ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ
ಬೆಂಗಳೂರು, ಅ. 23, 2020 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಪದವಿ ಕಾಲೇಜುಗಳ ಪುನಾರಂಭಕ್ಕೆ ಸಂಬಂಧಿಸಿ ಸರಕಾರ ತೀರ್ಮಾನ ಕೈಗೊಂಡಿದ್ದು, ನವೆಂಬರ್ 17 ರಿಂದ ಯುಜಿಸಿ ಮಾರ್ಗಸೂಚಿ ಪ್ರಕಾರ ಪದವಿ ತರಗತಿಗಳು ಪ್ರಾರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಪ್ರಾರಂಭದಲ್ಲಿ ಪದವಿ, ಡಿಪ್ಲೋಮಾ ಹಾಗೂ ಎಂಜಿನಿಯರಿಂಗ್ ತರಗತಿಗಳು ಪ್ರಾರಂಭಿಸಲಾಗುತ್ತದೆ. ಆನ್ ಲೈನ್ ತರಗತಿಗಳೂ ಮುಂದುವರಿಯುತ್ತದೆ. ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿಯೂ ಕಲಿಯಬಹುದು ಇಲ್ಲವೇ ಆನ್ ಲೈನ್ ತರಗತಿಗೂ ಹಾಜರಾಗಬಹುದು. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ತರಗತಿಗಳಲ್ಲಿ ಎಲ್ಲಾ ಬಗೆಯ ಸುರಕ್ಷಿತಾ ಕ್ರಮ ಕೈಗೊಳ್ಳಲಾಗುತ್ತದೆ ಎಂದವರು ಹೇಳಿದ್ದಾರೆ.
ಹಾಸ್ಟೆಲ್ ಗಳಲ್ಲಿ ಸಹ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಲಾಗುವುದು. ವಿದ್ಯಾರ್ಥಿಗಳ ಸಂಖ್ಯೆಯ ಆಧಾರದಲ್ಲಿ ಶಿಫ್ಟ್ ಹಾಗೂ ಬ್ಯಾಚ್ ಆಧಾರದಲ್ಲಿ ತರಗತಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಅಶ್ವಥ ನಾರಾಯಣ ಹೇಳಿದ್ದಾರೆ.
ಪದವಿ ತರಗತಿಗಳು ವಿದ್ಯಾರ್ಥಿಗಳಿಗೆ ಕಡ್ಡಾಯವಲ್ಲ. ಹಾಜರಾಗುವ ವಿದ್ಯಾರ್ಥಿಗಳಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯ ಎಂದು ಸಚಿವರು ತಿಳಿಸಿದ್ದಾರೆ. ಪಿಯುಸಿ ತರಗತಿ ಆರಂಭದ ಬಗ್ಗೆ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ.
ಸಭೆಯಲ್ಲಿ ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಹಾಗೂ ಉನ್ನತ ಶಿಕ್ಷಣ ಇಲಾಖೆ ಸಲಹೆಗಾರ ದೊರೆಸ್ವಾಮಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment