ಶತಕ-ಅರ್ಧ ಶತಕದೊಂದಿಗೆ ಮಿಂಚಿದ ಸ್ಟೋಕ್ಸ್-ಸ್ಯಾಮ್ಸನ್
ಅಬುಧಾಬಿ, ಅ. 26, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ದ್ವಿತೀಯ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು 8 ವಿಕೆಟ್‍ಗಳಿಂದ ಬಗ್ಗುಬಡಿದಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಉತ್ತಮ ಜೊತೆಯಾಟ ಮತ್ತು ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಸ್ಫೋಟಕ ಆಟದ ನಿಗದಿತ 20 ಓವರ್ ಗಳಲ್ಲಿ 194 ರನ್ ಗಳಿಸಿತು. 195 ರನ್‍ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ತಂಡ ಬೆನ್ ಸ್ಟೋಕ್ಸ್ ಮತ್ತು ಸಂಜು ಸ್ಯಾಮ್ಸನ್ ಅವರ ಶತಕ ಜೊತೆಯಾಟದಿಂದ 10 ಎಸೆತಗಳು ಬಾಕಿ ಉಳಿದಿರುವಂತೆಯೇ ಸುಲಭ ಜಯ ದಾಖಲಿಸಿತು.
ಆರಂಭದಲ್ಲಿ 5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿ ಸಂಕಷ್ಟಕ್ಕೊಳಗಾಗಿತ್ತು. ಈ ವೇಳೆ ಜೊತೆಯಾದ ಬೆನ್ ಸ್ಟೋಕ್ಸ್ ಮತ್ತು ಸಂಜು ಸ್ಯಾಮ್ಸನ್ ರಾಜಸ್ಥಾನವನ್ನು ಗೆಲುವಿನ ದಡ ಸೇರಿಸಿದರು. ಈ ವೇಳೆ ಉತ್ತಮ ಜೊತೆಯಾಟವಾಡಿದ ಅವರು, 82 ಬಾಲಿಗೆ 152 ರನ್‍ಗಳ ಜೊತೆಯಾಟವಾಡಿದರು. ಬೆನ್ ಸ್ಟೋಕ್ಸ್ 60 ಎಸೆತಗಳಲ್ಲಿ 107 ರನ್ ಸಿಡಿಸಿ ಐಪಿಎಲ್‍ನಲ್ಲಿ ಎರಡನೇ ಶತಕ ಬಾರಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಸಂಜು ಸ್ಯಾಮ್ಸನ್ 31 ಎಸೆತಗಳಲ್ಲಿ 54 ರನ್ ಸಿಡಿಸಿದರು.
ಐದು ಓವರ್ ಬಳಿಕ ಕ್ರೀಸಿನಲ್ಲಿ ನೆಲೆಯೂರಿದ ಬೆನ್ ಸ್ಟೋಕ್ಸ್ ಮತ್ತು ಸಂಜು ಸ್ಯಾಮ್ಸನ್ 33 ಎಸೆತಗಳಲ್ಲಿ ಅರ್ಧಶತಕ ಜೊತೆಯಾಟ ಆಡಿದರು. ಬಳಿಕ ಬೆನ್ ಸ್ಟೋಕ್ಸ್ 28 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದರು. ಈ ಜೋಡಿ 57 ಎಸೆತಗಳಲ್ಲಿ ಶತಕದ ಜೊತೆಯಾಟವಾಡಿತು. ಈ ನಡುವೆ ಕೇವಲ 27 ಎಸೆತಗಳಲ್ಲಿ ಸಂಜು ಸ್ಯಾಮ್ಸನ್ ಅವರು ಅರ್ಧಶತಕ ಸಿಡಿಸಿದರು.
ಮುಂಬೈ ಇಂಡಿಯನ್ಸ್ ನೀಡಿದ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮುಂಬೈ ವೇಗಿ ಜೇಮ್ಸ್ ಪ್ಯಾಟಿನ್ಸನ್ ಆರಂಭಿಕ ಆಘಾತ ನೀಡಿದರು. ಎರಡನೇ ಓವರಿನಲ್ಲೇ ಆರಂಭಿಕ ರಾಬಿನ್ ಉತ್ತಪ್ಪ ಅವರನ್ನು ಔಟ್ ಮಾಡಿದರು. ನಂತರ ನಾಯಕ ಸ್ಟೀವನ್ ಸ್ಮಿತ್ ಮತ್ತು ಬೆನ್ ಸ್ಟೋಕ್ಸ್ ಉತ್ತಮ ಆಟಕ್ಕೆ ಮುಂದಾದರು. ಆದರೆ ಮತ್ತೆ ದಾಳಿಗಿಳಿದ ಜೇಮ್ಸ್ ಪ್ಯಾಟಿನ್ಸನ್ ಅವರು 11 ರನ್ ಗಳಿಸಿದ್ದ ಸ್ಮಿತ್ ಅವರನ್ನು ಬೌಲ್ಡ್ ಮಾಡಿದರು.
0 comments:
Post a Comment