ದುಬೈ, ಅ. 30, 2020 (ಕರಾವಳಿ ಟೈಮ್ಸ್) : ರವೀಂದ್ರ ಜಡೇಜಾ ಅವರು ಕೊನೆ ಹಂತದಲ್ಲಿ ನಡೆಸಿದ ಸ್ಫೋಟಕ ಬ್ಯಾಟಿಂಗ್ ಕಾರಣದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುರುವಾರ ರಾತ್ರಿ ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಕೂಟದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್‍ಗಳ ರೋಮಾಂಚಕ ಗೆಲುವು ದಾಖಲಿಸಿದೆ.
ಗೆಲುವಿಗೆ 173 ರನ್‍ಗಳ ಗುರಿ ಬೆನ್ನಟ್ಟಿದ ಚೆನ್ನೈ ಅಂತಿಮವಾಗಿ 20 ಓವರ್‍ಗಳಲ್ಲಿ 178 ರನ್ ಭಾರಿ ಜಯಭೇರಿ ಭಾರಿಸಿತು. ಈ ಪಂದ್ಯವನ್ನು ಕೋಲ್ಕತ್ತಾ ಸೋತಿರುವ ಕಾರಣ ಪ್ಲೇ ಆಫ್ ಹಾದಿ ಕಠಿಣವಾಗಿದ್ದು ಉಳಿದ ತಂಡಗಳ ಫಲಿತಾಂಶದ ಮೇಲೆ ಕೆಕೆಆರ್ ಭವಿಷ್ಯ ನಿರ್ಧಾರವಾಗಲಿದೆ.
ಗೆಲುವಿಗೆ ದೂರವಾಗಿದ್ದ ಚೆನ್ನೈ 17. 2 ಓವರ್ ಆದಾಗ ಉತ್ತಮವಾಗಿ ಆಡುತ್ತಿದ್ದ ಋತುರಾಜ್ ಗಾಯಕ್‍ವಾಡ್ 72 ರನ್ (53 ಎಸೆತ, 6 ಬೌಂಡರಿ, 2 ಸಿಕ್ಸ್) ಭಾರಿಸಿ ನಿರ್ಗಮಿಸಿದರು. ಈ ವೇಳೆ ಕ್ರೀಸಿಗೆ ಬಂದ ಜಡೇಜಾ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಜಡೇಜಾ ಅಭಿಮಾನಿಗಳ ಕುತೂಹಲವನ್ನು ನಿರಾಸೆಗೊಳಿಸಲಿಲ್ಲ. ಕೊನೆಯ 12 ಎಸೆತಗಳಲ್ಲಿ ಚೆನ್ನೈ ವಿಜಯಕ್ಕೆ 30 ರನ್‍ಗಳ ಅವಶ್ಯಕತೆ ಇತ್ತು. ಫರ್ಗ್ಯೂಸನ್ ಎಸೆದ 19ನೇ ಓವರ್‍ನಲ್ಲಿ ಜಡೇಜಾ ಎರಡು ಬೌಂಡರಿ, 1 ಸಿಕ್ಸರ್ ಸಿಡಿಸುವ ಮೂಲಕ ಬರೋಬ್ಬರಿ 20 ರನ್ ದೋಚಿದರು.
ಕೊನೆಯ ಓವರ್ ನಾಗರಕೋಟಿ ಪಾಲಾಯಿತು. ಚೆನ್ನೈ ಗೆಲುವಿಗೆ ಕೇವಲ 10 ರನ್‍ಗಳ ಅವಶ್ಯಕತೆ ಇತ್ತು. ಮೊದಲ ಎಸೆತ ಡಾಟ್ ಬಾಲ್ ಆಯಿತು. 2ನೇ ಎಸೆತದಲ್ಲಿ 2 ರನ್, 3ನೇ ಎಸೆತದಲ್ಲಿ ಕರ್ರನ್ ಒಂಟಿ ರನ್ ತೆಗೆದು ಜಡೇಜಾಗೆ ಸ್ಟ್ರೈಕ್ ಒಪ್ಪಿಸಿದರು. 4ನೇ ಎಸೆತ ಮತ್ತೆ ಡಾಟ್ ಬಾಲ್. ಕೊನೆಯ 2 ಎಸೆತದಲ್ಲಿ 7 ರನ್‍ಗಳ ಅವಶ್ಯಕತೆ ಇತ್ತು. 5ನೇ ಎಸೆತವನ್ನು ಸಿಕ್ಸರ್‍ಗೆ ಅಟ್ಟಿದ ಜಡೇಜಾ ಪಂದ್ಯ ಟೈ ಮಾಡಿದರು. ಕೊನೆಯ ಎಸೆತದಲ್ಲಿ ಒಂದು ರನ್ ಅವಶ್ಯಕತೆ ಇದ್ದಾಗ ಅದನ್ನೂ ಸಿಕ್ಸರ್‍ಗೆ ಅಟ್ಟಿದ ಜಡೇಜಾ ಚೆನ್ನೈ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
11 ಎಸೆತ ಎದುರಿಸಿದ ರವೀಂದ್ರ ಜಡೇಜಾ 3 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 31 ರನ್ ಚಚ್ಚಿದರು. ಸ್ಯಾಮ್ ಕರ್ರನ್ 13 ರನ್ ಹೊಡೆದರು. ಅಂಬಾಟಿ ರಾಯಡು 38 ರನ್ (20 ಎಸೆತ, 5 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರೆ, ನಾಯಕ ಧೋನಿ ಕೇವಲ 1 ರನ್ ಗಳಿಸಿ ನಿರ್ಗಮಿಸಿದರು. ಫರ್ಗ್ಯೂಸನ್ 4 ಓವರ್ ಎಸೆದು 54 ರನ್ ನೀಡಿ ದುಬಾರಿ ಬೌಲರ್ ಎನಿಸಿದರು.
ಕೋಲ್ಕತ್ತಾ ಪರ ನಿತೀಶ್ ರಾಣಾ 87 ರನ್ (61 ಎಸೆತ, 10 ಬೌಂಡರಿ, 4 ಸಿಕ್ಸರ್) ಹೊಡೆದರೆ ಶುಭಮನ್ ಗಿಲ್ 26 ರನ್ ಹೊಡೆದರು. ಅಂತಿಮವಾಗಿ ಕೋಲ್ಕತ್ತಾ 20 ಓವರ್‍ಗಳಿಗೆ 5 ವಿಕೆಟ್ ಕಳೆದುಕೊಂಡು 172 ರನ್ ಹೊಡೆಯಿತು.
0 comments:
Post a Comment