ಚುಟುಕು ಕ್ರಿಕೆಟ್‍ನಲ್ಲಿ ಸಾವಿರ ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಗೇಲ್
ಅಬುಧಾಬಿ, ಅ. 31, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಐಪಿಎಲ್-2020ನೇ ಆವೃತ್ತಿಯ 50ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಕಿಂಗ್ ಇಲೆವೆನ್ ಪಂಜಾಬ್ ತಂಡಕ್ಕೆ ಭರ್ಜರಿ ಸೋಲುಣಿಸಿದೆ. ಈ ಮೂಲಕ ರಾಜಸ್ಥಾನ ತನ್ನ ಪ್ಲೇ ಆಫ್ ಹಂತಕ್ಕೇರುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಪಂಜಾಬ್ ಗೆಲುವಿನ ಓಟಕ್ಕೂ ಇದರಿಂದ ಕಡಿವಾಣ ಬಿದ್ದಂತಾಗಿದ್ದು, ಪಂಜಾಬ್ ಸುಲಭವಾಗಿ ಪ್ಲೇ ಆಫ್ ತಲುಪುವ ದಾರಿ ಇದೀಗ ಕ್ಲಿಷ್ಟಕರವಾಗಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕ್ರಿಸ್ ಗೇಲ್ ಸಿಡಿಸಿದ ಅಬ್ಬರ 99 ರನ್ ಹಾಗೂ ನಾಯಕ ಕೆ ಎಲ್ ರಾಹುಲ್ ಅವರ ಸಮಯೋಚಿತ 46 ರನ್‍ಗಳ ಸಹಕಾರದಿಂದ ನಿಗದಿತ 20 ಓವರ್‍ಗಳಲ್ಲಿ 185 ರನ್ ಪೇರಿಸಿತ್ತು. ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಬೆನ್ ಸ್ಟೋಕ್ಸ್ ಮತ್ತು ಸ್ಯಾಮ್ಸನ್ ಅವರ ಜವಾಬ್ದಾರಿಯುವ ಬ್ಯಾಟಿಂಗಿನಿಂದಾಗಿ 15 ಎಸೆತಗಳು ಬಾಕಿ ಇರುತ್ತಲೇ ಕೇವಲ 3 ವಿಕೆಟ್ ಕಳೆದುಕೊಂಡು 186 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು.
ರಾಜಸ್ಥಾನ್ ರಾಯಲ್ಸ್ ತಂಡ ಇನ್ನಿಂಗ್ಸ್ ಆರಂಭದಿಂದಲೇ ಪಂಜಾಬ್ ಬೌಲರ್‍ಗಳ ಮೇಲೆ ಸವಾರಿ ಮಾಡಿತು. ಬೆನ್ ಸ್ಟೋಕ್ಸ್ 24 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್‍ಗಳುಳ್ಳ ಅರ್ಧಶತಕ ಸಿಡಿಸಿ ಉತ್ತಮ ಆರಂಭ ನೀಡಿದರು. ಬಳಿಕ ಬಂದ ಸಂಜು ಸ್ಯಾಮ್ಸನ್ ಅವರು, 25 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಗಳುಳ್ಳ 48 ರನ್ ಸಿಡಿಸಿ ರಾಜಸ್ಥಾನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಪಂಜಾಬ್ ನೀಡಿದ 185 ರನ್ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಅದ್ಭುತ ಆರಂಭ ದೊರೆಯಿತು. ಆರಂಭಿಕರಾಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ ಮತ್ತು ಬೆನ್ ಸ್ಟೋಕ್ಸ್ ಸ್ಫೋಟಕ ಆರಂಭ ನೀಡಿದರು. ಆರಂಭದಿಂದಲೇ ಅಬ್ಬರಿಸಿದ ಬೆನ್ ಸ್ಟೋಕ್ಸ್ 24 ಎಸೆತಗಳಲ್ಲೇ ಅರ್ಧ ಶತಕ ಪೂರ್ತಿಗೊಳಿಸಿದರು. 6ನೇ ಓವರಿನಲ್ಲಿ ಕ್ರಿಸ್ ಜೋರ್ಡಾನ್ ಅವರ ಎಸೆತದಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ಜೊತೆಯಾದ ರಾಬಿನ್ ಉತ್ತಪ್ಪ ಹಾಗೂ ಸಂಜು ಸ್ಯಾಮ್ಸನ್ ಉತ್ತಮ ಜೊತೆಯಾಟ ನಡೆಸಿದರು. ಕೊನೆಯಲ್ಲಿ ಜೊತೆಯಾದ ಸ್ಟೀವನ್ ಸ್ಮಿತ್ ಮತ್ತು ಜೋಸ್ ಬಟ್ಲರ್ ಸಿಕ್ಸರ್-ಬೌಂಡರಿಗಳಿಂದ ಅಬ್ಬರಿಸಿ ತಂಡಕ್ಕೆ 7 ವಿಕೆಟ್‍ಗಳ ಜಯ ತಂದುಕೊಟ್ಟರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರವಾಗಿ ಕ್ರಿಸ್ ಗೇಲ್ 63 ಎಸೆತದಲ್ಲಿ ಆರು ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‍ಗಳಿರ್ಂದ ಕೂಡಿದ 99 ರನ್ ಬಾರಿಸಿದ್ದರು. ನಾಯಕ ರಾಹುಲ್ 41 ಎಸೆತಗಳಳಲ್ಲಿ 46 ರನ್ ಸಿಡಿಸಿದರು.
8 ಸಿಕ್ಸರ್ ಸಿಡಿಸಿ ಟಿ-20 ಇತಿಹಾಸದಲ್ಲಿ ದಾಖಲೆ ಬರೆದ ಗೇಲ್
ಐಪಿಎಲ್ ಕೂಟದ 50ನೇ ಪಂದ್ಯದಲ್ಲಿ 8 ಸಿಕ್ಸರ್ ಸಿಡಿಸಿದ ಪಂಜಾಬ್ ಆಟಗಾರ ಕ್ರಿಸ್ ಗೇಲ್ ಅವರು ಚುಟುಕು ಮಾದರಿಯ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಟಿ-20ಯಲ್ಲಿ 1 ಸಾವಿರ ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಗೇಲ್ ಪಾತ್ರರಾಗಿದ್ದಾರೆ. ರಾಜಸ್ಥಾನ ವಿರುದ್ದದ ಶುಕ್ರವಾರದ ಪಂದ್ಯದಲ್ಲಿ ಅವರು ಬರೋಬ್ಬರಿ 8 ಸಿಕ್ಸರ್‍ಗಳನ್ನು ಸಿಡಿಸಿ ಅಬ್ಬರಿಸಿದರು.
ವೆಸ್ಟ್ ಇಂಡೀಸ್ ಪರ ಅಂತಾರಾಷ್ಟ್ರೀಯ ಟಿ-20 ಪಂದ್ಯ, ಐಪಿಎಲ್ ಮತ್ತು ಬಿಗ್ ಬ್ಯಾಷ್ ಸೇರಿದಂತೆ ಗೇಲ್ ಹಲವಾರು ಟಿ-20 ಟೂರ್ನಿಗಳನ್ನು ಆಡಿದ್ದು, ಈ ಎಲ್ಲ ಪಂದ್ಯಗಳಿಂದ ಕೇವಲ ಟಿ-20 ಪಂದ್ಯಗಳಲ್ಲೇ 10 ಸಾವಿರ ರನ್ ಸಿಡಿಸಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ 349 ಸಿಕ್ಸ್ ಮತ್ತು 4760 ರನ್ ಬಾರಿಸಿದ್ದಾರೆ. ಅಲ್ಲದೆ ಅತೀ ಹೆಚ್ಚು ಶತಕ (6) ಮತ್ತು ಅತೀ ಹೆಚ್ಚು ವೈಯಕ್ತಿಕ ರನ್ (175) ಭಾರಿಸಿದ ಬ್ಯಾಟ್ಸ್‍ಮನೆ ಎಂಬ ಹೆಗ್ಗಳಿಗೂ ಪಾತ್ರರಾಗಿದ್ದಾರೆ.
0 comments:
Post a Comment