ಧೋನಿ ಪಡೆಯ ಪ್ಲೇ ಆಫ್ ಅವಕಾಶ ಜೀವಂತ
ದುಬೈ, ಅ. 25, 2020 (ಕರಾವಳಿ ಟೈಮ್ಸ್) ಇಲ್ಲಿನ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಐಪಿಎಲ್-2020ನೇ ಆವೃತ್ತಿಯ ಸೂಪರ್ ಸಂಡೇ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ 8 ವಿಕೆಟ್‍ಗಳ ಅಮೋಘ ಜಯ ಸಾಧಿಸುವ ಮೂಲಕ ಪ್ಲೇ ಆಫ್ ಹಂತಕ್ಕೇರುವ ಕನಸಿಗೆ ಮತ್ತಷ್ಟು ಹತ್ತಿರವಾಗಿದೆ.
ಟಾಸ್ ಗೆದ್ದು ಮೊದಲು ದಾಂಡುಗಾರಿಕೆ ಆರಿಸಿಕೊಂಡ ಬೆಂಗಳೂರು ತಂಡ ನಾಯಕ ವಿರಾಟ್ ಕೊಹ್ಲಿ ಅವರ ಅರ್ಧಶತಕ ಹಾಗೂ ಎಬಿ ಡೆವಿಲಿಯರ್ಸ್ ಅವರ ತಾಳ್ಮೆಯ ಆಟದಿಂದ ನಿಗದಿತ 20 ಓವರ್‍ಗಳಲ್ಲಿ ಕೇವಲ 145 ರನ್‍ಗಳಿಸಲಷ್ಟೆ ಶಕ್ತವಾಯಿತು. ಸುಲಭ ಗುರಿ ಬೆನ್ನಟ್ಟಿದ ಚೆನ್ನೈ ತಂಡ ಅಂಬಾಟಿ ರಾಯುಡು ಹಾಗೂ ರುತುರಾಜ್ ಗಾಯಕ್‍ವಾಡ್ ಅವರ ಉತ್ತಮ ಜೊತೆಯಾಟದ ನೆರವಿನಿಂದ ಇನ್ನೂ 8 ಎಸೆತಗಳು ಬಾಕಿ ಇರುವಂತೆ 150 ರನ್ ಭಾರಿಸಿ ಅರ್ಹ ಜಯಭೇರಿ ಭಾರಿಸಿತು.
145 ರನ್‍ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾÀಯಕ್‍ವಾಡ್ ಹಾಗೂ ಫಾಫ್ ಡು ಪ್ಲೆಸಿಸ್ ಉತ್ತಮ ಜೊತೆಯಾಟ ನಡೆಸಿ 5 ಓವರ್ ಮುಕ್ತಾಯಕ್ಕೆ 46 ರನ್ ಸಿಡಿಸಿದರು. ಆದರೆ 5ನೇ ಓವರಿನ ಮೊದಲ ಎಸೆತದಲ್ಲಿ 25 ರನ್ ಗಳಿಸಿದ್ದ ಫಾಫ್ ಡು ಪ್ಲೆಸಿಸ್ ಅವರು ಮೋರಿಸ್‍ಗೆ ವಿಕೆಟ್ ಒಪ್ಪಿಸಿದರು. ಬಳಿಕ ಜೊತೆಯಾದ ಅಂಬಾಟಿ ರಾಯುಡು ಹಾಗೂ ಋತುರಾಜ್ ಗಾಯಕವಾಡ್ ಅರ್ಧಶತಕದ ಜೊತೆಯಾಟವಾಡಿದರು. 49 ಎಸೆತಗಳಲ್ಲಿ 67 ರನ್ ಜೊತೆಯಾಟವಾಡಿದ ಈ ಜೋಡಿ 13ನೇ ಓವರಿನಲ್ಲಿ ಬೇರ್ಪಟ್ಟಿತು. 27 ಎಸೆತಗಳಲ್ಲಿ 39 ರನ್ ಸಿಡಿಸಿದ ಅಂಬಟಿ ರಾಯುಡು ಅವರು ಯುಜ್ವೇಂದ್ರ ಚಾಹಲ್ ಅವರಿಗೆ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡರು. ಋತುರಾಜ್ ಗಯಕ್‍ವಾಡ್ 42 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು.
ಬಳಿಕ ಗಾಯಕ್‍ವಾಡ್ ಅವರ ಜೊತೆಗೂಡಿದ ನಾಯಕ ಎಂ.ಎಸ್. ಧೋನಿ ಸಹನೆಯ ಆಟವಾಡಿ ತಂಡವನ್ನು ಸುಲಭವಾಗಿ ದಡ ಸೇರಿಸಿದರು. ಉತ್ತಮವಾಗಿ ಆಡಿದ ರುತುರಾಜ್ ಗಾಯಕ್‍ವಾಡ್ 51 ಎಸೆತದಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿಯಿಂದ ಕೂಡಿದ 65 ರನ್ ಭಾರಿಸಿದರು. ಧೋನಿ 21 ಎಸೆತಗಳಲ್ಲಿ 3 ಬೌಂಡರಿ ಒಳಗೊಂಡ 19 ರನ್ ಗಳಿಸಿದರು.
0 comments:
Post a Comment