ದುಬೈ, ನ. 01, 2020 (ಕರಾವಳಿ ಟೈಮ್ಸ್) : ಇಲ್ಲಿನ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಮೊದಲ ಪಂದ್ಯದಲ್ಲಿ ಆಲ್ ರೌಂಡ್ ಪ್ರದರ್ಶನ ತೋರಿದ ಮುಂಬೈ ಇಂಡಿಯನ್ಸ್ ತಂಡ 9 ವಿಕೆಟ್‍ಗಳ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಬಾಧಿತವಾಗಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಗೆ ಕುಸಿದು ನಿಗದಿತ 20 ಓವರ್ ಗಳಲ್ಲಿ ಕೇವಲ 110 ರನ್ ಗಳಿಸಲಷ್ಟೆ ಶಕ್ತವಾಯಿತು. ಗುರಿ ಬೆನ್ನಟ್ಟಿದ ಮುಂಬೈ ತಂಡ ಕ್ವಿಂಟನ್ ಡಿ ಕಾಕ್ ಮತ್ತು ಇಶಾನ್ ಕಿಶನ್ ಅವರ ಭರ್ಜರಿ ಬ್ಯಾಟಿಂಗಿನಿಂದಾಗಿ ಇನ್ನೂ 34 ಎಸೆತಗಳು ಬಾಕಿ ಇರುತ್ತಲೇ ಗುರಿ ತಲುಪಿತು.
ಡೆಲ್ಲಿ ನೀಡಿದ ಸುಲಭ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಓಪನರ್ಸ್ ಆಗಿ ಬಂದ ಕ್ವಿಂಟನ್ ಡಿ ಕಾಕ್ ಮತ್ತು ಇಶಾನ್ ಕಿಶನ್ ಪವರ್ ಪ್ಲೇ ಹಂತದಲ್ಲಿ ತಾಳ್ಮೆಯಿಂದ ಬ್ಯಾಟ್ ಬೀಸಿದರು. ಪರಿಣಾಮ ಆರು ಓವರ್ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ ತಂಡ ವಿಕೆಟ್ ಕಳದುಕೊಳ್ಳದೇ 38 ರನ್ ಪೇರಿಸಿತು. ಈ ನಡುವೆ ವಿಕೆಟ್ ಪಡೆಯಲು ಡೆಲ್ಲಿ ಬೌಲರ್ ಗಳು ಪರದಾಡಿದರು. ಎಂಟನೇ ಓವರಿನಲ್ಲಿ ಡಿಕಾಕ್ ಮತ್ತು ಇಶಾನ್ ಕಿಶನ್ ಜೋಡಿ ಅರ್ಧಶತಕದ ಜೊತೆಯಾಟ ಪೂರ್ತಿಗೊಳಿಸಿತು. ಆದರೆ 10ನೇ ಓವರ್ ನ ದ್ವಿತೀಯ ಎಸೆತದಲ್ಲಿ 26 ರನ್ ಗಳಿಸಿ ಆಡುತ್ತಿದ್ದ ಕ್ವಿಂಟನ್ ಡಿ ಕಾಕ್ ಅವರು ಅನ್ರಿಚ್ ನಾಟ್ರ್ಜೆ ಅವರಿಗೆ ಬೌಲ್ಡ್ ಆದರು. ನಂತರ ಆರಂಭದಿಂದಲೂ ಅದ್ಭುತವಾಗಿ ಆಡಿದ ಇಶಾನ್ ಕಿಶನ್ ಅವರು ಅರ್ಧಶತಕ ಸಿಡಿಸಿ ಮಿಂಚಿದರು. ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಮುಂಬೈ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ವೇಗಿಗಳಾದ ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ದಾಳಿಗೆ ತತ್ತರಿಸಿ ಹೋಗಿತ್ತು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ಯಾವ ಬ್ಯಾಟ್ಸ್ ಮನ್ ಕೂಡ ಉತ್ತಮ ರನ್ ಕಲೆ ಹಾಕಲಿಲ್ಲ. ಮಧ್ಯದಲ್ಲಿ ಶ್ರೇಯಾಸ್ ಐಯ್ಯರ್ ಮತ್ತು ರಿಷಭ್ ಪಂತ್ ಕೊಂಚ ಪ್ರತಿರೋಧ ನೀಡಿದರೂ ಮೊತ್ತ ಹೆಚ್ಚಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಡೆಲ್ಲಿ 20 ಓವರಿನಲ್ಲಿ 9 ವಿಕೆಟ್ ಕಳೆದುಕೊಂಡು 110 ರನ್ ಪೇರಿಸಿತ್ತು.
0 comments:
Post a Comment