ಬಂಟ್ವಾಳದಲ್ಲಿ ಗ್ಯಾಂಗ್ ವಾರ್ ಗೆ ಮತ್ತೊಂದು ಬಲಿ : ಕಲ್ಲಡ್ಕ ಚೆನ್ನ ಫಾರೂಕ್ ಹತ್ಯೆ - Karavali Times ಬಂಟ್ವಾಳದಲ್ಲಿ ಗ್ಯಾಂಗ್ ವಾರ್ ಗೆ ಮತ್ತೊಂದು ಬಲಿ : ಕಲ್ಲಡ್ಕ ಚೆನ್ನ ಫಾರೂಕ್ ಹತ್ಯೆ - Karavali Times

728x90

23 October 2020

ಬಂಟ್ವಾಳದಲ್ಲಿ ಗ್ಯಾಂಗ್ ವಾರ್ ಗೆ ಮತ್ತೊಂದು ಬಲಿ : ಕಲ್ಲಡ್ಕ ಚೆನ್ನ ಫಾರೂಕ್ ಹತ್ಯೆ















ಎರಡು ದಿನ ಅಂತರದಲ್ಲಿ ಇಬ್ಬರು ರೌಡಿ ಶೀಟರುಗಳ ಹತ್ಯೆಗೆ ಸಾಕ್ಷಿಯಾದ ಬಂಟ್ವಾಳದ ಕಾನೂನು-ಸುವ್ಯವಸ್ಥೆ ಬಗ್ಗೆ ಆತಂಕ

 

ಬಂಟ್ವಾಳ, ಅ. 23, 2020 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಮತ್ತೋರ್ವ ರೌಡಿ ಶೀಟರ್ ಬೀದಿ ಹೆಣವಾಗಿದ್ದಾನೆ. ಬುಧವಾರ ಮಧ್ಯಾಹ್ನವಷ್ಟೆ ಬಂಟ್ವಾಳದ ರೌಡಿ ಶೀಟರ್ ಸುರೇಂದ್ರ ಬಂಟ್ವಾಳ ಎಂಬಾತನನ್ನು ಕಡಿದು ಕೊಂದ ಘಟನೆ ಬೆಳಕಿಗೆ ಬಂದ ಎರಡನೇ ದಿನದಲ್ಲಿ ಇದೀಗ ಕಲ್ಲಡ್ಕದ ರೌಡಿ ಶೀಟರ್ ಉಮ್ಮರ್ ಫಾರೂಕ್ ಯಾನೆ ಚೆನ್ನ ಫಾರೂಕ್ (27) ಎಂಬಾತನ ಕೊಲೆಯಾಗಿದ್ದು ತಾಲೂಕಿನ ಜನ ಆತಂಕಗೊಳ್ಳುವಂತೆ ಮಾಡಿದೆ. 

ಶುಕ್ರವಾರ ಸಂಜೆ ಮೆಲ್ಕಾರ್ ಸಮೀಪದ ಗುಡ್ಡೆಅಂಗಡಿ ಸೇತುವೆ ಬಳಿ ಫಾರೂಕ್ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಮತ್ತೊಂದು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಘಾತ ನಡೆಸಿ ಬಳಿಕ ರಸ್ತೆಯಲ್ಲೇ ಅಟ್ಟಾಡಿಸಿ ಮಾರಕಾಯುಧಗಳಿಂದ ಕಡಿದು ಕೊಲೆ ನಡೆಸಿ ಬಂದ ಕಾರಿನಲ್ಲೇ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. 

ದುಷ್ಕರ್ಮಿಗಳು ಕೈ, ಕಾಲು, ಹೊಟ್ಟೆ, ಕುತ್ತಿಗೆ ಭಾಗಗಳಿಗೆ ಯದ್ವಾತದ್ವಾ ಕಡಿದ ಪರಿಣಾಮ ಗಂಭೀರ ಸ್ಥಿತಿಯಲ್ಲಿದ್ದ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದ ಉಮರ್ ಫಾರೂಕ್‍ನನ್ನು ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರಾದರೂ ಅಷ್ಟರಲ್ಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ ಎನ್ನಲಾಗಿದೆ. 

ಫಾರೂಕ್ ಸ್ನೇಹಿತ ವಲಯದಲ್ಲೇ ಒಂದು ಕಾಲದಲ್ಲಿ ಗುರುತಿಸಿಕೊಂಡು ಬಳಿಕ ವೈಯುಕ್ತಿಕ ದ್ವೇಷ ಕಟ್ಟಿಕೊಂಡು ಬೇರೆಯಾದ ಮಂದಿಯ ತಂಡವೇ ಈ ಕೊಲೆ ಕೃತ್ಯ ನಡೆಸಿದೆ ಎಂಬ ಮಾಹಿತಿ ಮೇಲ್ನೋಟಕ್ಕೆ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದ್ದು, ಪೊಲೀಸರ ತನಿಖೆಯ ಬಳಿಕವಷ್ಟೆ ಘಟನೆಯ ಸತ್ಯಾಸತ್ಯತೆ ಹೊರ ಬರಲಿದೆ. 

ಸುರೇಂದ್ರ ಬಂಟ್ವಾಳ ಹತ್ಯಾ ಆರೋಪಿಗಳ ಜಾಡು ಬೇಧಿಸಲು ಬಂಟ್ವಾಳದಲ್ಲಿ ಮೂರು ಪೊಲೀಸ್ ತಂಡಗಳು ತಿರುಗಾಡುತ್ತಿರುವ ಸಂದರ್ಭದಲ್ಲೇ ಹಾಡಹಗಲೇ ಬೀದಿ ಕಾಳಗದಲ್ಲಿ ಇನ್ನೋರ್ವ ರೌಡಿ ಶೀಟರ್ ಹತ್ಯೆಯಾಗಿರುವುದು ಇದೀಗ ಬಂಟ್ವಾಳದ ಕಾನೂನು ಸುವ್ಯವಸ್ಥೆ ಬಗ್ಗೆ ಜನ ಆತಂಕಗೊಳ್ಳುವಂತೆ ಮಾಡಿದೆ. 

ಎರಡೂ ಘಟನೆಗಳ ಆರೋಪಿಗಳ ಪತ್ತೆಗೆ ಪೊಲೀಸರು ಸಕ್ರಿಯರಾಗಿದ್ದು, ಆರೋಪಿಗಳ ಬಂಧನದ ಬಳಿಕವಷ್ಟೆ ಘಟನೆಯ ನೈಜ ಕಾರಣಗಳು ತಿಳಿದು ಬರಲಿದೆ. 

ಮೃತ ಫಾರೂಕ್ ಅವಿವಾಹಿತನಾಗಿದ್ದು, ಕೊಲೆಯತ್ನ ಸಹಿತ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ರೌಡಿ ಶೀಟರ್ ಪಟ್ಟಿಯಲ್ಲಿ ದಾಖಲಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 








  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಗ್ಯಾಂಗ್ ವಾರ್ ಗೆ ಮತ್ತೊಂದು ಬಲಿ : ಕಲ್ಲಡ್ಕ ಚೆನ್ನ ಫಾರೂಕ್ ಹತ್ಯೆ Rating: 5 Reviewed By: karavali Times
Scroll to Top