ಶಾರ್ಜಾ, ನ. 01, 2020 (ಕರಾವಳಿ ಟೈಮ್ಸ್) : ಇಲ್ಲಿನ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿದೆ. ಈ ಮೂಲಕ ಹೈದರಾಬಾದ್ ಪ್ಲೇ ಆಫ್ ಸಮೀಪ ಬಂದರೆ, ಆರ್.ಸಿ.ಬಿ. ಪ್ಲೇ ಆಫ್ ಹಾದಿಯನ್ನು ಕಠಿಣ ಮಾಡಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಮಂದಗತಿಯ ಬ್ಯಾಟಿಂಗ್‍ಗೆ ಮುಂದಾಯ್ತು. ಅಂತಿಮವಾಗಿ ಸಂದೀಪ್ ಶರ್ಮಾ ಮತ್ತು ರಶೀದ್ ಖಾನ್ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ 20 ಓವರಿನಲ್ಲಿ ಕೇವಲ 120 ರನ್‍ಗಳನ್ನಷ್ಟೆ ಪೇರಿಸಿತು. ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ ಆರಂಭದಲ್ಲಿ ನಾಯಕ ವಾರ್ನರ್ ವಿಕೆಟ್ ಕಳೆದುಕೊಂಡರೂ ಬಳಿಕ ಚೇತರಿಸಿಕೊಂಡು ಅಂತಿಮವಾಗಿ ಐದು ವಿಕೆಟ್‍ಗಳಿಂದ ಗೆಲುವು ಸಾಧಿಸಿತು.
ಸತತವಾಗಿ ಎರಡು ಸೋಲನ್ನು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಾದಿಯನ್ನು ಕಠಿಣ ಮಾಡಿಕೊಂಡಿದೆ. ಸದ್ಯ 13 ಪಂದ್ಯಗಳಿಂದ 14 ಅಂಕಗಳಿಸಿರುವ ಬೆಂಗಳೂರು ಮುಂದಿನ ಪಂದ್ಯವನ್ನು ಸೋಮವಾರ ಡೆಲ್ಲಿ ವಿರುದ್ಧ ಆಡಲಿದೆ. ಆದರೆ ಡೆಲ್ಲಿ ಕೂಡ 13 ಪಂದ್ಯಗಳನ್ನು ಆಡಿ 14 ಅಂಕ ಗಳಿಸಿದೆ. ಹೀಗಾಗಿ ಈ ಎರಡು ತಂಡಗಳಿಗೂ ಸೋಮವಾರದ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಗೆದ್ದವರು ಸುಲಭವಾಗಿ ಪ್ಲೇ ಆಫ್ ತಲುಪಲಿದ್ದಾರೆ. ಸೋತವರ ಭವಿಷ್ಯ ನೆಟ್ ರನ್‍ರೇಟ್ ಆಧಾರದ ಮೇಲೆ ನಿರ್ಧಾವಾಗಲಿದೆ.
121 ರನ್‍ಗಳ ಸಾಧಾರಣ ಮೊತ್ತ ಬೆನ್ನಟ್ಟಲು ಹೊರಟ ಸನ್‍ರೈಸರ್ಸ್ ಹೈದರಾಬಾದ್ ತಂಡಕ್ಕೆ ಬೆಂಗಳೂರು ತಂಡದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರು ಶಾಕ್ ನೀಡಿದರು. ಎರಡನೇ ಓವರಿನಲ್ಲೇ ನಾಯಕ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡಿದರು. ನಂತರ ಜೊತೆಯಾದ ವೃದ್ಧಿಮಾನ್ ಸಹಾ ಮತ್ತು ಮನೀಶ್ ಪಾಂಡೆ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಹೀಗಾಗಿ ಪವರ್ ಪ್ಲೇ ಮುಕ್ತಾಯಕ್ಕೆ ಹೈದರಾಬಾದ್ ತಂಡ ಒಂದು ವಿಕೆಟ್ ಕಳೆದುಕೊಂಡು 58 ರನ್ ಗಳಿಸಿತು.
ಬಳಿಕ ದಾಳಿಗಿಳಿದ ಯುಜ್ವೇಂದ್ರ ಚಹಲ್ ಅವರು 26 ರನ್ (19 ಎಸೆತ) ಸಿಡಿಸಿ ಆಡುತ್ತಿದ್ದ ಮನೀಶ್ ಪಾಂಡೆ ಅವರನ್ನು ಔಟ್ ಮಾಡಿದರು. ನಂತರ ವೃದ್ದಿಮಾನ್ ಸಾಹಾ 39 ರನ್ (32 ಎಸೆತ) ಕೂಡಾ ಯುಜ್ವೇಂದ್ರ ಚಹಲ್ ಎಸೆತದಲ್ಲಿ ಎಬಿ ಡಿವಿಲಿಯರ್ಸ್ ಅವರ ಅದ್ಭುತ ಸ್ಟಂಪ್‍ಗೆ ಬಲಿಯಾದರು. ನಂತರ ಇಸುರು ಉದಾನಾ ಅವರು ಕೇನ್ ವಿಲಿಯಮ್ಸನ್ ಅವರನ್ನು ಔಟ್ ಮಾಡಿದರು.
ನಂತರ ಕ್ರೀಸಿಗಿಳಿದ ಜೇಸನ್ ಹೋಲ್ಡರ್ ಅವರು ಸಿಕ್ಸರ್ ಗಳ ಮೂಲಕ ರಂಜಿಸಿದರು. ಈ ನಡುವೆ ಅಭಿಷೇಕ್ ಶರ್ಮಾ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟ್ ಆದರು. ಬಳಿಕ ಬಂದ ಅಬ್ದುಲ್ ಸಮದ್ ಹಾಗೂ ಜೇಸನ್ ಹೋಲ್ಡರ್ ಜೋಡಿ ಹೈದರಾಬಾದ್ ತಂಡವನ್ನು ಗೆಲುವಿನ ದಡ ಸೇರಿಸಿತು. ಜೇಸನ್ ಹೋಲ್ಡರ್ 10 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ಒಳಗೊಂಡ 26 ರನ್ ಸಿಡಿಸಿದರು.
0 comments:
Post a Comment