ಪಂಜಾಬ್ ವಿರುದ್ದ ಮುಂಬೈಗೆ ಸುಲಭ ಜಯ
ಅಬುಧಾಬಿ, ಅ. 02, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ 48 ರನ್ ಗಳ ಗೆಲುವು ದಾಖಲಿಸಿದೆ.
192 ರನ್ ಗುರಿ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆ.ಎಲ್. ರಾಹುಲ್, ಮಯಾಂಕ್ ಅಗರ್ವಾಲ್ ಅವರ ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಮೊದಲ 4 ಓವರ್ ಳಲ್ಲಿ 37 ರನ್ ರನ್ ಗಳಿಸಿತ್ತು.
ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದ ಮಯಾಂಕ್‍ರನ್ನು ಕ್ಲೀನ್ ಬೌಲ್ಡ್ ಮಾಡುವ ಬುಮ್ರಾ ಮುಂಬೈಗೆ ಮೊದಲ ಯಶಸ್ಸು ನೀಡಿದರು. 18 ಎಸೆತಗಳಲ್ಲಿ 25 ರನ್ ಗಳಿಸಿದ್ದ ಮಯಾಂಕ್ ಪೆವಿಲಿಯನ್ ಹಾದಿ ತುಳಿಯುತ್ತಿದಂತೆ ಕ್ರಿಸ್ ಬಂದ ಕರುಣ್ ನಾಯರ್ ರನ್ನು ಕೃನಾಲ್ ಪಾಂಡ್ಯ ಶೂನ್ಯಕ್ಕೆ ಔಟ್ ಮಾಡುವ ಮೂಲಕ ಪಂಜಾಬ್ ತಂಡಕ್ಕೆ ಶಾಕ್ ನೀಡಿದರು.
ಪಂಜಾಬ್ ತಂಡ 8ನೇ ಓವರ್ ವೇಳೆಗೆ 60 ರನ್ ಗಳಿಸಿದ್ದ ಸಂದರ್ಭದಲ್ಲಿ ರೋಹಿತ್ ಶರ್ಮಾ, ಚಹರ್ ಅವರನ್ನು ಬೌಲಿಂಗ್ ದಾಳಿಗೆ ಕಳುಹಿಸಿದರು, 19 ಎಸೆತಗಳಲ್ಲಿ 17 ರನ್ ಗಳಿಸಿದ್ದ ರಾಹುಲ್, ಚಹರ್ ಓವರಿನ ಮೊದಲ ಎಸೆತದಲ್ಲೇ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಇದರೊಂದಿಗೆ ಪಂಜಾಬ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಲು ಮುಂಬೈ ಯಶಸ್ವಿಯಾಯಿತು.
ಅಂತಿಮ 50 ಎಸೆತಗಳಲ್ಲಿ 100 ರನ್ ಗಳಿಸುವ ಒತ್ತಡಕ್ಕೆ ಸಿಲುಕಿದ ಪಂಜಾಬ್ ತಂಡದ ಆಟಗಾರರು ಬಿರುಸಿನ ಆಟಕ್ಕೆ ಮುಂದಾದರು, ಸಂಕಷ್ಟದಲ್ಲಿದ್ದ ತಂಡಕ್ಕೆ ಬಿರುಸಿನ ಬ್ಯಾಟಿಂಗ್ ನಿಂದ ನೆರವಾಗುತ್ತಿದ್ದ ಪೊರನ್ ವಿಕೆಟ್ ಪಡೆಯುವಲ್ಲಿ ಜೇಮ್ಸ್ ಪ್ಯಾಟಿನ್ಸನ್ ಯಶಸ್ವಿಯಾದರು. 27 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ನೆರವಿನಿಂದ 44 ರನ್ ಗಳಿಸಿದ್ದ ಪೂರನ್, ಡಿ ಕಾಕ್‍ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ದಾಳಿ ನಡೆಸಿದ ಚಹರ್ ಬೌಲಿಂಗ್‍ನಲ್ಲಿ 11 ರನ್ ಗಳಿಸಿದ್ದ ಮ್ಯಾಕ್ಸ್ ವೆಲ್ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ನಿಶಮ್ (7 ರನ್) ರನ್ನು ಬಂದಷ್ಟೇ ವೇಗದಲ್ಲಿ ಬುಮ್ರಾ ಪೆವಿಲಿಯನ್‍ಗೆ ವಾಪಸ್ ಕಳುಹಿಸಿದರು. ಆ ಬಳಿಕ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಪಂಜಾಬ್ ಬ್ಯಾಟ್ಸ್ ಮನ್‍ಗಳನ್ನು ಮುಂಬೈ ಬೌಲಿಂಗ್ ಪಡೆ ಸುಲಭವಾಗಿ ಕಟ್ಟಿಹಾಕಲು ಯಶಸ್ವಿಯಾಯಿತು. ಅಂತಿಮವಾಗಿ ಕಿಂಗ್ಸ್ ಇಲೆವೆನ್ ಪಂಜಾನ್ 8 ವಿಕೆಟ್ ನಷ್ಟದೊಂದಿಗೆ 143 ರನ್ ಗಳಿಸಿ ಸೋಲುಂಡಿತು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡೋ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾರ ಅರ್ಧ ಶತಕ ಹಾಗೂ ಹಾರ್ಧಿಕ್ ಪಾಂಡ್ಯ, ಪೊಲ್ಲಾರ್ಡ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 191 ರನ್ ಗಳ ಬೃಹತ್ ಮೊತ್ತ ಗುರಿ ನೀಡಿತು. ಪಂಜಾಬ್ ತಂಡದ ವೈಫಲ್ಯವನ್ನು ಬಳಸಿಕೊಂಡ ಮುಂಬೈ ಅಂತಿಮ 6 ಓವರ್ ಗಳಲ್ಲಿ 104 ರನ್ ಗಳಿಸಿತು. ಮುಂಬೈ ನಾಯಕ ರೋಹಿತ್ ಶರ್ಮಾ 45 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಗಳಿಂದ 70 ರನ್ ಗಳಿಸಿದರೆ, ಹಾರ್ದಿಕ್ 11 ಎಸೆತಗಳಲ್ಲಿ 30 ರನ್ ಹಾಗೂ ಪೊಲ್ಲಾರ್ಡ್ 47 ರನ್ ಸಿಡಿಸಿದ್ದರು. ಮುಂಬೈ ಪರ ಚಹರ್, ಬುಮ್ರಾ, ಪ್ಯಾಟಿನ್ಸನ್ ತಲಾ ಎರಡು ವಿಕೆಟ್ಪಡೆದರೇ ಬೋಲ್ಟ್, ಕೃನಾಲ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.
ಐಪಿಎಲ್ ನಲ್ಲಿ ರೋಹಿತ್ 5 ಸಾವಿರ ರನ್
ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ನಲ್ಲಿ 4 ರನ್ ಗಳಿಸಿದ್ದ ಸಂದರ್ಭದಲ್ಲಿ ಐಪಿಎಲ್ ನಲ್ಲಿ 5 ಸಾವಿರ ರನ್ ಪೂರೈಸಿದರು. ಈ ಮೊದಲು ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಚೆನ್ನೈ ತಂಡದ ಸುರೇಶ್ ರೈನಾ ಮಾತ್ರ ಐಪಿಎಲ್‍ನಲ್ಲಿ 5 ಸಾವಿರ ರನ್ ಗಳಿಸಿದ ಸಾಧನೆ ಮಾಡಿದ್ದು, ರೋಹಿತ್ 3ನೇ ಆಟಗಾರರಾಗಿ ಈ ಪಟ್ಟಿಗೆ ಸೇರ್ಪಡೆಯಾದರು.
0 comments:
Post a Comment