ಸನ್ ರೈಸರ್ಸ್ ಗೆ 7 ರನ್‍ಗಳ ರೋಚಕ ಜಯ, ಧೋನಿ ಪಡೆಗೆ ಸತತ 3ನೇ ಸೋಲು
ದುಬೈ, ಅ. 03, 2020, (ಕರಾವಳಿ ಟೈಮ್ಸ್) : ಇಲ್ಲಿನ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಸತತ 3ನೇ ಸೋಲು ಅನುಭವಿಸಿದೆ. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಚೆನ್ನೈ ವಿರುದ್ದ ಹೈದ್ರಾಬಾದ್ ಸನ್ ರೈಸರ್ಸ್ ರೋಚಕ 7 ರನ್‍ಗಳಿಂದ ಗೆಲುವು ಸಾಧಿಸಿದೆ. ಹೈದ್ರಾಬಾದ್ ತಂಡದ ಯಶಸ್ವಿ ಬೌಲರ್‍ಗಳಾದ ಸ್ಪಿನ್ನರ್ ರಶೀದ್ ಖಾನ್ ಹಾಗೂ ವೇಗಿ ಭುವನೇಶ್ವರ್ ಕುಮಾರ್ ಅವರು ಧೋನಿ ಪಡೆಯ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿ ಪಂದ್ಯವನ್ನು ಜಯಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ಅಭಿಷೇಕ್ ಶರ್ಮಾ ಮತ್ತು ಪ್ರಿಯಮ್ ಗಾರ್ಗ್ ಅವರ ಉತ್ತಮ ಜೊತೆಯಾಟದಿಂದ ನಿಗದಿತ 20 ಓವರಿನಲ್ಲಿ 165 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ತಂಡದ ದಾಂಡಿಗರು ನಿಧಾನಗತಿಯ ಆಟಕ್ಕೆ ಮೊರೆ ಹೋದ ಪರಿಣಾಮ ಪಂದ್ಯ ಕೈತಪ್ಪಿದೆ. ಇನ್ನಿಂಗ್ಸ್ನ ಅಂತ್ಯದವರೆಗೂ ಹೋರಾಟ ನಡೆಸಿದ ನಾಯಕ ಧೋನಿ ತಂಡವನ್ನು ದಡ ಸೇರಿಸುವಲ್ಲಿ ವಿಫಲರಾದರು. ಅಂತಿಮವಾಗಿ ಚೆನ್ನೈ ತಂಡ ನಿಗದಿತ 20 ಓವರಿನಲ್ಲಿ 157 ರನ್ ಹೊಡೆದು ಕೇವಲ 7 ರನ್ ಅಂತರದಲ್ಲಿ ಸೋಲುಂಡಿತು.
ಗಾಯಾಳು ಭುವನೇಶ್ ಕುಮಾರ್ 3 ಓವರ್ ಎಸೆದು 20 ರನ್ ಮಾತ್ರ ಬಿಟ್ಟುಕೊಟ್ಟು 1 ವಿಕೆಟೆ ಬಗಲಿಗೆ ಹಾಕಿಕೊಂಡರೆ, ನಟರಾಜನ್ ಅವರು 2 ಪ್ರಮುಖ ವಿಕೆಟ್ ಕಿತ್ತು ಚೆನ್ನೈ ಬೆನ್ನುಲುಬು ಮುರಿದರು. ಈ ನಡುವೆ ಮತ್ತೆ ಕೈ ಚಳಕ ತೋರಿದ ಸ್ಪಿನ್ನರ್ ರಶೀದ್ ಖಾನ್ ಯಾವುದೇ ವಿಕೆಟ್ ಪಡೆಯಲು ವಿಫಲರಾದರೂ ಸಂಪೂರ್ಣ ನಿಯಂತ್ರಿತ ದಾಳಿ ನಡೆಸಿ ತನ್ನ ನಾಲ್ಕು ಓವರ್‍ಗಳ ಪಾಳಿಯಲ್ಲಿ ಕೇವಲ 12 ರನ್ ಮಾತ್ರ ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟು ಚೆನ್ನೈ ದಾಂಡಿಗರನ್ನು ಕಟ್ಟಿ ಹಾಕುವಲ್ಲಿ ಸಫಲರಾದರು.
ಆರಂಭದಿಂದಲೇ ಚೆನ್ನೈ ದಾಂಡಿಗರನ್ನು ಕಟ್ಟಿ ಹಾಕುವಲ್ಲಿ ಹೈದ್ರಾಬಾದ್ ಬೌಲರ್‍ಗಳು ಸಫಲರಾದರು. ಇನ್ನಿಂಗ್ಸಿನ ದ್ವಿತೀಯ ಓವರಿನ 3ನೇ ಎಸೆತದಲ್ಲಿ ಭುವನೇಶ್ವರ್ ಕುಮಾರ್ ಅವರಿಗೆ ಶೇನ್ ವ್ಯಾಟ್ಸನ್ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ಅಂಬಾಟಿ ರಾಯುಡು ಅವರು 5ನೇ ಓವರಿನಲ್ಲಿ ನಟರಾಜನ್ ಅವರಿಗೆ ಕ್ಲೀನ್ ಬೌಲ್ಡ್ ಆದರು. ನಂತರ ಕ್ವಿಕ್ ರನ್ ಪಡೆಯಲು ಹೋದ ಫಾಫ್ ಡು ಪ್ಲೆಸಿಸ್ ಅವರು 22 ರನ್ ಗಳಿಸಿ ಪೆವಿಲಯನ್ ಸೇರಿದರು.
ಹೈದ್ರಾಬಾದ್ ಸನ್ ರೈಸರ್ಸ್ ವೇಗಿಗಳ ನಿಖರ ದಾಳಿಗೆ ನಿರುತ್ತರರಾದ ಚೆನ್ನೈ ಆಟಗಾರರು ಪವರ್ ಪ್ಲೇ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು ಕೇವಲ 36 ರನ್ ಗಳಿಸಿದ್ದರು. ನಂತರ ಅಬ್ದುಲ್ ಸಮದ್ ಅವರ ಸ್ಪಿನ್ ಮೋಡಿಗೆ ಬಲಿಯಾದ ಕೇದಾರ್ ಜಾಧವ್ ಅವರು ಕೇವಲ ಮೂರು ರನ್ ಗಳಿಸಿ ಔಟಾದರು. ಧೋನಿ ಹಾಗೂ ಜಡೇಜಾ ದೀರ್ಘ ಸಮಯ ಕ್ರೀಸಿನಲ್ಲಿದ್ದರೂ ವೇಗವಾಗಿ ರನ್ ಗಳಿಸಲು ಪರದಾಡಿದರು. ಈ ವೇಳೆ ತಾಳ್ಮೆಯ ಆಟಕ್ಕೆ ಮುಂದಾದ ಧೋನಿ ಮತ್ತು ಜಡೇಜಾ 56 ಎಸೆತಗಳಲ್ಲಿ 71 ರನ್‍ಗಳ ಜೊತೆಯಾಟವಾಡಿದರು. 34 ಎಸೆತದಲ್ಲಿ ಶತಕ ಸಿಡಿಸಿದ ಜಡೇಜಾ ನಟರಾಜನ್ ಅವರ 17ನೇ ಓವರನಲ್ಲಿ ಔಟ್ ಆದರು.
0 comments:
Post a Comment