ನವದೆಹಲಿ, ಅಕ್ಟೋಬರ್ 01, 2020 (ಕರಾವಳಿ ಟೈಮ್ಸ್) : ಅದಷ್ಟು ಶೀಘ್ರವಾಗಿ ಸ್ಪೆಕ್ಟ್ರಂ ಹರಾಜು ನಡೆಸುವಂತೆ ರಿಲಯನ್ಸ್ ಜಿಯೋ ಕೇಂದ್ರ ಸರಕಾರದ ಟೆಲಿಕಾಂ ಸಚಿವಾಲಯಕ್ಕೆ ಸೆ. 28 ರಂದು ಪತ್ರ ಬರೆದು ಒತ್ತಾಯಿಸಿದೆ. ಸ್ಪೆಕ್ಟ್ರಂ ಹಂಚಿಕೆ ಸಂಬಂಧ ಯಾವ ಕಾರಣಕ್ಕೆ ಹರಾಜು ಪ್ರಕ್ರಿಯೆಯನ್ನು ತಡ ಮಾಡಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದು ಪತ್ರದಲ್ಲಿ ಕಳಕಳಿ ವ್ಯಕ್ತಪಡಿಸಿರುವ ಜಿಯೋ ಕಂಪೆನಿ ಹರಾಜು ವಿಳಂಬದಿಂದ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಹೂಡಿಕೆದಾರರಿಗೂ ಸಮಸ್ಯೆಯಾಗುವುದರ ಜೊತೆಗೆ ದೇಶದ ಆದಾಯಕ್ಕೂ ನಷ್ಟವಾಗುತ್ತಿದೆ ಎಂದು ತಿಳಿಸಿದೆ.
2012 ರಲ್ಲಿ ಸುಪ್ರೀಂ ಕೋರ್ಟ್ ಪ್ರತಿವರ್ಷ ಸ್ಪೆಕ್ಟ್ರಂ ಹಂಚಿಕೆ ಮಾಡಬೇಕೆಂದು ಸೂಚಿಸಿದೆ. ಹೀಗಿದ್ದರೂ ಯಾವ ಕಾರಣಕ್ಕೆ ಡಿಢೀರ್ ಹರಾಜು ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಕಂಪನಿಗಳು ತಮ್ಮ ವ್ಯವಹಾರಕ್ಕೆ ಅನುಗುಣವಾಗಿ ಖರೀದಿ ಮಾಡಬಹುದು. ಕಾರ್ಯನಿರ್ವಹಿಸುವ ಎಲ್ಲ ಕಂಪೆನಿಗಳು ಎಲ್ಲ ಬ್ಯಾಂಡ್ ಖರೀದಿಸಬೇಕು ಎಂಬುದು ಕಡ್ಡಾಯವಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ ಜಿಯೋ ಒಟ್ಟು 3.92 ಲಕ್ಷ ಕೋಟಿ ರೂಪಾಯಿ ಮೌಲ್ಯದ 1,461.5 ಮೆಗಾಹರ್ಟ್ಸ್ ಪೇರ್ಡ್ ಸ್ಪೆಕ್ಟ್ರಂ ಮತ್ತು 790 ಮೆಗಾಹರ್ಟ್ಸ್ ಅನ್ ಪೇರ್ಡ್ ಸ್ಪೆಕ್ಟ್ರಂ ಇಲ್ಲಿಯವರೆಗೆ ಬಳಕೆಯಾಗಿಲ್ಲ ಎಂದಿದೆ.
ಪತ್ರದಲ್ಲಿ ಯಾವುದೇ ಟೆಲಿಕಾಂ ಕಂಪೆನಿಯ ಹೆಸರು ಪ್ರಸ್ತಾಪ ಮಾಡದ ರಿಲಯನ್ಸ್ ಜಿಯೋ ಕೆಲವು ಸೇವಾ ಕಂಪೆನಿಗಳು ಸ್ಪೆಕ್ಟ್ರಂ ಹರಾಜಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಕೆಲವರ ಹಿತಾಸಕ್ತಿಗೆ ಪೂರಕವಾಗಿ ರಾಷ್ಟ್ರ ನಿರ್ಮಾಣದ £ನಿತಿಗಳನ್ನು ತಡೆ ಹಿಡಿಯುವುದು ಸರಿಯಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ಕಳೆದ ನಾಲ್ಕು ವರ್ಷದಲ್ಲಿ ನಮ್ಮ ಟ್ರಾಫಿಕ್ ವಿಥ್ ಪರ್ ಯೂಸರ್ ವಾಯ್ಸ್ ದುಪ್ಪಟ್ಟಾಗಿದೆ. ಡೇಟಾ ಬಳಕೆ 50 ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದ ಜಿಯೋ ಕೂಡಲೇ ಸ್ಪೆಕ್ಟ್ರಂ ಹರಾಜು ಮಾಡಿ ಎಂದು ಒತ್ತಾಯಿಸಿದೆ. ಆದರೆ ಏರ್‍ಟೆಲ್ ಮತ್ತು ವಿಐ ಕಂಪೆನಿಗಳು ಸ್ಪೆಕ್ಟ್ರಂ ದರ ದುಬಾರಿಯಾಗಿದೆ ಎಂದು ಹೇಳಿದೆ.
ಜಿಯೋ 700, 800, 900, 1800, 2100 ಮತ್ತು 2500 ಮೆಗಾಹರ್ಟ್ಸ್ ಬ್ಯಾಂಡ್ ಖರೀದಿಸಲು ಆಸಕ್ತಿ ತೋರಿಸಿದೆ. 5ಜಿ ಸೇವೆಗೆ ಇರುವ 3,300-3600 ಮೆಗಾಹರ್ಟ್ಸ್ ಬ್ಯಾಂಡ್ ಖರೀದಿಸಲು ಜಿಯೋ ಆಸಕ್ತಿ ತೋರಿಸಿಲ್ಲ.
ಭಾರತೀಯ ದೂರ ಸಂಪರ್ಕ ಪ್ರಾಧಿಕಾರ(ಟ್ರಾಯ್) ಬಿಡುಗಡೆ ಮಾಡಿದ ಜೂನ್ ತಿಂಗಳ ವರದಿಯಲ್ಲಿ ವಿಐ 48 ಲಕ್ಷ ಗ್ರಾಹಕರನ್ನು ಕಳೆದುಕೊಂಡರೆ, ಏರ್‍ಟೆಲ್ 11 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಬಿಎಸ್‍ಎನ್‍ಎಲ್ 17 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಇತ್ತ ಜಿಯೋಗೆ 45 ಲಕ್ಷ ಗ್ರಾಹಕರು ಹೊಸದಾಗಿ ಸೇರ್ಪಡೆಯಾಗಿದ್ದಾರೆ.
0 comments:
Post a Comment