ಮಂಗಳೂರು, ಅಕ್ಟೋಬರ್ 3, 2020 (ಕರಾವಳಿ ಟೈಮ್ಸ್) : ಕರಾವಳಿಯ ಡ್ರಗ್ಸ್ ಪ್ರಕರಣ ಗಂಭೀರಾವಸ್ಥೆ ಪಡೆದು ವಿಚಾರಣೆ ಹಂತದಲ್ಲಿರುವಾಗಲೇ ದಿಢೀರ್ ಆಗಿ ಸಂಶಯಾಸ್ಪದವಾಗಿ ವರ್ಗಾವಣೆಗೊಂಡಿದ್ದ ಮಂಗಳೂರು ಸಿಸಿಬಿ ಇನ್ಸ್‍ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಅವರ ವರ್ಗಾವಣೆಗೆ ಕೊನೆಗೂ ಸರಕಾರ ತಡೆ ನೀಡಿದೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ, ನಟಿ ಅನುಶ್ರೀ ಅವರನ್ನು ವಿಚಾರಣೆ ನಡೆಸಿದ್ದ ಇನ್ಸ್‍ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಅವರನ್ನು ಕಳೆದ ಗುರುವಾರ ದಿಢೀರ್ ಆಗಿ ವರ್ಗಾವಣೆಗೊಳಿಸಿ ಆದೇಶಿಸಲಾಗಿತ್ತು. ಅವರ ಸ್ಥಾನಕ್ಕೆ ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಇನ್ಸ್‍ಪೆಕ್ಟರ್ ಮಹೇಶ್ ಪ್ರಸಾದ್ ಅವರನ್ನು ನೇಮಕಗೊಳಿಸಿ ಆದೇಶಿಸಲಾಗಿತ್ತು. ಸರಕಾರದ ಈ ನಡೆ ಸಾರ್ವಜನಿಕರ ವಲಯದಲ್ಲಿ ಸಾಕಷ್ಟು ಗುಸುಗುಸಿಗೂ ಕಾರಣವಾಗಿತ್ತು. ಈ ಬಗ್ಗೆ ಕರಾವಳಿ ಟೈಮ್ಸ್ ಸಾರ್ವಜನಿಕರ ಧ್ವನಿಯಾಗಿ ಸುದ್ದಿ ವಿಶ್ಲೇಷಣೆ ನಡೆಸಿತ್ತು. ಇದೀಗ ಕೊನೆಗೂ ಈ ಬಗ್ಗೆ ಎಚ್ಚೆತ್ತ ಸರಕಾರ ಸಿಸಿಬಿ ಇನ್ಸ್‍ಪೆಕ್ಟರ್ ಶಿವಪ್ರಕಾಶ್ ಅವರ ವರ್ಗಾವಣೆಗೆ ತಡೆ ನೀಡಿದೆ.
ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಕರಾವಳಿಯಲ್ಲೂ ಡ್ರಗ್ಸ್ ಹಾವಳಿ ಇರುವುದನ್ನು ಪತ್ತೆ ಹಚ್ಚಿ ಪ್ರಾರಂಭದಲ್ಲಿ ಡಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಬಂಧಿಸಿದ್ದರು. ಬಳಿಕ ನಿರೂಪಕಿ ಅನುಶ್ರೀ ಅವರಿಗೂ ನೋಟೀಸ್ ನೀಡಿ ವಿಚಾರಣೆ ನಡೆಸಿದದ್ದರು. ಇನ್ಸ್‍ಪೆಕ್ಟರ್ ಶಿವಪ್ರಕಾಶ್ ನೇತೃತ್ವದಲ್ಲಿ ಕರಾವಳಿಯ ಸಂಪೂರ್ಣ ಡ್ರಗ್ಸ್ ಡೀಲ್ ಬಗ್ಗೆ ವಿಚಾರಣೆ, ತನಿಖೆಗಳು ಮುಂದುವರಿದಿತ್ತು. ಈ ಎಲ್ಲ ಪ್ರಕರಣ ಒಂದು ಹಂತಕ್ಕೆ ಬರುತ್ತಲೇ ಶಿವಪ್ರಕಾಶ್ ಅವರನ್ನು ತರಾತುರಿಯಲ್ಲಿ ವರ್ಗಾವಣೆಗೆ ಆದೇಶ ಮಾಡಲಾಗಿತ್ತು. ಇದರ ಹಿಂದೆ ಪ್ರಭಾವಿ ರಾಜಕಾರಣಿಗಳ ಪ್ರಭಾವ ಕೆಲಸ ಮಾಡಿದೆ ಎನ್ನಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಸಂಶಯ ಕಾಡಿತ್ತು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಪೆÇಲೀಸ್ ಆಯುಕ್ತ ವಿಕಾಸ್ ಕುಮಾರ್, ಸಿಸಿಬಿ ಇನ್ಸ್‍ಪೆಕ್ಟರ್ ವರ್ಗಾವಣೆ ಬಗ್ಗೆ ಹರಡುತ್ತಿರುವ ಊಹಾಪೋಹಗಳು ಸತ್ಯಕ್ಕೆ ದೂರವಾಗಿದ್ದು, ವರ್ಗಾವಣೆಗೆ ಕಾರಣ ಬೇರೆಯೇ ಇದೆ. ಯಾವ ಅಧಿಕಾರಿಗಳ ಮೇಲೂ ಒತ್ತಡ ಹೇರಲಾಗಿಲ್ಲ ಎಂದಿದ್ದರು. ಮಂಗಳೂರಿನ ಡ್ರಗ್ಸ್ ಪ್ರಕರಣದ ಚೈನ್ ಲಿಂಕ್ ಬಹಳ ದೊಡ್ಡದಿದೆ. ಈ ಚೈನ್ ಲಿಂಕ್ ಎಲ್ಲಿ ಕೊನೆಯಾಗುತ್ತೋ ಅಲ್ಲಿ ತನಕ ವಿಚಾರಣೆ ಮಾಡುತ್ತೇವೆ. ಡ್ರಗ್ಸ್ ಪ್ರಕರಣದಲ್ಲಿ ಒಟ್ಟು 6 ಮಂದಿ ಆರೋಪಿಗಳ ಬಂಧನವಾಗಿದೆ. ಪ್ರಕರಣದ ಬಗ್ಗೆ ನಿತ್ಯ ತನಿಖೆ ಮಾಡಲಾಗುತ್ತಿದೆ. ಮಾಹಿತಿ ಬೇಕಾದಲ್ಲಿ ನೋಟಿಸ್ ಮಾಡುತ್ತೇವೆ. ನೋಟಿಸ್ ಕೊಟ್ಟು ಪ್ರಕರಣದ ವಿಚಾರಣೆಯನ್ನು ಮಾಡುತ್ತೇವೆ ಎಂದಿದ್ದಾರೆ.
0 comments:
Post a Comment