ದುಬೈ, ಅ. 28, 2020 (ಕರಾವಳಿ ಟೈಮ್ಸ್) : ಇಲ್ಲಿನ ಅಂತರರಾಷ್ಟ್ರೀಯ ಮೈದಾನದಲ್ಲಿ ಮಂಗಳವಾರ ರಾತ್ರಿ ನಡೆದ ಐಪಿಎಲ್-2020 ರ 47ನೇ ಪಂದ್ಯದಲ್ಲಿ ವೃದ್ಧಿಮಾನ್ ಸಹಾ (87) ಹಾಗೂ ಡೇವಿಡ್ ವಾರ್ನರ್ (66) ಅವರ ಅತ್ಯಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಹೈದರಬಾದ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬರೋಬ್ಬರಿ 88 ರನ್ ಅಂತರದ ಜಯ ದಾಖಲಿಸಿದೆ.
ನಿಗದಿತ 20 ಓವರ್‍ಗಳಲ್ಲಿ ಹೈದರಬಾದ್ ತಂಡ 2 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು. ಕಠಿಣ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಪಂದ್ಯದ ಯಾವುದೇ ಹಂತದಲ್ಲೂ ಪ್ರತಿರೋಧ ತೋರದೆ ಕೇವಲ 131 ರನ್‍ಗಳಿಗೆ ಅಲೌಟ್ ಆಗಿ ಸುಲಭವಾಗಿ ಶರಣಾಯಿತು.
ಇಂದಿನ ಪಂದ್ಯದ ಬಳಿಕ ಐಪಿಎಲ್-2020 ರ ಪ್ಲೇ ಆಫ್ ರೇಸ್ ಒಂದು ರೀತಿಯ ರೋಚಕ ಘಟ್ಟಕ್ಕೆ ಬಂದು ತಲುಪಿತು. 10 ಅಂಕಗಳೊಂದಿಗೆ 6ನೇ ಸ್ಥಾನಕ್ಕೆ ನೆಗೆತ ಕಂಡ ಹೈದರಾಬಾದ್ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಡೆಲ್ಲಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿತ ಕಂಡಿತು. ಡೆಲ್ಲಿ ಈ ಸೋಲಿನ ಮೂಲಕ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗುವುದನ್ನು ಕಳೆದುಕೊಂಡಿದ್ದು, ಈ ಅವಕಾಶ ಪಡೆಯುವ ತಂಡವನ್ನು ಬುಧವಾರದ ಮುಖಾಮುಖಿ ಸಾಬೀತುಪಡಿಸಲಿದೆ.
ಡೆಲ್ಲಿ ತಂಡ 12 ಪಂದ್ಯಗಳಿಂದ 14 ಅಂಕಗಳಿಸಿದರೆ ಮುಂಬೈ ಮತ್ತು ಬೆಂಗಳೂರು 11 ಪಂದ್ಯಗಳಿಂದ ತಲಾ 14 ಅಂಕಗಳಿಸಿದೆ. ಬುಧವಾರ ನಡೆಯುವ ಮುಂಬೈ-ಬೆಂಗಳೂರು ನಡುವಿನ ಪಂದ್ಯದ ವಿಜೇತ ತಂಡ ಮೊದಲ ತಂಡವಾಗಿ ಪ್ಲೇ ಆಫ್ ಪ್ರವೇಶಿಸಲಿದೆ. ಉಳಿದಂತೆ ಪಂಜಾಬ್ ಮತ್ತು ಕೋಲ್ಕತ್ತಾ 12 ಪಂದ್ಯಗಳಿಂದ 12 ಅಂಕ ಗಳಿಸಿದರೆ ಹೈದರಾಬಾದ್ ಮತ್ತು ರಾಜಸ್ಥಾನ 12 ಪಂದ್ಯಗಳಿಂದ 10 ಅಂಕ ಪಡೆದಿದೆ. 12 ಪಂದ್ಯಗಳಿಂದ 8 ಅಂಕ ಗಳಿಸಿರುವ ಚೆನ್ನೈ ಈಗಾಗಲೇ ಪ್ಲೇ ಆಫ್ ರೇಸ್‍ನಿಂದ ಹೊರ ಬಿದ್ದಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪರ ರಹಾನೆ 26, ಮರ್ಕಸ್ ಸ್ಟೋನಿ 5, ಹಿಟ್ಮೇಯರ್ 16, ಪಂತ್ 36, ಅಯ್ಯರ್ 7, ಅಕ್ಸರ್ ಪಾಟೀಲ್ 1, ರಬಡಾ 3, ಅಶ್ವಿನ್ 7, ತುಷಾರ್ ದೇಶಪಾಂಡೆ 20, ಅರ್ನಿಚ್ 1 ರನ್ ಗಳಿಸಿದರು. ಹೈದರಾಬಾದ್ ಪರ ರಶೀದ್ ತಮ್ಮ ಕೋಟಾದ 4 ಓವರ್‍ಗಳಲ್ಲಿ ಕೇವಲ 7 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರೆ, ಸಂದೀಪ್ ಶರ್ಮಾ, ನಟರಾಜನ್ ತಲಾ 2 ವಿಕೆಟ್ ಪಡೆದರು.
ಡೆಲ್ಲಿ ತಂಡಕ್ಕಿದು ಸತತ 3ನೇ ಸೋಲಾಗಿದ್ದು, ಈ ಹಿಂದೆ ಕೆಕೆಆರ್ ಹಾಗೂ ಪಂಜಾಬ್ ವಿರುದ್ಧ ಸೋಲು ಅನುಭವಿಸಿತ್ತು. ಒಟ್ಟು 12 ಪಂದ್ಯಗಳನ್ನು ಆಡಿರುವ ಡೆಲ್ಲಿಗೆ ಇದು 5ನೇ ಸೋಲಾಗಿದೆ. ಉಳಿದಿರುವ ಎರಡು ಪಂದ್ಯಗಳಿಂದ ಪ್ಲೇ-ಆಫ್ ಅವಕಾಶ ಪಡೆಯಲು ಒಂದು ಪಂದ್ಯವನ್ನು ಗೆಲ್ಲಲೇಬೇಕಿದೆ. 12 ಪಂದ್ಯಗಳಿಂದ 5 ಗೆಲುವು ಸಾಧಿಸಿರುವ ಹೈದರಾಬಾದ್ ತಂಡ ಪ್ಲೇ ಆಫ್ ತಲುಪಲು ಉಳಿದ 2 ಪಂದ್ಯಗಳನ್ನು ಗೆಲ್ಲಬೇಕಿದೆ.
0 comments:
Post a Comment