ಸರಕಾರಗಳ ನಿರ್ಲಕ್ಷ್ಯದಿಂದ ಸರಕಾರಿ ಆಸ್ಪತ್ರೆಗಳು ಸೊರಗುತ್ತಿವೆ : ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ - Karavali Times ಸರಕಾರಗಳ ನಿರ್ಲಕ್ಷ್ಯದಿಂದ ಸರಕಾರಿ ಆಸ್ಪತ್ರೆಗಳು ಸೊರಗುತ್ತಿವೆ : ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ - Karavali Times

728x90

19 October 2020

ಸರಕಾರಗಳ ನಿರ್ಲಕ್ಷ್ಯದಿಂದ ಸರಕಾರಿ ಆಸ್ಪತ್ರೆಗಳು ಸೊರಗುತ್ತಿವೆ : ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ









ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ, ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಲು ಆಗ್ರಹಿಸಿ ಬಿ.ಸಿ.ರೋಡಿನಲ್ಲಿ ಧರಣಿ 

ಬಂಟ್ವಾಳ, ಅ. 19, 2020 (ಕರಾವಳಿ ಟೈಮ್ಸ್) : ಸೇವೆಯ ಹೆಸರಿನಲ್ಲಿ ತೆರೆಯುವ ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಖಾಸಗಿ ಆಸ್ಪತ್ರೆಗಳು ಬಳಿಕ ಮುಕ್ತ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುತ್ತಿವೆ. ಇದರ ಜೊತೆಗೆ ಸಾರ್ವಜನಿಕ ಆರೋಗ್ಯ ಸೇವೆಯನ್ನು ಸರಕಾರಗಳು ಪೂರ್ಣವಾಗಿ ಕಡೆಗಣಿಸುತ್ತಾ ಬರುತ್ತಿದ್ದು, ತಜ್ಞ ವೈದ್ಯರ ಸಹಿತ ಮೂಲಭೂತ ಸೌಲಭ್ಯಗಳ ಕೊರತೆ, ಗುಣಮಟ್ಟದ ಚಿಕಿತ್ಸೆಗಳು ಲಭ್ಯವಿಲ್ಲದಿರುವುದು, ಔಷಧಿಗಳ ಅಲಭ್ಯದಿಂದ ಜನರು ಸರಕಾರಿ ಆಸ್ಪತ್ರೆಗಳಿಂದ ದೂರ ಸರಿಯುವಂತಾಗುತ್ತಿದೆ ಎಂದು ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು. 

ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಬಂಟ್ವಾಳ ತಾಲೂಕು ಇದರ ವತಿಯಿಂದ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ, ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ ಎಂದು ಆಗ್ರಹಿಸಿ ಬಿ.ಸಿ.ರೋಡು ಮಿನಿ ವಿಧಾನಸೌಧ ಮುಂಭಾಗ ಸೋಮವಾರ ನಡೆದ ಧರಣಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಆರೋಗ್ಯ ಪ್ರತಿಯೊಬ್ಬ ನಾಗರಿಕನ ಹಕ್ಕು. ತಾರತಮ್ಯವಿಲ್ಲದೆ ಭಾರತೀಯರೆಲ್ಲರಿಗೂ ಆರೋಗ್ಯ ಸೇವೆ ದೊರಕಬೇಕು. ಇದು ನಮ್ಮ ಸಂವಿಧಾನದ ಆಶಯವೂ ಆಗಿದೆ. ಆದರೆ ಮೂರು ದಶಕಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಾರೀಕರಣಕ್ಕೆ ಅನುವು ಮಾಡಿ ಕೊಡಲಾಗಿದೆ ಎಂದವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

ಸರಕಾರಿ ವೈದ್ಯಕೀಯ ಸೇವೆಗಳಿಗೆ ಸಂಬಂಧಿಸಿ ಸರಕಾರವೇ ರೂಪಿಸಿದ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಕರ್ನಾಟಕ ವೈದ್ಯಕೀಯ ಅಧಿನಿಯಮದ ಪ್ರಕಾರ ಪ್ರತಿ ಇಪ್ಪತ್ತೈದು ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಎಪ್ಪತ್ತೈದು ಸಾವಿರ ಜನಸಂಖ್ಯೆ ಅಥವಾ ಹೋಬಳಿ ಕೇಂದ್ರವೊಂದಕ್ಕೆ ನಲವತ್ತು ಹಾಸಿಗೆಗಳ ಸಮುದಾಯ ಆಸ್ಪತ್ರೆ, ಪ್ರತಿ ತಾಲೂಕಿಗೊಂದು ನೂರು ಹಾಸಿಗೆಗಳ ಪೂರ್ಣ ಪ್ರಮಾಣದ ಆಸ್ಪತ್ರೆ, ಸುಸಜ್ಜಿತ ಜಿಲ್ಲಾಸ್ಪತ್ರೆ ಇರಬೇಕು. ಜೊತೆಗೆ ಅದಕ್ಕೆ ತಕ್ಕುದಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಆದರೆ ನಿಯಮದಂತೆ ಪ್ರಾಥಮಿಕ, ಸಮುದಾಯ ಆಸ್ಪತ್ರೆಗಳನ್ನು ತೆರೆಯುವಲ್ಲಿ, ಅರೋಗ್ಯ ಸೇವೆ ಒದಗಿಸುವಲ್ಲಿ ಸರಕಾರ ತೀರಾ ನಿರ್ಲಕ್ಷ್ಯ ತೋರುತ್ತಿದೆ ಎಂದವರು ಆರೋಪಿಸಿದರು. 

ಪ್ರಸಕ್ತ ಇರುವ ಆರೋಗ್ಯ ಕೇಂದ್ರಗಳಲ್ಲೂ ವೈದ್ಯರ, ಸಿಬ್ಬಂದಿ ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಇದು ತಳಮಟ್ಟದಲ್ಲಿ ಜನಸಾಮಾನ್ಯರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಿದೆ. ಇಂತಹ ಸ್ಥಿತಿ ಖಾಸಗಿ ಆಸ್ಪತ್ರೆಗಳಿಗೆ ಅನುಕೂಲಕರವಾಗಿದೆ. ಆರೋಗ್ಯ ಯೋಜನೆಗಳು, ಇನ್ಸೂರೆನ್ಸ್ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಖಜಾನೆಯಿಂದ ಸರಕಾರ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಇದರಿಂದಾಗಿ ಸರಕಾರಿ ಆಸ್ಪತ್ರೆಗಳು ಸೊರಗಿ ಖಾಸಗಿ ಆಸ್ಪತ್ರೆಗಳು ಬೆಳೆಯುತ್ತಿವೆ ಎಂದರು. 

8 ತಾಲೂಕು, ಸುಮಾರು ಇಪ್ಪತ್ತೈದು ಲಕ್ಷ ಜನಸಂಖ್ಯೆ ಇರುವ ದಕ್ಷಿಣ ಕನ್ನಡ ಜಿಲ್ಲೆ ಕೇವಲ ನಾಲ್ಕು ತಾಲೂಕು ಆಸ್ಪತ್ರೆ, 8 ಸಮುದಾಯ ಆಸ್ಪತ್ರೆಗಳನ್ನು ಹೊಂದಿದೆ. ಮಂಜೂರಾದ 1,800 ಹುದ್ದೆಗಳಲ್ಲಿ ಅರ್ಧದಷ್ಟು ಖಾಲಿ ಬಿದ್ದಿವೆ.  ಕೊರೋನ ಸಂದರ್ಭದಲ್ಲಿ ಅರೋಗ್ಯ ಕ್ಷೇತ್ರದ ವ್ಯಾಪಾರೀಕರಣ ಘೋರ ಮಟ್ಟಕ್ಕೆ ತಲುಪಿದೆ ಎಂದ ಮುನೀರ್ ಕಾಟಿಪಳ್ಳ ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷ್ ಆಡಳಿತ ನಿರ್ಮಿಸಿದ ವೆನ್‍ಲಾಕ್ ಜಿಲ್ಲಾಸ್ಪತ್ರೆಯನ್ನು ಬಳಸಿಕೊಂಡು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಉತ್ತಮ ಅವಕಾಶ ಇದ್ದರೂ ಅದಕ್ಕೆ ಬದಲಾಗಿ ವೆನ್‍ಲಾಕ್ ಆಸ್ಪತ್ರೆಯನ್ನು ಕ್ಲಿನಿಕಲ್ ಕಲಿಕೆಗೆ ಬಳಸಿಕೊಂಡು ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲು ಖಾಸಗಿಯವರಿಗೆ ಅವಕಾಶ ನೀಡಲಾಗಿದೆ. 8 ಖಾಸಗಿ ಮೆಡಿಕಲ್ ಕಾಲೇಜುಗಳು ಇರುವ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಇಲ್ಲದಿರುವುದು ಖೇದಕರ. ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಕನಿಷ್ಟ ಮೂರು ಇರಬೇಕಾದಲ್ಲಿ ಕೇವಲ ಒಂದು ಸಮುದಾಯ ಆಸ್ಪತ್ರೆ ಮಾತ್ರ ಇದೆ. ಇರುವ ಸಮುದಾಯ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ, ಸಿಬ್ಬಂದಿ ಕೊರತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಈ ಎಲ್ಲಾ ಸಮಸ್ಯೆಗಳಿಗೆ ಸರಕಾರಿ ಅರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದೇ ದಾರಿ. ವೆನ್‍ಲಾಕ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಸರಕಾರಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಬೇಕು. ಜನಸಂಖ್ಯೆಗೆ ಅನುಸಾರ ಪ್ರಾಥಮಿಕ, ಸಮುದಾಯ ಆಸ್ಪತ್ರೆ ನಿರ್ಮಿಸಿ, ಖಾಲಿ ಇರುವ ವೈದ್ಯ, ಸಿಬ್ಬಂದಿ ಭರ್ತಿ ಮಾಡಬೇಕು. ಜಿಲ್ಲೆಯ ಎಲ್ಲಾ 8 ತಾಲೂಕುಗಳಲ್ಲಿ ಪೂರ್ಣಪ್ರಮಾಣದ ನೂರು ಹಾಸಿಗೆಗಳ ತಾಲೂಕು ಆಸ್ಪತ್ರೆ  ಸ್ಥಾಪಿಸಬೇಕು ಎಂದವರು ಆಗ್ರಹಿಸಿದರು. 

ಮನಪಾ ಮಾಜಿ ಮೇಯರ್ ಮುಹಮ್ಮದ್ ಕುಂಜತಬೈಲ್, ಪ್ರಮುಖರಾದ ಬಿ. ಶೇಖರ್, ಸದಾಶಿವ ಬಂಗೇರ, ಚಿತ್ರರಂಜನ್ ಶೆಟ್ಟಿ ಬೊಂಡಾಲ, ರಾಜಾ ಪಲ್ಲಮಜಲು, ಅಲ್ತಾಫ್ ತುಂಬೆ, ರಾಮಣ್ಣ ವಿಟ್ಲ, ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡೀಸ್, ಭಾರತೀ ಪ್ರಶಾಂತ್, ಸವಾಝ್ ಬಂಟ್ವಾಳ ಮಾತನಾಡಿದರು. 

ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಪ್ರಮುಖರಾದ ಸೀತಾರಾಂ ಬೇರಿಂಜ, ಅಶ್ರಫ್ ಕಲ್ಲೇಗ, ಸುರೇಂದ್ರ ಕೋಟ್ಯಾನ್, ರಾಜಾ ಚೆಂಡ್ತಿಮಾರ್, ಹಾರೂನ್ ರಶೀದ್, ಕೃಷ್ಣಪ್ಪ ಪುದ್ದೊಟ್ಟು, ಮುಹಮ್ಮದ್ ಇಸಾಕ್, ದಿವಾಕರ ಪೂಜಾರಿ ಮೊದಲಾದವರು ಧರಣಿಯ ನೇತೃತ್ವ ವಹಿಸಿದ್ದರು. 

ತುಳಸೀದಾಸ್ ವಿಟ್ಲ ಸ್ವಾಗತಿಸಿ, ಸಲೀಂ ವಂದಿಸಿದರು. ಸುರೇಶ್ ಕುಮಾರ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರಿಗೆ ಧರಣಿ ನಿರತರು ವಿವಿಧ ಬೇಡಿಕೆಗಳುಳ್ಳ ಮನವಿ ಸಲ್ಲಿಸಿದರು.








  • Blogger Comments
  • Facebook Comments

0 comments:

Post a Comment

Item Reviewed: ಸರಕಾರಗಳ ನಿರ್ಲಕ್ಷ್ಯದಿಂದ ಸರಕಾರಿ ಆಸ್ಪತ್ರೆಗಳು ಸೊರಗುತ್ತಿವೆ : ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ Rating: 5 Reviewed By: karavali Times
Scroll to Top