ಐಪಿಎಲ್ ನಲ್ಲಿ ಚೊಚ್ಚಲ ಶತಕ ಸಿಡಿಸಿದ ಶಿಖರ್ ಧವನ್
ಚೆನ್ನೈ ವಿರುದ್ದ ಡೆಲ್ಲಿಗೆ 5 ವಿಕೆಟ್ ಜಯ, ಪ್ಲೇ ಅಪ್ ಪ್ರವೇಶ ಖಚಿತಪಡಿಸಿದ ಶ್ರೇಯಸ್ ಅಯ್ಯರ್ ಪಡೆ
ಶಾರ್ಜಾ, ಅ. 18, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಐಪಿಎಲ್ ಕೂಟದ ಶನಿವಾರ ನಡೆದ ದ್ವಿತೀಯ ಪಂದ್ಯದಲ್ಲಿ ಕೊನೆ ಕ್ಷಣದಲ್ಲಿ ಕ್ರೀಸಿಗೆ ಬಂದ ಡೆಲ್ಲಿ ಆಟಗಾರ ಅಕ್ಷರ್ ಪಟೇಲ್ ಅಕ್ಷರಶಃ ಸಿಡಿದೆದ್ದ ಪರಿಣಾಮ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಕಕ್ಕಾಬಿಕ್ಕಿಯಾಯಿತು.
ಅಂತಿಮ ಓವರಿನಲ್ಲಿ 20 ರನ್ ಸಿಡಿಸಿದ ಅಕ್ಷರ್ ಪಟೇಲ್ ತಂಡಕ್ಕೆ 5 ವಿಕೆಟ್‍ಗಳ ರೋಚಕ ಗೆಲುವನ್ನು ತಂದುಕೊಟ್ಟರು. ಇಂದಿನ ಗೆಲುವಿನೊಂದಿಗೆ 14 ಅಂಕಗಳನ್ನು ಗಳಿಸಿದ ಡೆಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದು, ತಂಡದ ಪ್ಲೇ ಅಪ್ ಪ್ರವೇಶ ಖಚಿತಗೊಂಡಿದೆ.
ಅಂತಿಮ ಓವರ್ ನಲ್ಲಿ ಡೆಲ್ಲಿ ಗೆಲುವಿಗೆ 17 ರನ್ ಬೇಕಿತ್ತು. ಈ ವೇಳೆ ದಾಳಿಗಾರಿಕೆಗಿಳಿದ ರವೀಂದ್ರ ಜಡೇಜಾ ಅವರ ಮೊದಲ ಎಸೆತದಲ್ಲಿ ಧವನ್ 1 ರನ್ ಗಳಿಸಿದರೆ, 2ನೇ ಮತ್ತು 3ನೇ ಎಸೆತವನ್ನು ಅಕ್ಷರ್ ಪಟೇಲ್ ಸಿಕ್ಸರ್ ಗಟ್ಟಿದರು. 4ನೇ ಎಸೆತದಲ್ಲಿ 2 ರನ್ ಗಳಿಸಿದ ಅಕ್ಷರ್ ಪಟೇಲ್, 5ನೇ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಅಂತಿಮವಾಗಿ ಡೆಲ್ಲಿ ತಂಡ 19.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿ ವಿಜಯ ಪತಾಕೆ ಹಾರಿಸಿತು.
180 ರನ್‍ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಆರಂಭದಲ್ಲೇ ಎಡವಿತು. ಕಳೆದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಪೃಥ್ವಿ ಶಾ ಇಂದು ಕೂಡಾ ಶೂನ್ಯ ಸಂಪಾದನೆಯೊಂದಿಗೆ ಪೆವಿಲಿಯನ್ ಹಾದಿ ತುಳಿದರು. ಮೊದಲ ಓವರ್ ಎಸೆದ ದೀಪಕ್ ಚಹರ್ ವಿಕೆಟ್ ಪಡೆಯುವ ಜೊತೆಗೆ ಮೇಡನ್ ಓವರ್ ಆಗಿ ಪರಿವರ್ತಿಸಿದರು. 5ನೇ ಓವರಿನ ಮೊದಲ ಎಸೆತದಲ್ಲಿ 10 ಎಸೆತಗಳಲ್ಲಿ 8 ರನ್ ಗಳಿಸಿದ್ದ ರಹಾನೆ ವಿಕೆಟ್ ಪಡೆದ ಚಹರ್ ಡೆಲ್ಲಿಗೆ 2ನೇ ಆಘಾತ ನೀಡಿದರು. ಪವರ್ ಪ್ಲೇ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ 41 ರನ್ ಗಳಿಸಿತ್ತು.
ವಿಕೆಟ್ ಕಳೆದುಕೊಳ್ಳುತ್ತಿದ್ದರು ಮತ್ತೊಂದು ಬದಿಯಲ್ಲಿ ರನ್ ಗಳಿಸುತ್ತಾ ಸಾಗುತ್ತಿದ್ದ ಧವನ್ ಎರಡು ಜೀವದಾನಗಳ ಮೂಲಕ ಅರ್ಧ ಶತಕ ಪೂರ್ತಿಗೊಳಿಸಿದರು. ಒಟ್ಟಾರೆ ಪಂದ್ಯದಲ್ಲಿ 3 ಜೀವದಾನ ಪಡೆದ ಧವನ್ ಅಂತಿಮವಾಗಿ 58 ಎಸೆತಗಳಲ್ಲಿ ಅಜೇಯ 101 ರನ್ ಗಳಿಸಿದರು. ಧವನ್ ಐಪಿಎಲ್ ಟೂರ್ನಿಯಲ್ಲಿ ಮೊದಲ ಶತಕ ಸಿಡಿಸಿದ ಸಾಧನೆ ಮಾಡಿದರು. ಉಳಿದಂತೆ ಡೆಲ್ಲಿ ಪರ ಅಯ್ಯರ್ 23 ರನ್, ಸ್ಟೋಯ್ನಿಸ್ 24 ರನ್, ಅಲೆಕ್ಸ್ ಕ್ಯಾರಿ 4 ರನ್ ಗಳಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡುಪ್ಲೆಸಿಸ್ 58 ರನ್, ರಾಯುಡು ಅಜೇಯ 45 ರನ್, ರವೀಂದ್ರ ಜಡೇಜಾ ಅಜೇಯ 33 ರನ್‍ಗಳ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತ್ತು. ಡೆಲ್ಲಿ ಪರ ಅನ್ರಿಕ್ ನಾಟ್ರ್ಜೆ 2 ವಿಕೆಟ್ ಪಡೆದರೆ, ದೇಶಪಾಂಡೆ ಮತ್ತು ರಬಾಡಾ ತಲಾ 1 ವಿಕೆಟ್ ಪಡೆದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ತಂಡಕ್ಕೆ ಮೊದಲ ಓವರಿನ 3ನೇ ಎಸೆತದಲ್ಲೇ ಶಾಕ್ ಕೊಟ್ಟ ದೇಶಪಾಂಡೆ ಶೂನ್ಯಕ್ಕೆ ಸ್ಯಾಮ್ ಕರ್ರನ್ ರನ್ನು ಪೆವಿಲಿಯನ್‍ಗಟ್ಟಿದರು. ಆ ಬಳಿಕ ಬಂದ ವ್ಯಾಟ್ಸನ್, ಡೆಫ್ಲೆಸಿಸ್ ಜೋಡಿ 2ನೇ ವಿಕೆಟ್‍ಗೆ 87 ರನ್ ಗಳ ಜೊತೆಯಾಟ ನೀಡಿ ಡೆಲ್ಲಿ ಬೌಲರ್ ಗಳನ್ನು ಕಾಡಿತ್ತು. ತಂಡದ ರನ್ ವೇಗ ಹೆಚ್ಚಿಸುವ ಪ್ರಯತ್ನದಲ್ಲಿ ವ್ಯಾಟ್ಸನ್ 36 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. 58 ರನ್ ಗಳಿಸಿದ್ದ ಡುಫ್ಲೆಸಿಸ್ ರಬಾಡಾಗೆ ವಿಕೆಟ್ ಒಪ್ಪಿಸಿದರು. ನಾಯಕ ಧೋನಿ ಕೇವಲ 3 ರನ್ ಗಳಿಸಿ ಔಟಾದರು. ಈ ವೇಳೆಗೆ ಚೆನ್ನೈ 16.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿತ್ತು. ಸ್ಲಾಗ್ ಓವರ್ ಗಳಲ್ಲಿ ಅಂಬಟಿ ರಾಯುಡು, ಜಡೇಜಾ ಸ್ಫೋಟಕ ಬ್ಯಾಟಿಂಗ್ ನಡೆಸಿದ ಪರಿಣಾಮ ಚೆನ್ನೈ ಅಂತಿಮವಾಗಿ 20 ಓವರ್ ಗಳಲ್ಲಿ 179 ರನ್ ಗಳಿಸಿತು. ರಾಯುಡು ಹಾಗೂ ಜಡೇಜಾ 5ನೇ ವಿಕೆಟ್‍ಗೆ 21 ಎಸೆತಗಳಲ್ಲಿ ಅರ್ಧ ಶತಕದ ಜೊತೆಯಾಟ ನಡೆಸಿದರು.
0 comments:
Post a Comment