ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದ ಆರ್‍ಸಿಬಿ ಪ್ಲೇ ಅಪ್ ಸ್ಥಾನ ಬಹುತೇಕ ಭದ್ರ
ದುಬೈ, ಅ. 17, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ಐಪಿಎಲ್ ಪಂದ್ಯದಲ್ಲಿ ಎಬಿ ಡೆವಿಲಿಯರ್ಸ್ ಅವರ ಸ್ಫೋಟಕ ಬ್ಯಾಟಿಂಗಿನಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಳು ವಿಕೆಟ್‍ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಬಗ್ಗುಬಡಿಯಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ನಾಯಕ ಸ್ಟೀವನ್ ಸ್ಮಿತ್ ಹಾಗೂ ಆರಂಭಿಕನಾಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ ಅವರ ಉಪಯುಕ್ತ ಆಟದಿಂದಾಗಿ ನಿಗದಿತ 20 ಓವರಿನಲ್ಲಿ 177 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಬೆಂಗಳೂರು ತಂಡ ಎಬಿಡಿ ಅವರ ಅಂತಿಮ ಗಳಿಗೆಯ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ 2 ಎಸೆತಗಳು ಉಳಿದಿರುವಂತೆಯೇ ಕೇವಲ 3 ವಿಕೆಟ್ ಕಳೆದುಕೊಂಡು 179 ರನ್ ಗಳಿಸಿ 7 ವಿಕೆಟ್‍ಗಳ ಅಂತರದಿಂದ ಜಯಗಳಿಸಿತು. ಈ ಮೂಲಕ ಆರ್‍ಸಿಬಿ ಅಂಕಪಟ್ಟಿಯಲ್ಲಿ 12 ಅಂಕಗಳನ್ನು ಗಳಿಸಿ 3ನೇ ಸ್ಥಾನದಲ್ಲಿದ್ದು, ಪ್ಲೇ ಅಪ್ ಸ್ಥಾನ ಬಹುತೇಕ ಭದ್ರಪಡಿಸಿಕೊಂಡಿದೆ.
12 ಮತ್ತು 13ನೇ ಓವರಿನಲ್ಲಿ ಕೊಹ್ಲಿ ಹಾಗೂ ಪಡಿಕಲ್ ಬೆನ್ನು ಬೆನ್ನಿಗೆ ವಿಕೆಟ್ ಒಪ್ಪಿಸಿದಾಗ ಬೆಂಗಳೂರು ತಂಡಕ್ಕೆ ಸಂಕಷ್ಟ ಎದುರಾಗಿತ್ತು. ಕೊನೆಯ ನಾಲ್ಕು ಓವರಿನಲ್ಲಿ 54 ರನ್‍ಗಳ ಅವಶ್ಯಕತೆಯಿತ್ತು. ಈ ವೇಳೆ ಗುರ್‍ಕೀರತ್ ಅವರನ್ನು ಕೂಡಿಕೊಂಡ ಎಬಿ ಡೆವಿಲಿಯರ್ಸ್ ಸಿಕ್ಸರ್‍ಗಳ ಸುರಿಮಳೆಗೈದರು. ಕೇವಲ 22 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ ಅಜೇಯ 55 ರನ್ ಸಿಡಿಸಿದರು. ಇವರಿಗೆ ಸಾಥ್ ಕೊಟ್ಟ ಗುರ್‍ಕೀರತ್ 19 ರನ್ ಸಿಡಿಸಿ ಅಜೇಯರಾಗುಳಿದರು.
178 ರನ್ ಬೆನ್ನತ್ತಿದ ಬೆಂಗಳೂರು ತಂಡಕ್ಕೆ ಓಪನರ್ ಆರೋನ್ ಫಿಂಚ್ ಬೆನ್ನು ಬೆನ್ನಿಗೆ ಸಿಕ್ಸರ್ ಸಿಡಿಸಿ ಸ್ಫೋಟಕ ಆರಂಭದ ಮುನ್ಸೂಚನೆ ನೀಡಿದರು. ಆದರೆ 3ನೇ ಓವರಿನಲ್ಲಿ ಶ್ರೇಯಾಸ್ ಗೋಪಾಲ್ ಅವರ ಸ್ಪಿನ್ ದಾಳಿಗೆ ಬಲಿಯಾದರು. ಬಳಿಕ ಬಂದ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕಲ್ ತಾಳ್ಮೆಯ ಆಟವಾಡಿ 6 ಓವರ್ ಮುಕ್ತಾಯಕ್ಕೆ 47 ರನ್ ಸೇರಿಸಿದರು. ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ ಹಾಗೂ ಪಡಿಕಲ್ ಎರಡನೇ ವಿಕೆಟಿಗೆ 40 ಎಸೆತಗಳಲ್ಲಿ ಅರ್ಧ ಶತಕದ ಜೊತೆಯಾಟವಾಡಿದರು. 12ನೇ ಓವರ್ ಅಂತ್ಯಕ್ಕೆ 92 ರನ್ ಗಳಿಸಿದ್ದ ತಂಡಕ್ಕೆ ತಿವಾಟಿಯಾ ಆಘಾತ ನೀಡಿದರು. ತಿವಾಟಿಯಾ ಓವರಿನಲ್ಲಿ ಭಾರೀ ಹೊಡೆತಕ್ಕೆ ಮುಂದಾದ ಪಡಿಕ್ಕಲ್ ಕ್ಯಾಚ್ ಔಟಾದರು. 37 ಎಸೆತಗಳಲ್ಲಿ 2 ಬೌಂಡರಿಗಳ ನೆರವಿನೊಂದಿಗೆ 35 ರನ್ ಗಳಿಸಿ ಪಡಿಕ್ಕಲ್ ನಿರ್ಗಮಿಸಿದರು. ನಂತರ ಕಾರ್ತಿಕ್ ತ್ಯಾಗಿ ಅವರ ದಾಳಿಗೆ ಎಡವಿದ ನಾಯಕ ವಿರಾಟ್ ಕೊಹ್ಲಿ (43) ಸೀಮಾ ರೇಖೆಯ ಬಳಿ ತಿವಾಟಿಯಾಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. 102 ರನ್ ಗಳಿಸಿದ್ದ ವೇಳೆ ಆರ್ಸಿಬಿ ಪ್ರಮುಖ 2 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ನಂತರ ನಾಲ್ಕು ಓವರಿಗೆ 54 ರನ್‍ಗಳ ಅವಶ್ಯಕತೆ ಇದ್ದಾಗ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ಮತ್ತು ಗುರ್‍ಕೀರತ್ ಕ್ರಿಸಿನಲ್ಲಿದ್ದರು. ಈ ಸಂದರ್ಭ ಸ್ಪೋಟಕ ಆಟಕ್ಕೆ ಮಾರು ಹೋದ ಎಬಿ ಡಿವಿಲಿಯರ್ಸ್ 19ನೇ ಓವರಿನಲ್ಲಿ ಜಯದೇವ್ ಉನಾದ್ಕಟ್ ಅವರ ಆರಂಭದ ಮೂರು ಎಸೆತಗಳಲ್ಲಿ ಸತತ ಸಿಕ್ಸರ್ ಸಿಡಿಸಿದರು. ಉನಾದ್ಕತ್ ಅವರ ಈ ಓವರಿನಲ್ಲಿ ಡೆವಿಲಿಯರ್ಸ್ ಹಾಗೂ ಗುರುಕೀರತ್ ಅವರು 25 ರನ್ ಸೂರೆಗೈದರು. ಕೊನೆಯ ಓವರಿನಲ್ಲಿ 15 ರನ್‍ಗಳ ಅವಶ್ಯಕತೆ ಇದ್ದಾಗ ಆರಾಮವಾಗಿ ಬ್ಯಾಟ್ ಬೀಸಿದ ಇಬ್ಬರು ದಾಂಡಿಗರು ತಂಡಕ್ಕೆ ಅಮೋಘ ಜಯ ತಂದುಕೊಟ್ಟರು. ಕೊನೆಯ 3 ಎಸೆತಗಳಲ್ಲಿ 5 ರನ್ ಅವಶ್ಯಕತೆ ಇದ್ದಾಗ 4ನೇ ಎಸೆತವನ್ನು ಸಿಕ್ಸರ್‍ಗೆ ಅಟ್ಟಿದ ಡೆವಿಲಿಯರ್ಸ್ ತನ್ನ ಅರ್ಧ ಶತಕ ಪೂರ್ತಿಗೊಳಿಸುವುದರ ಜೊತೆಗೆ ತಂಡಕ್ಕೆ ಜಯ ತಂದುಕೊಟ್ಟರು.
0 comments:
Post a Comment