ಬಂಟ್ವಾಳ, ಅಕ್ಟೋಬರ್ 2, 2020 (ಕರಾವಳಿ ಟೈಮ್ಸ್) : ಭೇಟಿ ಪಢಾವೋನೂ, ಭೇಟಿ ಬಚಾವೋ ಎಂಬ ಸುಂದರ ಸ್ಲೋಗನ್ ಮೂಲಕ ಅಧಿಕಾರಕ್ಕೇರಿದ ಮೋದಿ ಆಡಳಿತದಲ್ಲಿ ಇದೀಗ ಭೇಟಿ ಪಡಾವೋ ಕೂಡಾ ಇಲ್ಲ, ಭೇಟಿ ಬಚಾವೋ ಕೂಡಾ ಇಲ್ಲ. ಒಟ್ಟಾರೆ ಅರಾಜಕತೆಯ ಗೂಡಾಗಿರುವ ದೇಶ ಸಂಪೂರ್ಣ ದರಿದ್ರವಾಗುತ್ತಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ ನಡೆದ ದಲಿತ ಯುವತಿ ಮೇಲೆ ನಡೆದ ಅಮಾನುಷ ಕೃತ್ಯ ಹಾಗೂ ಬಳಿಕ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವ ವತಿಯಿಂದ ಶುಕ್ರವಾರ ರಾತ್ರಿ ಬಿ ಸಿ ರೋಡಿನಲ್ಲಿ ನಡೆದ ಮೊಂಬತ್ತಿ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು ಉತ್ತರ ಪ್ರದೇಶ ರಾಜ್ಯದಲ್ಲಿ ನಡೆದ ಘಟನೆ ಅತ್ಯಂತ ಅಮಾನವೀಯ ಹಾಗೂ ಹೇಯವಾದುದು. ಇಂತಹ ಘಟನೆಗಳು ನಡೆದು ಸಂಪೂರ್ಣ ಗೂಂಡಾ ರಾಜ್ಯವಾಗಿ ಪರಿವರ್ತನೆಗೊಳ್ಳುತ್ತಿರುವ ರಾಜ್ಯದಲ್ಲಿ ಒಂದು ನಿಮಿಷವೂ ಅಧಿಕಾರದಲ್ಲಿರುವ ನೈತಿಕತೆ ಕಳೆದುಕೊಂಡಿರು ಯೋಗಿ ಸರಕಾರವನ್ನು ತಕ್ಷಣ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು. ದಲಿತ ಹೆಣ್ಣು ಮಗಳ ರಕ್ಷಣೆ ಮಾಡಲು ಹೇಗೋ ಸಾಧ್ಯವಾಗಿಲ್ಲ. ಅಲ್ಲದೆ ಬಳಿಕ ಆಕೆಯ ಕುಟುಂಬಕ್ಕೆ ಕನಿಷ್ಠ ಪಕ್ಷ ಅಂತ್ಯ ದರ್ಶನಕ್ಕೂ ಅವಕಾಶ ನೀಡದ, ಸ್ಥಳಕ್ಕೆ ಮಾಧ್ಯಮಗಳ ಮಂದಿಗೂ ಪ್ರವೇಶ ನಿರಾಕರಿಸುವ ಮೂಲಕ ಅಲ್ಲಿನ ಪೊಲೀಸರು ನಡೆದುಕೊಂಡ ರೀತಿ ಇಂತಹ ಕೀಚಕರಿಗೆ ನೈತಿಕ ಬಲವನ್ನು ತುಂಬಿದಂತಾಗಿದೆ ಎಂದ ರೈ ಉತ್ತರ ಪ್ರದೇಶದಲ್ಲಿ ನಡೆದ ಘಟನೆಯ ಬಳಿಕ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಮಧ್ಯೆ ಅಂತಹದೇ ಕೃತ್ಯಗಳು ಮತ್ತೆ ನಡೆಯುತ್ತಿದೆ ಎಂದರೆ ಅವರ ನೈತಿಕ ಬಲ ಜಾಸ್ತಿ ಇದೆ ಎಂದೇ ಹೇಳಬೇಕು ಎಂದವರು ಆತಂಕ ವ್ಯಕ್ತಪಡಿಸಿದರು.
ದಲಿತ ಹೆಣ್ಣು ಮಗಳಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸಾಂತ್ವನ ಹೇಳಲು ಹೊರಟಿದ್ದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಕುಟುಂಬದ ನಾಯಕರನ್ನು ತಡೆದು, ಅವರ ಮೇಲೆ ಕೈ ಮಾಡಿ, ಲಾಠಿ ಬೀಸಿ ಯೋಗಿ ಸರಕಾರದ ಪೊಲೀಸರು ನಡೆದುಕೊಂಡ ರೀತಿ ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ ರಮಾನಾಥ ರೈ ದೇಶದ ಮಹಿಳೆಯರು ಸಹಿತ ಎಲ್ಲ ವರ್ಗದ ಜನರ ರಕ್ಷಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ಮೋದಿ ಆಡಳಿತಕ್ಕೇರಿದ ಬಳಿಕ ದೇಶದಲ್ಲಿ ಉಂಟಾಗಿದೆ. ಬಿಜೆಪಿ ಸರಕಾರಗಳು ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಮೊಂಬತ್ತಿ ಮೆರವಣಿಗೆ ಬಿ ಸಿ ರೋಡು ಜಂಕ್ಷನ್ನಿನಲ್ಲಿ ಕೊನೆಗೊಂಡಿತು. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಜಿ ಪಂ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಂಜುಳಾ ಮಾಧವ ಮಾವೆ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು, ಪ್ರಮುಖರಾದ ಯೂಸುಫ್ ಕರಂದಾಡಿ, ಗಾಯತ್ರಿ ರವೀಂದ್ರ ಸಪಲ್ಯ, ಮುಹಮ್ಮದ್ ನಂದರಬೆಟ್ಟು, ಗಂಗಾಧರ ಪೂಜಾರಿ, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಲೋಲಾಕ್ಷ ಶೆಟ್ಟಿ, ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಜಯಂತಿ ಪೂಜಾರಿ, ಮುಹಮ್ಮದ್ ನಂದಾವರ, ಜಿ ಎಂ ಇಬ್ರಾಹಿಂ ಮಂಚಿ, ವಿನಯ್, ಐಡಾ ಸುರೇಶ್, ಮಲ್ಲಿಕಾ ಶೆಟ್ಟಿ, ಜನಾರ್ದನ ಚೆಂಡ್ತಿಮಾರ್, ಕೆ ಪದ್ಮನಾಭ ರೈ, ಮಧುಸೂಧನ್ ಶೆಣೈ ಮೊದಲಾದವರು ರ್ಯಾಲಿಯ ನೇತೃತ್ವ ವಹಿಸಿದ್ದರು.
0 comments:
Post a Comment