ಬಂಟ್ವಾಳ, ಅ. 19, 2020 (ಕರಾವಳಿ ಟೈಮ್ಸ್) : ಇಲ್ಲಿನ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಮಣಿನಾಲ್ಕೂರು ಗ್ರಾಮದ ನಿವಾಸಿ ಸಂಪತ್ ಕುಮಾರ್ ಶೆಟ್ಟಿ ಅವರನ್ನು ಸುರೇಶ್ ಪೂಜಾರಿ ಎಂಬಾತ ರಸ್ತೆಯಲ್ಲಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಬಾನುವಾರ ರಾತ್ರಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಭಾನುವಾರ ರಾತ್ರಿ ಸುಮಾರು 7 ಗಂಟೆಯ ವೇಳೆಗೆ ಸಂಪತ್ ಕುಮಾರ್ ಅವರು ಒಡಿಯೂರು ಕ್ಷೇತ್ರದ ಸಭೆಯೊಂದನ್ನು ಮುಗಿಸಿ ತನ್ನ ಕಾರಿನಲ್ಲಿ ಬರುತ್ತಿದ್ದ ವೇಳೆ ಮಣಿನಾಲ್ಕೂರು ಗ್ರಾಮದ ಅಗರಗುಂಡಿ ಎಂಬಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿ ಪರಿಚಯಸ್ಥರಾದ ಪ್ರವೀಣ ಎಂಬವರ ಜೊತೆ ಮಾತನಾಡುತ್ತಿದ್ದ ವೇಳೆ ಹಿಂದಿನಿಂದ ಹಾಲಿನ ಟೆಂಪೋದಲ್ಲಿ ಬಂದ ಆರೋಪಿ ಸುರೇಶ್ ಪೂಜಾರಿ ಹಾರ್ನ್ ಮಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ಬೈದು, ಟೆಂಪೋದಿಂದ ಇಳಿದು ಹಲ್ಲೆ ನಡೆಸಲು ಮುಂದಾಗಿರುತ್ತಾನೆ. ಈ ಸಂದರ್ಭ ಸ್ಥಳದಲ್ಲಿದ್ದ ವೇಣುಗೋಪಾಲ ಎಂಬವರು ತಡೆದಿರುತ್ತಾರೆ. ಈ ವೇಳೆ ಆರೋಪಿಯು ನಿನ್ನನ್ನು ನನ್ನ ಟೆಂಪೋ ಅಡಿಗೆ ಹಾಕಿ ಕೊಲ್ಲುತ್ತೇನೆ. ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬಿತ್ಯಾದಿಯಾಗಿ ಜೀವ ಬೆದರಿಕೆ ಒಡ್ಡಿರುತ್ತಾನೆ ಎಂದು ಸಂಪತ್ ಕುಮಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದು, ಆರೋಪಿ ಯಾವುದೋ ಪ್ರಭಾವದಿಂದ ವಿನಾ ಕಾರಣ ಈ ಕೃತ್ಯ ಎಸಗಿದ್ದು, ಆತನ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ವಿನಂತಿಸಿದ್ದಾರೆ.
0 comments:
Post a Comment