ಶಾರ್ಜಾ, ಅ. 04, 2020 (ಕರಾವಳಿ ಟೈಮ್ಸ್) : ಮುಂಬೈ ತಂಡದ ವೇಗದ ಬೌಲಿಂಗ್ ದಾಳಿಗೆ ತತ್ತರಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಕೂಟದ ಭಾನುವಾರ ನಡೆದ 17ನೇ ಪಂದ್ಯದಲ್ಲಿ ತತ್ತರಗೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡು, ಕ್ವಿಂಟನ್ ಡಿ ಕಾಕ್ ಅವರ ಅರ್ಧಶತಕ ಮತ್ತು ಕೊನೆಯಲ್ಲಿ ಪಾಂಡ್ಯ ಸಹೋದರ ಉಪಯುಕ್ತ ಬ್ಯಾಟಿಂಗಿನಿಂದ 20 ಓವರಿನಲ್ಲಿ 208 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ ನಾಯಕ ವಾರ್ನರ್ ಅವರ ಅರ್ಧಶತಕದ ಹೊರತಾಗಿಯೂ 20 ಓವರಿನಲ್ಲಿ 174 ರನ್ ಸಿಡಿಸಿ 34 ರನ್‍ಗಳ ಅಂತರದಲ್ಲಿ ಸೋಲನುಭವಿಸಿತು.
ಆರಂಭದಿಂದಲೇ ಮುಂಬೈ ವೇಗದ ಬೌಲರ್ ಮೇಲುಗೈ ಸಾಧಿಸಿದರು. ಟ್ರೆಂಟ್ ಬೌಲ್ಟ್ ನಾಲ್ಕು ಓವರ್ ಗಳಲ್ಲಿ ಕೇವಲ 28 ರನ್ ನೀಡಿ ಎರಡು ವಿಕೆಟ್ ಕಬಳಿಸಿದರು. ಜೇಮ್ಸ್ ಪ್ಯಾಟಿನ್ಸನ್ 4 ಓವರ್ ಬೌಲ್ ಮಾಡಿ 29 ರನ್ ಕೊಟ್ಟು ಎರಡು ವಿಕೆಟ್ ಪಡೆದರು. ನಾಲ್ಕು ಓವರ್ ಬೌಲ್ ಮಾಡಿದ ಜಸ್‍ಪ್ರೀತ್ ಬುಮ್ರಾ ಅವರು ಕೂಡ ಎರಡು ವಿಕೆಟ್ ಪಡೆದು ಮಿಂಚಿದರು.
ಹೈದರಾಬಾದ್ ತಂಡಕ್ಕೆ ಉತ್ತಮವಾದ ಆರಂಭ ದೊರೆಯಿತು. ತಂಡ ನಾಲ್ಕು ಓವರ್ ಮುಕ್ತಾಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 34 ರನ್ ಸೇರಿಸಿತ್ತು. ಆದರೆ 4ನೇ ಓವರಿನ ಮೊದಲ ಬಾಲಿನಲ್ಲೆ ಉತ್ತಮವಾಗಿ ಆಡುತ್ತಿದ್ದ 15 ಬಾಲಿಗೆ 25 ರನ್ ಸಿಡಿಸಿದ ಜಾನಿ ಬೈರ್‍ಸ್ಟೋವ್ ಟ್ರೆಂಟ್ ಬೌಲ್ಟ್ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಮನೀಶ್ ಪಾಂಡೆ ಮತ್ತು ಡೇವಿಡ್ ವಾರ್ನರ್ ಸೇರಿಕೊಂಡು ಪವರ್ ಪ್ಲೇನ ಕೊನೆಯ ಓವರಿನಲ್ಲಿ 14 ರನ್ ಚಚ್ಚಿ ಆರು ಓವರ್ ಅಂತ್ಯದ ವೇಳೆಗೆ 56 ರನ್ ಸೇರಿಸಿದರು.
ಪವರ್ ಪ್ಲೇ ಬಳಿಕ ಭರ್ಜರಿ ಬ್ಯಾಟಿಂಗ್ ಮಾಡಿದ ವಾರ್ನರ್ ಪಾಂಡೆ ಜೋಡಿ ಕೇವಲ 27 ಬಾಲಿನಲ್ಲಿ ಅರ್ಧಶತಕದ ಜೊತೆಯಾಟವಾಡಿತು. ಈ ವೇಳೆ 19 ಬಾಲಿಗೆ 30 ರನ್ ಸಿಡಿಸಿ ಅಬ್ಬರಿಸುವ ಮುನ್ಸೂಚನೆ ನೀಡಿದ್ದ ಪಾಂಡೆ, ಜೇಮ್ಸ್ ಪ್ಯಾಟಿನ್ಸನ್ ಬಾಲಿಗೆ ಔಟ್ ಆಗಿ ಪೆವಿಲಿಯನ್ ಸೇರಿದರು. ಈ ವೇಳೆ ಮೊದಲಿನಿಂದಲೂ ಉತ್ತಮವಾಗಿ ಆಡಿಕೊಂಡು ಬಂದ ನಾಯಕ ಡೇವಿಡ್ ವಾರ್ನರ್ ಅವರು 35 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು.
ಇಲ್ಲದ ಹೊಡೆತಕ್ಕೆ ಕೈ ಹಾಕಿದ ಕೇನ್ ವಿಲಿಯಮ್ಸನ್ ಅವರು ಕ್ವಿಂಟನ್ ಡಿ ಕಾಕ್ ಅವರಿಗೆ ಸುಲಭ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ನಂತರ ಪ್ರಿಯಮ್ ಗಾರ್ಗ್ ಅವರು ಕ್ರುನಾಲ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ನಂತರ ಅಬ್ಬರಿಸುತ್ತಿದ್ದ ನಾಯಕ ಡೇವಿಡ್ ವಾರ್ನರ್ ಅವರು ಇಶಾನ್ ಕಿಶನ್ ಅವರು ಹಿಡಿದ ಅದ್ಭುತ ಡೈವಿಂಗ್ ಕ್ಯಾಚಿಗೆ ಬಲಿಯಾದರು. ಈ ಮೂಲಕ 44 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಒಳಗೊಂಡ 60 ರನ್ ಸಿಡಿಸಿ ಜೇಮ್ಸ್ ಪ್ಯಾಟಿನ್ಸನ್ ಬೌಲಿಂಗ್ ಗೆ ವಿಕೆಟ್ ಒಪ್ಪಿಸಿದರು.
ನಂತರ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸುತ್ತಿದ್ದ ಅಬ್ದುಲ್ ಸಮದ್ ಅವರು ದೊಡ್ಡ ಹೊಡೆತಕ್ಕೆ ಕೈ ಹಾಕಿ 9 ಬಾಲಿಗೆ 20 ರನ್ ಕಲೆ ಹಾಕಿ ಔಟ್ ಆದರು. ನಂತರ ಅಭಿಷೇಕ್ ಶರ್ಮಾ ಅವರನ್ನು ಅದೇ ಓವರಿನಲ್ಲಿ ಜಸ್‍ಪ್ರೀತ್ ಬುಮ್ರಾ ಅವರು ಬೌಲ್ಡ್ ಮಾಡಿದರು. ಈ ಮೂಲಕ ಹೈದರಾಬಾದ್ ತಂಡ ಸೋಲನ್ನು ಒಪ್ಪಿಕೊಂಡಿತು.
0 comments:
Post a Comment