ಅಬುಧಾಬಿ, ಅ. 16, 2020 (ಕರಾವಳಿ ಟೈಮ್ಸ್) : ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ, ವಿಕೆಟ್ ಕೀಪರ್ ಬ್ಯಾಟ್ಸಮನ್ ದಿನೇಶ್ ಕಾರ್ತಿಕ್ ಅವರು ನಾಯಕ ಸ್ಥಾನದಿಂದ ಶುಕ್ರವಾರ ಹಿಂದೆ ಸರಿದಿದ್ದು, ಇಂಗ್ಲಂಡ್ ತಂಡದ ಆಟಗಾರ ಇಯಾನ್ ಮಾರ್ಗನ್ ಅವರಿಗೆ ಜವಾಬ್ದಾರಿ ಹಸ್ತಾಂತರಿಸಿದ್ದಾರೆ. ಕೆಕೆಆರ್ ತಂಡವನ್ನು ಐಪಿಎಲ್-2020ಯಲ್ಲಿ ಮಧ್ಯಂತರದವರೆಗೂ ಮುನ್ನಡೆಸಿದ್ದ ಕಾರ್ತಿಕ್ ಅವರು, ಇಂದು ನಾಯಕತ್ವವನ್ನು ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಇಂದು ನಡೆಯುವ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಕೋಲ್ಕತ್ತಾ ತಂಡವನ್ನು ಹೊಸ ನಾಯಕ ಮಾರ್ಗನ್ ಮುನ್ನಡೆಸಲಿದ್ದಾರೆ. ಬ್ಯಾಟಿಂಗ್ ಕಡೆಗೆ ಗಮನ ಹರಿಸಬೇಕಾದ್ದರಿಂದ ಮತ್ತು ತಂಡಕ್ಕೆ ಮತ್ತಷ್ಟು ಕೊಡುಗೆ ನೀಡಬೇಕಾಗಿರುವುದರಿಂದ ನಾಯಕತ್ವ ತ್ಯಜಿಸುವುದಾಗಿ ಕೆಕೆಆರ್ ನಿರ್ವಹಣಾ ಸಮಿತಿಗೆ ಕಾರ್ತಿಕ್ ತಿಳಿಸಿದ್ದಾರೆ.
2018ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ನೇಮಕವಾಗಿದ್ದ ದಿನೇಶ್ ಕಾರ್ತಿಕ್ ಅವರು, ಸುಮಾರು 37 ಪಂದ್ಯಗಳಲ್ಲಿ ಕೋಲ್ಕತ್ತಾ ತಂಡವನ್ನು ಮುನ್ನಡೆಸಿದ್ದರು. ಜೊತೆಗೆ ಈ ಬಾರಿಯ ಐಪಿಎಲ್‍ನಲ್ಲೂ ಕೂಡ ಏಳು ಪಂದ್ಯಗಳಲ್ಲಿ ಕೋಲ್ಕತ್ತಾ ತಂಡವನ್ನು ಮುನ್ನಡೆಸಿ ಅದರಲ್ಲಿ ನಾಲ್ಕು ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ಕೋಲ್ಕತ್ತಾ ತಂಡ ನಾಲ್ಕರಲ್ಲಿ ಗೆದ್ದು ಮೂರು ಪಂದ್ಯಗಳಲ್ಲಿ ಸೋತು ಸದ್ಯ ಅಂಕಪಟ್ಟಿಯಲ್ಲಿ 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ನಾಯಕನಾಗಿ ತಂಡವನ್ನು ಮುನ್ನಡೆಸುವಲ್ಲಿ ದಿನೇಶ್ ಕಾರ್ತಿಕ್ ಅವರು ಕೊಂಚ ಎಡವಿದ್ದರು. ಜೊತೆಗೆ ಓರ್ವ ಬ್ಯಾಟ್ಸ್‍ಮ್ಯಾನ್ ಆಗಿ ಕೂಡ ತಂಡಕ್ಕೆ ಬೇಕಾದಾಗ ಬ್ಯಾಟ್ ಬೀಸುವಲ್ಲಿ ವಿಫಲರಾಗಿದ್ದರು. ಈ ಕಾರಣದಿಂದ ಮಾರ್ಗನ್ ಅವರಿಗೆ ನಾಯಕ್ವವನ್ನು ಬಿಟ್ಟುಕೊಡುವಂತೆ ಕೆಕೆಆರ್ ಅಭಿಮಾನಿಗಳು ಒತ್ತಾಯಿಸಿದ್ದರು. ಆದ್ದರಿಂದ ನಾಯಕ್ವ ಬಿಟ್ಟುಕೊಟ್ಟು ಬ್ಯಾಟಿಂಗ್ ಕಡೆ ಹೆಚ್ಚು ಗಮನ ನೀಡಲು ಕಾರ್ತಿಕ್ ತೀರ್ಮಾನ ಮಾಡಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಕೆಕೆಆರ್ ತಂಡದ ಸಿಇಒ ವೆಂಕಿ ಮೈಸೂರು, ನಮಗೂ ದಿನೇಶ್ ಕಾರ್ತಿಕ್ ಅವರ ತೀರ್ಮಾನ ಕೇಳಿ ಶಾಕ್ ಆಗಿದೆ. ಆದರೆ ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ. ಈ ಹಿಂದೆ ಭಾರತದ ಬೌಲರ್ ಶ್ರೀಶಾಂತ್ ಟ್ವೀಟ್ ಮಾಡಿ, ವಿಶ್ವಕಪ್ ವಿನ್ನಿಂಗ್ ಕ್ಯಾಪ್ಟನ್ ಇಯಾನ್ ಮಾರ್ಗನ್ ಕೆಕೆಆರ್ ತಂಡವನ್ನು ಮುನ್ನೆಡಸಬೇಕು ಎಂದು ಹೇಳಿದ್ದರು. ಈ ಎಲ್ಲ ಕಾರಣದಿಂದ ಕಾರ್ತಿಕ್ ನಾಯತ್ವದಿಂದ ಕೆಳಗೆ ಇಳಿದಿದ್ದಾರೆ.
0 comments:
Post a Comment