ಬೆಂಗಳೂರು, ಅಕ್ಟೋಬರ್ 12, 2020, (ಕರಾವಳಿ ಟೈಮ್ಸ್) : ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಹೋರಾಟದಲ್ಲಿ ಕ್ಷೌರಿಕರನ್ನು ಸೇರಿಸಿಕೊಳ್ಳುವ ಮನವಿಗೆ ಸಚಿವ ಈಶ್ವರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ರಾಜ್ಯ ಕ್ಷೌರಿಕರ ಮೀಸಲಾತಿ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಬಿ. ಶಿವಕುಮಾರ್ ತಿಳಿಸಿದ್ದಾರೆ.
ಕುರುಬರ ಹೋರಾಟ ಸಮಿತಿಯ ಮುಂದಾಳುತ್ವ ವಹಿಸಿರುವ ಗ್ರಾಮೀಣಾಭಿವೃದ್ದಿ ಸಚಿವ ಈಶ್ವರಪ್ಪ ಅವರನ್ನು ಭೇಟಿಯಾಗಿ ರಾಜ್ಯ ಕ್ಷೌರಿಕರ ಮೀಸಲಾತಿ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಬಿ. ಶಿವಕುಮಾರ್, ಕ್ಷೌರಿಕರ ಗುರು ಪೀಠದ ಡಾ. ಲಿಂಗರಾಜ್ ಗುರೂಜಿ ಹಾಗೂ ಅಭಿಮಾನಿ ಕ್ಷೌರಿಕ ಮುತ್ತುರಾಜ್, ಎಚ್.ಎನ್. ನರಸಿಂಹಮೂರ್ತಿ ಅವರ ನಿಯೋಗ ಭೇಟಿ ಮಾಡಿ ಮನವಿಯನ್ನು ಸಲ್ಲಿಸಿತ್ತು.
ದಿನ ನಿತ್ಯ ಅಪಮಾನಕ್ಕೆ ಅಪಹಾಸ್ಯಕ್ಕೆ, ಜಾತಿ ನಿಂದನೆ, ಧ್ವನಿ ಇಲ್ಲದಂತಹ ಜಾತಿಯ ಶಕ್ತಿಯೂ ಇಲ್ಲದೆ ಶಕ್ತಿ ಹೀನವಾದಂತಹ, ನಿರ್ಗತಿಕ ಕ್ಷೌರಿಕ ಸಮಾಜಕ್ಕೆ ಸ್ವಾತಂತ್ರ ಬಂದು 73 ವರ್ಷ ಕಳೆದರೂ ರಾಜ್ಯದಲ್ಲಿ ಕೆಲವು ಹಳ್ಳಿಗಾಡಿನಲ್ಲಿ ಮುಕ್ತವಾಗಿ ಸೇವೆ ಮಾಡುವುದಕ್ಕೆ ಆಗುತ್ತಿಲ್ಲ ಎಂದರೆ ಸರಕಾರದಿಂದ ಸೌಲಭ್ಯವನ್ನು ತಗೆದುಕೊಳ್ಳುವುದು ಕಷ್ಟ. ಜಾತಿ ಜನಗಣತಿಯ ಸಮೀಕ್ಷೆ ಬಂದರೆ ಕ್ಷೌರಿಕರ ನಿಜವಾದ ಜನಸಂಖ್ಯೆ ಗೊತ್ತಾಗುತ್ತದೆ. ಆಗ ನಮಗೆ ಮೀಸಲಾತಿ ಪಡೆಯಲು ಅನುಕೂಲವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕ್ಷೌರಿಕರ ಹೆಸರಿನಲ್ಲಿ ಕರೆಯಲ್ಪಡುವ ಸುಮಾರು 24 ಪಂಗಡಗಳಾದ ಬಂಡಾರಿ, ಹಡಪದ, ಸವಿತಾ, ಭಜಂತ್ರಿ, ನಾಯಿಂದ ಹಲವು ಹೆಸರಿನಿಂದ ಕರೆಯಲ್ಪಡುವ ಎಲ್ಲರೂ ಈ ಹೋರಾಟದಲ್ಲಿ ಭಾಗಿಯಾಗಲು ಸಜ್ಜಾಗಬೇಕು. ಕುರುಬ ಜನಾಂಗದ ಹೋರಾಟದ ಜೊತೆಯಲ್ಲಿ ಸೇರಿಸಿಕೊಂಡು ಎಸ್.ಟಿ.ಗೆ ಸೇರಿಸಬೇಕು ಎಂಬ ಕ್ಷೌರಿಕರ ಮನವಿಗೆ ಬೆಂಬಲ ವ್ಯಕ್ತಪಡಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಈ ಮೂಲಕ ರಾಜ್ಯದ ಎಲ್ಲಾ ಕ್ಷೌರಿಕರಿಗೂ ಅಪಾರವಾದಂತಹ ಗೌರವ ಮತ್ತು ಹೋರಾಟದ ಶಕ್ತಿ ತುಂಬಿ ಹಾಗೂ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ತಮ್ಮ ಹೋರಾಟದ ಜೊತೆಯಲ್ಲಿ ಸೇರಿಸಿಕೊಂಡು ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕು ಎಂದು ರಾಜ್ಯದ ಎಲ್ಲಾ ಕ್ಷೌರಿಕರ ಪರವಾಗಿ ಮನವಿ ಮಾಡಿಕೊಂಡಿದ್ದೇವೆ ಎಂದು ರಾಜ್ಯಾಧ್ಯಕ್ಷ ಎಂ.ಬಿ. ಶಿವಕುಮಾರ್ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಕನಕ ಗುರುಪೀಠ ಸ್ವಾಮೀಜಿಯವರಿಗೆ, ಕುರುಬ ಜನಾಂಗದ ಮಂತ್ರಿಗಳಿಗೆ, ಶಾಸಕರುಗಳಿಗೆ, ಮಾಜಿ ಮಂತ್ರಿಗಳು ಹಾಗೂ ಶಾಸಕರುಗಳಿಗೆ ಮತ್ತು ಕುರುಬ ಸಮುದಾಯದ ಮುಖಂಡರುಗಳಿಗೆ ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಗುವುದು ಎಂದು ಇದೇ ಸಂಧರ್ಭದಲ್ಲಿ ಅವರು ತಿಳಿಸಿದರು. ಈ ಬಗ್ಗೆ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9513766611ನ್ನು ಸಂಪರ್ಕಿಸಬಹುದು ಎಂದು ಎಂ.ಬಿ ಶಿವಕುಮಾರ್ ತಿಳಿಸಿದ್ದಾರೆ.
0 comments:
Post a Comment