ಕ್ರಿಸ್ ಗೇಲ್ ಆಡಿದ ಎಲ್ಲ ಪಂದ್ಯಗಳಲ್ಲೂ ಗೆದ್ದ ಪಂಜಾಬ್ ಪ್ಲೇ ಆಫ್ ಕನಸು ಜೀವಂತ
ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕಿಳಿದ ಕೆಕೆಆರ್
ಶಾರ್ಜಾ, ಅ. 27, 2020 (ಕರಾವಳಿ ಟೈಮ್ಸ್) : ಇಲ್ಲಿನ ಮೈದಾನದಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್ ಕೂಟದ ಪಂದ್ಯದಲ್ಲಿ ಮನ್‍ದೀಪ್ ಸಿಂಗ್ ಹಾಗೂ ಕ್ರೀಸ್ ಗೇಲ್ ಅವರ ಭರ್ಜರಿ ಜೊತೆಯಾಟದ ನೆರವಿನಿಂದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಕೋಲ್ಕತ್ತಾ ವಿರುದ್ಧ 8 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಪಂಜಾಬ್ ತಂಡ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ 9 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿ 150 ರನ್‍ಗಳ ಸವಾಲನ್ನು ಪಂಜಾಬ್‍ಗೆ ನೀಡಿತು. ಸುಲಭ ಸವಾಲು ಬೆನ್ನಟ್ಟಿದ್ದ ಪಂಜಾಬ್ 18.5 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು 150 ರನ್ ಗಳಿಸುವ ಮೂಲಕ ನಿರಾಯಾಸ ಜಯ ಪಡೆಯಿತು.
12 ಪಂದ್ಯಗಳಿಂದ -0.049 ನೆಟ್ ರನ್ ರೇಟ್ ಹೊಂದಿರುವ ಪಂಜಾಬ್ ಇದೀಗ ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದು, ಅಷ್ಟೇ ಅಂಕಗಳಿಸಿರುವ ಕೋಲ್ಕತ್ತಾ -0.479 ನೆಟ್ ರನ್ ರೇಟ್‍ನೊಂದಿಗೆ 5ನೇ ಸ್ಥಾನಕ್ಕಿಳಿದಿದೆ.
ಪಂಜಾಬ್ ಆಡಿರುವ ಒಟ್ಟು 12 ಪಂದ್ಯಗಳಲ್ಲಿ ಕ್ರಿಸ್ ಗೇಲ್ ಕೊನೆಯ 5 ಪಂದ್ಯಗಳಲ್ಲಿ ಮಾತ್ರ ಆಡಿದ್ದು, ಗೇಲ್ ಆಡಿರುವ ಈ ಎಲ್ಲ ಪಂದ್ಯಗಳನ್ನು ಪಂಜಾಬ್ ತಂಡ ಗೆದ್ದಿರುವುದು ವಿಶೇಷ. ರಾಹುಲ್ ಔಟಾದಾಗ ತಂಡದ ಮೊತ್ತ 47 ಆಗಿತ್ತು. ನಂಬರ್ ಮೂರನೇಯವರಾಗಿ ಕ್ರೀಸಿಗೆ ಬಂದ ಗೇಲ್ 5 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿ ಸಹಿತ ಕೇವಲ 29 ಎಸೆತಗಳಲ್ಲಿ 51 ರನ್ ಭಾರಿಸಿ ತಂಡದ ಜಯ ಸುಲಭಗೊಳಿಸಿದರು. ಜೊತೆಗೆ ಎರಡನೇ ವಿಕೆಟಿಗೆ ಮನ್‍ದೀಪ್ ಸಿಂಗ್ ಜೊತೆ 100 ರನ್‍ಗಳ ಜೊತೆಯಾಟದ ಕೊಡುಗೆ ನೀಡಿದರು. ನಾಯಕ ಕೆಎಲ್ ರಾಹುಲ್ 28 ರನ್, ಮನ್‍ದೀಪ್ ಸಿಂಗ್ ಔಟಾಗದೇ 66 ರನ್ (56 ಎಸೆತ, 8 ಬೌಂಡರಿ, 2 ಸಿಕ್ಸರ್) ಹೊಡೆದರು.
ಕೋಲ್ಕತ್ತಾ ಪರ ಶುಭಮನ್ ಗಿಲ್ 57 ರನ್ (45 ಎಸೆತ, 3 ಬೌಂಡರಿ, 4 ಸಿಕ್ಸರ್) ಭಾರಿಸಿದರೆ, ನಾಯಕ ಮಾರ್ಗನ್ 40 ರನ್ (25 ಎಸೆತ, 5 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾದರು. ಪಂಜಾಬ್ ಪರ ಮೊಹಮ್ಮದ್ ಶಮಿ 35 ರನ್ ನೀಡಿ 3 ವಿಕೆಟ್ ಕಿತ್ತರೆ, ಜೋರ್ಡಾನ್ ಮತ್ತು ರವಿ ಬಿಶ್ನೋಯ್ ತಲಾ 2 ವಿಕೆಟ್ ಕಿತ್ತರು.
0 comments:
Post a Comment