2010 ರ ಇತಿಹಾಸ ಮತ್ತೆ ಮರುಕಳಿಸುವುದೇ?
ದುಬೈ, ಅ. 13, 2020 (ಕರಾವಳಿ ಟೈಮ್ಸ್) : ಸೋಲಿನಿಂದ ಬಸವಳಿದು ಹೋಗಿದ್ದ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಂಗಳವಾರ ರಾತ್ರಿ ದುಬೈ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಕೂಟದ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡದ ವಿರುದ್ದ 20 ರನ್ ಗಳಿಂದ ಮಹತ್ವದ ಜಯ ದಾಖಲಿಸಿದೆ. ಸದ್ಯ ಧೋನಿ ಪಡೆ 20 6 ಅಂಕಗಳೊಂದಿಗೆ ಅಂಕ ಪಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ.
ಐಪಿಎಲ್ 2010ರ ಆವೃತ್ತಿಯಲ್ಲಿ ಚೆನ್ನೈ ತಂಡ ಇದೇ ರೀತಿಯ ಸ್ಥಿತಿಯಲ್ಲಿತ್ತು. ಮೊದಲ 7 ಪಂದ್ಯಗಳು ಮುಕ್ತಾಯಗೊಂಡಾಗ 7ನೇ ಸ್ಥಾನದಲ್ಲಿದ್ದ ಚೆನ್ನೈ ತಂಡ ಆ ಬಳಿಕ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆವಾಗ ಕೂಡಾ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 8ನೇ ಸ್ಥಾನದಲ್ಲಿತ್ತು. ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಇದೀಗ ಈ ಬಾರಿಯ ಐಪಿಎಲ್ ನಲ್ಲಿಯೂ ಅದೇ ಸ್ಥಿತಿ ನಿರ್ಮಾಣಗೊಂಡಿದ್ದು, ಇತಿಹಾಸ ಮರುಕಳಿಸಲಿದೆಯೇ ಎಂಬ ಕುತೂಹಲ ಗರಿಗೆದರಿದೆ.
ಚೆನ್ನೈ ನೀಡಿದ್ದ 168 ರನ್ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಆರಂಭಿಕರಾದ ವಾರ್ನರ್, ಬೈರ್ ಸ್ಟೋವ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ವಾರ್ನರ್ 9 ರನ್, ಬೈರ್ ಸ್ಟೋವ್ 23 ರನ್, ಮನೀಷ್ ಪಾಂಡೆ 4 ರನ್ ಗಳಸಿ ವಿಕೆಟ್ ಒಪ್ಪಿಸಿದರು. 10 ಓವರ್ ಗಳಲ್ಲಿ 59 ರನ್ ಗಳಿಸಿದ್ದ ಎಸ್‍ಆರ್ ಎಚ್ ಪ್ರಮುಖ 3 ವಿಕೆಟ್ ಕಳೆದುಕೊಂದು ಸಂಕಷ್ಟಕ್ಕೆ ಸಿಲುಕಿತ್ತು.
ವಿಕೆಟ್ ಉರುಳುತ್ತಿದ್ದರೂ ವಿಲಿಯಮ್ಸ್ ಸನ್ 39 ಎಸೆತಗಳಲ್ಲಿ 7 ಬೌಂಡರಿ ಗಳೊಂದಿಗೆ 57 ರನ್ ಗಳಿಸಿ ಗೆಲುವನ್ನು ತಂದುಕೊಡುವ ಭರವಸೆ ಮೂಡಿಸಿದ್ದರು. ಆದರೆ ಕರಣ್ ಶರ್ಮಾ ಬೌಲಿಂಗ್‍ನಲ್ಲಿ ಭಾರೀ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರು. ಉಳಿದಂತೆ ಇತರ ಯಾವುದೇ ಆಟಗಾರಿಂದ ಪತಿರೋಧ ಕಂಡುಬರಲಿಲ್ಲ. ಗರ್ಗ್ 16 ರನ್, ವಿಜಯ್ ಶಂಕರ್ 12 ರನ್, ನದೀಮ್ 5 ರನ್ ಗಳಿಸಿ ಔಟಾದರೆ, ರಶೀದ್ ಖಾನ್ ಹಿಟ್ ವಿಕೆಟ್ ಆಗಿ ಪೆವಿಲಿಯನ್ ಸೇರಿದರು.
ಚೆನ್ನೈ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಕರಣ್ ಶರ್ಮಾ, ಬ್ರಾವೋ ತಲಾ 2 ವಿಕೆಟ್ ಹಾಗೂ ಕರ್ರನ್, ಜಡೇಜಾ, ಠಾಕೂರ್ ತಲಾ 1 ವಿಕೆಟ್ ಪಡೆದು ಚೆನ್ನೈ ಗೆಲುವಿಗೆ ಕಾರಣರಾದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರ ಸಂಘಟಿತ ಪ್ರದರ್ಶನದಿಂದಾಗಿ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು.
ಡುಪ್ಲೆಸಿಸ್ ಇನ್ನಿಂಗ್ಸ್ ನಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರೆ, ಕರ್ರನ್ 21 ಎಸೆತಗಳಲ್ಲಿ 31 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಬಳಿಕ ಬಂದ ರಾಯುಡು 34 ಎಸೆತಗಳಲ್ಲಿ 41 ರನ್, ವ್ಯಾಟ್ಸನ್ 38 ಎಸೆತಗಳಲ್ಲಿ 42 ರನ್ ಗಳಿಸಿದರು. ಈ ಜೋಡಿ 3ನೇ ವಿಕೆಟ್‍ಗೆ 81 ರನ್ ಜೊತೆಯಾಟ ನೀಡಿತ್ತು. ಧೋನಿ 13 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರೆ, ಬ್ರಾವೋ ಶೂನ್ಯ ಸಾಧನೆ ಮಾಡಿದರು. ಅಂತಿಮವಾಗಿ ಜಡೇಜಾ 25 ರನ್, ಚಹರ್ 2 ರನ್ ಗಳಿಸಿ ಅಜೇಯರಾಗಿ ಉಳಿದರು.
ಹೈದರಾಬಾದ್ ಪರ ಸಂದೀಪ್ ಶರ್ಮಾ, ಖಲೀಲ್ ಅಹ್ಮದ್, ನಟರಾಜನ್ ತಲಾ 2 ವಿಕೆಟ್ ಪಡೆದರು.
0 comments:
Post a Comment