ದುಬೈ, ಅ. 09, 2020 (ಕರಾವಳಿ ಟೈಮ್ಸ್) : ಮಾಂತ್ರಿಕ ಸ್ಪಿನ್ನರ್ ರಶೀದ್ ಖಾನ್ ಮತ್ತೆ ತನ್ನ ಕೈಚಳಕ ತೋರಿದ್ದು, ಪರಿಣಾಮ ಸನ್‍ರೈಸರ್ಸ್ ಹೈದರಾಬಾದ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ 69 ರನ್‍ಗಳ ಭರ್ಜರಿ ಗೆಲುವು ತನ್ನದಾಗಿಸಿಕೊಂಡು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
ಗುರುವಾರ ರಾತ್ರಿ ದುಬೈ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್-2020 ಕೂಟದ 22ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಾಯಕ ವಾರ್ನರ್ ಮತ್ತು ಜಾನಿ ಬೈರ್‍ಸ್ಟೋವ್ ಅವರಿಬ್ಬರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರಿನಲ್ಲಿ 201 ರನ್ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡ ರಶೀದ್ ಖಾನ್ ಸಹಿತ ಹೈದರಾಬಾದ್ ತಂಡದ ಬೌಲರ್‍ಗಳ ನಿಖರ ದಾಳಿಗೆ ಸಿಲುಕಿ 16.5 ಓವರ್‍ಗಳಲ್ಲೇ ಕೇವಲ 132 ರನ್ ಗಳಿಸಿ ಆಲೌಟ್ ಆಯಿತು. ಈ ಮೂಲಕ ಪಂಜಾಬ್ ತಂಡ ಟೂರ್ನಿಯಲ್ಲಿ 5ನೇ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಇದೆ.
ಪಂದ್ಯದಲ್ಲಿ ಹೈದ್ರಾಬಾದ್ ಬೌಲರ್‍ಗಳು ಪಂಜಾಬ್ ತಂಡವನ್ನು ಅಕ್ಷರಶಃ ಕಟ್ಟಿ ಹಾಕಿದರು. ಅದ್ಭುತ ದಾಳಿಗಾರಿಕೆ ನಡೆಸಿದ ಸ್ಪಿನ್ನರ್ ರಶೀದ್ ಖಾನ್ 4 ಓವರ್‍ಗಳನ್ನು ಎಸೆದು ಒಂದು ಓವರ್ ಮೇಡನ್ ಸಹಿತ ಕೇವಲ 12 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿ ಮಿಂಚಿದರು. ಇನ್ನಿಂಗ್ಸಿನ 15ನೇ ಓವರ್ ಎಸೆದ ರಶೀದ್ ಖಾನ್ ಮೇಡನ್ ಓವರ್ ಮಾಡಿ ಆ ಓವರಿನಲ್ಲಿ 2 ವಿಕೆಟ್ ಕಿತ್ತು ಪಂಜಾಬ್ ತಂಡದ ಹೆಡೆಮುರಿ ಕಟ್ಟಿದರು. ವೇಗಿಗಳಾದ ಖಲೀಲ್ ಅಹ್ಮದ್ ಹಾಗೂ ಟಿ ನಟರಾಜನ್ ತಲಾ 2 ವಿಕೆಟ್ ಪಡೆದರು.
ದೊಡ್ಡ ಮೊಟ್ಟದ ರನ್ ಬೆನ್ನಟ್ಟಿದ ಪಂಜಾಬ್ ತಂಡ ಆರಂಭದಲ್ಲೇ ಎಡವಿತು. ಎರಡನೇ ಓವರಿನಲ್ಲೇ ಇಲ್ಲದ ರನ್ ಕದಿಯಲು ಹೋದ ಮಯಾಂಕ್ ಅಗರ್ವಾಲ್ ಅವರು ರನೌಟ್ ಆದರು. ನಂತರ ಬಂದ ಸಿಮ್ರಾನ್ ಸಿಂಗ್ ಅವರು ಸ್ಫೋಟಕ ಆಟಕ್ಕೆ ಮುಂದಾಗಿ 11 ರನ್ ಗಳಿಸಿ ಖಲೀಲ್ ಅಹ್ಮದ್ ಬೌಲಿಂಗ್‍ನಲ್ಲಿ ಪ್ರಿಯಮ್ ಗರ್ಗ್ ಅವರಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. 6 ಓವರ್ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು ಪಂಜಾಬ್ ಕೇವಲ 45 ರನ್ ಗಳಿಸಿತ್ತು.
ಈ ಮಧ್ಯೆ ತಾಳ್ಮೆಯ ಆಟಕ್ಕೆ ಮುಂದಾಗಿದ್ದ ನಾಯಕ ಕೆಎಲ್ ರಾಹುಲ್ ಅವರನ್ನು ಅಭಿಷೇಕ್ ಶರ್ಮಾ ಅವರು ಔಟ್ ಮಾಡಿದರು. 16 ಬಾಲಿಗೆ 11 ರನ್ ಗಳಿಸಿದ್ದ ರಾಹುಲ್ ಕೇನ್ ವಿಲಿಯಮ್ಸನ್ ಅವರಿಗೆ ಕ್ಯಾಚ್ ನೀಡಿ ಹೊರನಡೆದರು. ನಂತರ ಅಬ್ಬರಿಸಿದ ನಿಕೋಲಸ್ ಪೂರನ್ ಅವರು ಕೇವಲ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಐಪಿಎಲ್‍ನಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ ಐದನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. 2018 ರಲ್ಲಿ 14 ಎಸೆತಗಳಲ್ಲಿ 50 ರನ್ ಭಾರಿಸಿದ ಕೆಎಲ್ ರಾಹುಲ್ ಅವರು ಮೊದಲ ಸ್ಥಾನದಲ್ಲಿದ್ದಾರೆ.
ಬಳಿಕ 11 ಎಸೆತಗಳಲ್ಲಿ 7 ರನ್ ಸಿಡಿಸಿ ಆಡುತ್ತಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಪ್ರಿಯಮ್ ಗಾರ್ಗ್ ಅವರ ಡೈರೆಕ್ಟ್ ಹಿಟ್‍ಗೆ ಬಲಿಯಾದರು. ನಂತರ ಬಂದ ಮಂದೀಪ್ ಸಿಂಗ್ ಅವರು ರಶೀದ್ ಖಾನ್ ಅವರ ಗೂಗ್ಲಿಗೆ ಬಲಿಯಾದರು. 37 ಎಸೆತಗಳಲ್ಲಿ 7 ಸಿಕ್ಸರ್, 5 ಬೌಂಡರಿ ಸಹಿತ 77 ರನ್ ಭಾರಿಸಿ ಆಡುತ್ತಿದ್ದ ನಿಕೋಲಸ್ ಪೂರನ್ ಅವರು, ರಶೀದ್ ಖಾನ್‍ಗೆ ಬಲಿಯಾದರು. ಬಳಿಕ ಕ್ರೀಸಿಗೆ ಬಂದ ಮೊಹಮ್ಮದ್ ಶಮಿ ಶೂನ್ಯಕ್ಕೆ ಔಟ್ ಆಗಿ ಹೊರ ನಡೆದರು. ಬಳಿಕ ಬಂದ ಪಂಜಾಬ್ ದಾಂಡಿಗರು ಪೆವಿಲಿಯನ್ ಪೆರೇಡ್ ನಡೆಸಿದ ಪರಿಣಾಮ ತಂಡ ಅಂತಿಮವಾಗಿ 132 ಗಳಿಗೆ ಅಲೌಟ್ ಆಯಿತು.
0 comments:
Post a Comment