ರಾಹುಲ್-ಅಗರ್‍ವಾಲ್ ಭದ್ರ ಬುನಾದಿಯ ಹೊರತಾಗಿಯೂ ಕೊನೆಯಲ್ಲಿ ಎಡವಿದ ಪಂಜಾಬ್ ತಂಡಕ್ಕೆ 2 ರನ್‍ಗಳ ವಿರೋಚಿತ ಸೋಲು - Karavali Times ರಾಹುಲ್-ಅಗರ್‍ವಾಲ್ ಭದ್ರ ಬುನಾದಿಯ ಹೊರತಾಗಿಯೂ ಕೊನೆಯಲ್ಲಿ ಎಡವಿದ ಪಂಜಾಬ್ ತಂಡಕ್ಕೆ 2 ರನ್‍ಗಳ ವಿರೋಚಿತ ಸೋಲು - Karavali Times

728x90

10 October 2020

ರಾಹುಲ್-ಅಗರ್‍ವಾಲ್ ಭದ್ರ ಬುನಾದಿಯ ಹೊರತಾಗಿಯೂ ಕೊನೆಯಲ್ಲಿ ಎಡವಿದ ಪಂಜಾಬ್ ತಂಡಕ್ಕೆ 2 ರನ್‍ಗಳ ವಿರೋಚಿತ ಸೋಲು



ಸಾಧಾರಣ ಮೊತ್ತದ ಹೋರಾಟದಲ್ಲಿ ಗೆದ್ದು ಬೀಗಿದ ಕೆಕೆಆರ್


ಅಬುಧಾಬಿ, ಅ. 10, 2020 (ಕರಾವಳಿ ಟೈಮ್ಸ್) : ಇಲ್ಲಿನ ನ್ಯಾಷನಲ್ ಸ್ಟೇಡಿಯಂನಲ್ಲಿ ಶನಿವಾರ ಸಂಜೆ ನಡೆದ ವೀಕೆಂಡ್ ಪ್ರಥಮ ಪಂದ್ಯದಲ್ಲಿ ಜಿದ್ದಾ ಜಿದ್ದಿನ ಹೋರಾಟದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪಂಜಾಬ್ ತಂಡದ ವಿರುದ್ದ 2 ರನ್‍ಗಳ ರೋಚಕ ಜಯ ಸಾಧಿಸಿದೆ. 

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ನಾಯಕ ದಿನೇಶ್ ಕಾರ್ತಿಕ್ ಅವರ ಭರ್ಜರಿ ಅರ್ಧ ಶತಕದ ನೆರವಿನಿಂದ ನಿಗದಿತ 20 ಓವರಿನಲ್ಲಿ 163 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಉತ್ತಮ ಆರಂಭದ ಹೊರತಾಗಿಯೂ ಕೊನೆ ಕ್ಷಣದಲ್ಲಿ ಮುಗ್ಗರಿಸಿ ಪಂದ್ಯವನ್ನೇ ಕಳೆದುಕೊಂಡಿತು. ಪಂಜಾಬ್ ತಂಡದ ಆರಂಭಿಕ ದಾಂಡಿಗರಾದ ಕೆ ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಮೊದಲ ವಿಕೆಟಿಗೆ 116 ರನ್‍ಗಳ ಜೊತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ ಕೊನೆಯ ಮೂರು ಓವರ್‍ಗಳಲ್ಲಿ ರನ್ ಗಳಿಸಲು ಪರದಾಡಿದ ಕೆಕೆಆರ್ ದಾಂಡುಗಾರರು 2 ರನ್‍ಗಳಿಂದ ಎದುರಾಳಿ ತಂಡಕ್ಕೆ ಶರಣಾದರು.

ಉತ್ತಮ ಆರಂಭ ಪಡೆದ ಪಂಜಾಬ್ ತಂಡ 17ನೇ ಓವರ್ ಮುಕ್ತಾಯಕ್ಕೆ 143 ಗಳಿಸಿ ಎರಡು ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಆದರೆ 18ನೇ ಓವರ್ ಬೌಲಿಂಗ್ ಮಾಡಲು ಬಂದ ನರೈನ್ ತನ್ನ ಆಕರ್ಷಕ ಕೈ ಚಳಕದಿಂದ ಕೇವಲ ಎರಡು ರನ್ ಬಿಟ್ಟು ಕೊಟ್ಟು 1 ವಿಕೆಟ್ ಕಿತ್ತು ಪಂದ್ಯಕ್ಕೆ ರೋಚಕ ತಿರುವು ನೀಡಿದರು. ನಂತರ 19ನೇ ಓವರ್ ಬೌಲ್ ಮಾಡಿದ ಕನ್ನಡಿಗ ಪ್ರಸೀದ್ ಕೃಷ್ಣ ಕೇವಲ 6 ರನ್ ಬಿಟ್ಟು ಕೊಟ್ಟು ನಾಯಕ ರಾಹುಲ್ ವಿಕೆಟ್ ಸೇರಿ ಎರಡು ವಿಕೆಟ್ ಕಿತ್ತರು. ನಂತರ ಕೊನೆಯ ಓವರಿಗೆ ಪಂಜಾಬ್ ವಿಜಯಕ್ಕೆ 14 ರನ್ ಅವಶ್ಯಕತೆ ಇತ್ತು. ಈ ಸಂದರ್ಭ ಮತ್ತೆ ದಾಳಿಗಿಳಿದ ನರೈನ್ 11 ರನ್ ನೀಡಿ 1 ವಿಕೆಟ್ ಪಡೆದು ಕೋಲ್ಕತ್ತಾ ತಂಡಕ್ಕೆ ಅತ್ಯಾಕರ್ಷಕ ರೋಚಕ ಜಯ ತಂದುಕೊಟ್ಟರು.

ಕೋಲ್ಕತ್ತಾ ನೀಡಿದ ಸ್ಪರ್ಧಾತ್ಮಕ ಮೊತ್ತವನ್ನು ಸ್ವೀಕರಿಸಿ ಕ್ರೀಸಿಗೆ ಬಂದ ಪಂಜಾಬ್ ಆರಂಭಿಕ ಆಟಗಾರರಾದ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಆರಂಭದಲ್ಲಿ ತಾಳ್ಮೆಯ ಆಟಕ್ಕೆ ಮೊರೆ ಹೋದರು. ಮೊದಲ ಆರು ಓವರುಗಳಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ರಾಹುಲ್-ಅಗರ್ವಾಲ್ ಜೋಡಿ ಪವರ್ ಪ್ಲೇ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೇ 47 ರನ್ ಪೇರಿಸಿದರು.

12 ಓವರ್ ಮುಕ್ತಾಯಕ್ಕೆ ಇದೇ ಜೋಡಿ 94 ರನ್ ಸೇರಿಸಿತು. ಈ ಮಧ್ಯೆ ನಾಯಕ ಕೆ.ಎಲ್. ರಾಹುಲ್ 43 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದರು. ಮಯಾಂಕ್ ಅಗರ್ವಾಲ್ ಕೂಡಾ 33 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದರು. ಈ ಜೋಡಿ 73 ಎಸೆತಗಳಲ್ಲಿ ಶತಕದ ಜೊತೆಯಾಟವನ್ನೂ ಆಡಿತು. ಆದರೆ 14ನೇ ಓವರಿನ ದ್ವಿತೀಯ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಮಯಾಂಕ್ ಅಗರ್ವಾಲ್ (56 ರನ್, 39 ಎಸೆತ, 1 ಸಿಕ್ಸರ್, 6 ಬೌಂಡರಿ) ಅವರು ಪ್ರಸೀದ್ ಕೃಷ್ಣ ಅವರಿಗೆ ವಿಕೆಟ್ ಒಪ್ಪಿಸಿದರು.  ನಂತರ ಬಂದ ನಿಕೋಲಸ್ ಪೂರನ್ ಅವರು 10 ಎಸೆತಗಳಲ್ಲಿ 16 ರನ್ ಗಳಿಸಿ ಸುನಿಲ್ ನರೈನ್‍ಗೆ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ಸಿಮ್ರಾನ್ ಸಿಂಗ್ ಅವರು 18ನೇ ಓವರಿನ 4ನೇ ಎಸೆತದಲ್ಲಿ ಕ್ಯಾಚ್ ಔಟಾದರು. ಬಳಿಕ ನಾಯಕ ರಾಹುಲ್ ಕೂಡಾ ಔಟಾದರು. ಗ್ಲೆನ್ ಮ್ಯಾಕ್ಸ್‍ವೆಲ್ ಕೊನೆವರೆಗೂ ಕ್ರೀಸಿನಲ್ಲಿದ್ದರೂ ತಂಡವನ್ನು ಜಯದತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಕೊನೆ ಎಸೆತದಲ್ಲಿ 7 ರನ್ ಅವಶ್ಯಕತೆ ಇದ್ದಾಗ ಮಾಕ್ಸ್‍ವೆಲ್ ಬಲವಾಗಿ ಬೀಸಿದರಾದರೂ ಅದು ಬೌಂಡರಿ ಆಗಿ ಮಾತ್ರ ದಾಖಲಾಯಿತು. ಈ ಮೂಲಕ ಪಂಜಾಬ್ 2 ರನ್‍ಗಳಿಂದ ರೋಮಾಂಕವಾಗಿ ಸೋತಿತು. 








  • Blogger Comments
  • Facebook Comments

0 comments:

Post a Comment

Item Reviewed: ರಾಹುಲ್-ಅಗರ್‍ವಾಲ್ ಭದ್ರ ಬುನಾದಿಯ ಹೊರತಾಗಿಯೂ ಕೊನೆಯಲ್ಲಿ ಎಡವಿದ ಪಂಜಾಬ್ ತಂಡಕ್ಕೆ 2 ರನ್‍ಗಳ ವಿರೋಚಿತ ಸೋಲು Rating: 5 Reviewed By: karavali Times
Scroll to Top