ಗುಡ್ಡೆಅಂಗಡಿ ಮರ್ಡರ್ ಫಾಲೋ ಅಪ್
ಬಂಟ್ವಾಳ, ಅ. 24, 2020 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಠಾಣಾ ವ್ಯಾಪ್ತಿಯ ಮೆಲ್ಕಾರ್ ಸಮೀಪದ ಗುಡ್ಡೆಅಂಗಡಿ ಬಳಿ ಶುಕ್ರವಾರ ಸಂಜೆ ಕಲ್ಲಡ್ಕ ನಿವಾಸಿ, ರೌಡಿ ಶೀಟರ್ ಉಮ್ಮರ್ ಫಾರೂಕ್ ಯಾನೆ ಚೆನ್ನ ಫಾರೂಕ್ (27) ಎಂಬಾತನನ್ನು ಅಟ್ಟಾಡಿಸಿ ಕಡಿದು ಕೊಂದ ಆರೋಪಿ ಇನ್ನೊಬ್ಬ ರೌಡಿ ಶೀಟರ್, ಕಲ್ಲಡ್ಕ ನಿವಾಸಿ ಖಲೀಲ್ ಹಾಗೂ ಇತರರು ಎಂಬ ಖಚಿತ ಮಾಹಿತಿ ಪಡೆದ ಪೊಲೀಸರ ವಿಶೇಷ ತಂಡ ಆರೋಪಿಗಳ ಪತ್ತೆಗೆ ಶುಕ್ರವಾರ ರಾತ್ರಿಯಿಂದಲೇ ಕಾರ್ಯೋನ್ಮುಖರಾಗಿದ್ದರು. ಈ ವೇಳೆ ಆರೋಪಿಗಳು ಬೆಂಗಳೂರು ಕಡೆ ಪರಾರಿಯಾಗುತ್ತಿದ್ದಾರೆ ಎಂಬ ಮಾಹಿತಿ ಪಡೆದ ಪೊಲೀಸರು ಅವರನ್ನು ಬೆನ್ನಟ್ಟಿದ್ದು, ಗುಂಡ್ಯ ಬಳಿ ಶನಿವಾರ ಮುಂಜಾನೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವ ವೇಳೆ ಆರೋಪಿಗಳು ಪೊಲೀಸರ ಮೇಲೆಯೂ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಈ ಸಂದರ್ಭ ಬಂಟ್ವಾಳ ನಗರ ಎಸ್ಸೈ ಅವಿನಾಶ್ ಫೈರಿಂಗ್ ನಡೆಸಿದ್ದು, ಆರೋಪಿ ಖಲೀಲ್ ನನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಆರೋಪಿ ಹಾಗೂ ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ ಅವರಿಗೆ ಗಾಯಗಳಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಿಬ್ನರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಪರಾರಿಯಾಗಿರುವ ಆರೋಪಿಗಳು ಹಫೀಝ್ ಹಾಗೂ ಇನ್ನೋರ್ವ ಎನ್ನಲಾಗಿದ್ದು, ಅವರ ಬಂಧನಕ್ಕೆ ಪೊಲೀಸ್ ಟೀಂ ಬಲೆ ಬೀಸಿದೆ.
ಬಂಧಿತ ಖಲೀಲ್ ಕಲ್ಲಡ್ಕ ಗಲಭೆ ಸಹಿತ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದು ಈತನೂ ರೌಡಿಶೀಟರ್ ಆಗಿ ಪೊಲೀಸ್ ಲಿಸ್ಟ್ ನಲ್ಲಿ ಗುರುತಿಸಿಕೊಂಡಿದ್ದಾನೆ.
0 comments:
Post a Comment