹೆಂಡ, ಮದ್ಯ ಮೊದಲಾದ ಅಮಲು ಪದಾರ್ಥಗಳ ಆಮಿಷದೊಂದಿಗೆ ಬರುವ ಸಾಧ್ಯತೆ ಇದೆ. ಇಂತಹ ಪ್ರಕರಣಗಳೇನಾದರೂ ಕಂಡು ಬಂದರೆ ನವಜೀವನ ಸಮಿತಿ ಸದಸ್ಯರು ಜನರ ಸಹಕಾರ ಪಡೆದುಕೊಂಡು ಅಂತಹ ಗ್ರಾಮಗಳಲ್ಲಿ ಚುನಾವಣೆಯನ್ನೇ ಬಹಿಷ್ಕರಿಸುವಂತಹ ಕಠಿಣ ನಿರ್ಧಾರಕ್ಕೆ ಬರಬೇಕು ಎಂದು ಕರೆ ನೀಡಿದರು. ಯಾವುದೇ ಕಾರಣಕ್ಕೂ ಜನರನ್ನು ಮದ್ಯದ ದಾಸರನ್ನಾಗಿ ಮಾಡುವ ಚಟುವಟಿಕೆಗಳಿಗೆ ನವಜೀವನ ತಂಡದ ಸದಸ್ಯರು ನೀಡಬಾರದು ಎಂದವರು ತಾಕೀತು ಮಾಡಿದರು. ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು, ಅದನ್ನು ಸಮರ್ಥವಾಗಿ ಚಲಾಯಿಸಿ, ಆದರೆ ಅದರ ಬದಲಾಗಿ ಹಣ, ಹೆಂಡದ ದಾಸರಾಗಿ ಮತದಾನ ಹಕ್ಕನ್ನು ಮಾರಾಟ ಮಾಡುವ ನೀಚ ಪ್ರವೃತ್ತಿ ಬೆಳೆಸಿಕೊಳ್ಳದಿರಿ ಎಂದು ಕರೆ ನೀಡಿದರು.
ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೋಡಾಜೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಎ ರುಕ್ಮಯ ಪೂಜಾರಿ, ಕೆಯ್ಯೂರು ನಾರಾಯಣ ಭಟ್, ಕಿರಣ್ ಹೆಗ್ಡೆ, ಪ್ರಕಾಶ್ ಕಾರಂತ, ಮಾಧವ ವಳವೂರು, ಕೃಷ್ಣಕುಮಾರ್ ಪೂಂಜಾ, ಕೇಶವ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಷಾರ್ಚನೆ ಸಲ್ಲಿಸಿದ ಬಳಿಕ ವಿಕಲಚೇತನರಿಗೆ ವೀಲ್ ಚೆಯರ್, ಅನಾರೋಗ್ಯ ಪೀಡಿತರಿಗೆ ವಾಟರ್ ಬೆಡ್ ಸಹಿತ ವಿವಿಧ ಸಲಕರಣೆ ಹಾಗೂ ಸಹಾಯ ಧನಗಳನ್ನು ವಿತರಿಸಲಾಯಿತು. ನವಜೀವನ ಸದಸ್ಯರಿಗೆ ಮಾಸ್ಕ್ ಜೊತೆಗೆ ಗುಲಾಬಿ ಹೂ ನೀಡಿ ಅಭಿನಂದಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಂಟ್ವಾಳ ಘಟಕ ಯೋಜನಾಧಿಕಾರಿ ಜಯಾನಂದ ಪಿ. ಸ್ವಾಗತಿಸಿ, ಪ್ರಸ್ತಾವನೆಗೈದರು. ವಿಟ್ಲ ಘಟಕದ ಯೋಜನಾಧಿಕಾರಿ ಮೋಹನ್ ವಂದಿಸಿದರು. ಹರಿಣಾಕ್ಷಿ, ನಳಿನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment