ಮಂಗಳೂರು, ಸೆ. 24, 2020 (ಕರಾವಳಿ ಟೈಮ್ಸ್) : ಉಡುಪಿ ಜಿಲ್ಲಾ ಸಂಯುಕ್ತ ಖಾಝಿ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲಾ ಖಾಝಿಯೂ, ಪ್ರಮುಖ ಇಸ್ಲಾಮೀ ಕರ್ಮಶಾಸ್ತ್ರ ಪಂಡಿತರೂ ಆಗಿರುವ ಶೈಖುನಾ ಹಾಜಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ (71) ಅನಾರೊಗ್ಯದಿಂದ ಗುರುವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕರ್ನಾಟಕ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷರೂ, ಕಾಸರಗೋಡು ಜಾಮಿಅ ಸಅದಿಯಾ ಪ್ರಾಂಶುಪಾಲರೂ ಆಗಿರುವ ಬೇಕಲ ಉಸ್ತಾದ್ ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಗುರುವಾರ ಬೆಳಿಗ್ಗೆ ನಿಧನರಾದರು.
ಮೃತರು ಪತ್ನಿ, ಮೂರು ಮಂದಿ ಗಂಡು ಮಕ್ಕಳು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು-ಬಳಗ ಹಾಗೂ ಲಕ್ಷಾಂತರ ಮಂದಿ ಶಿಷ್ಯ ವರ್ಗ, ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಬೇಕಲ ಜುಮಾ ಮಸೀದಿಯಲ್ಲಿ ಸುದೀರ್ಘ ನಾಲ್ಕು ದಶಕಗಳ ಕಾಲ ದೀನೀ ಸೇವೆಗೈದ ಇವರು ಬೇಕಲ್ ಉಸ್ತಾದ್ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಓರ್ವ ಅಪ್ರತಿಮ ಪಾಂಡಿತ್ಯ ಹೊಂದಿರುವ ಇಸ್ಲಾಮಿ ವಿದ್ವಾಂಸರಾಗಿ ಹೆಸರು ಪಡೆದಿದ್ದ ಇವರು ಕರ್ಮಶಾಸ್ತ್ರದಲ್ಲಿ ವಿಶೇಷ ಪಾಂಡಿತ್ಯವನ್ನು ಪಡೆದಿದ್ದರು. ಕರ್ಮಶಾಸ್ತ್ರ ಪಾಂಡಿತ್ಯಕ್ಕಾಗಿ ಇವರು ‘ತಾಜುಲ್ ಫುಕಹಾಅï’ ಎಂಬ ವಿಶೇಷ ನಾಮದಿಂದಲೂ ಜನರಿಂದ ಗುರುತಿಸಿಕೊಂಡಿದ್ದರು. ಹಲವು ಕ್ಲಿಷ್ಟಕರ ಸಮಸ್ಯೆಗಳಿಗೆ ತಮ್ಮ ಅಗಾಧ ಇಸ್ಲಾಮೀ ಪಾಂಡಿತ್ಯದ ಮೂಲಕ ಪರಿಹಾರ ಕಂಡುಕೊಳ್ಳುತ್ತಿದ್ದರು.
ಗಣ್ಯರ ಸಂತಾಪ
ಹಿರಿಯ ಇಸ್ಲಾಮೀ ವಿದ್ವಾಂಸ ಶೈಖುನಾ ಬೇಕಲ ಉಸ್ತಾದ್ ಅವರ ನಿಧನ ಪಾಂಡಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದು ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಮಂಗಳೂರು ಶಾಸಕ, ಮಾಜಿ ಸಚಿವ ಯು ಟಿ ಖಾದರ್, ಮಾಜಿ ಸಚಿವ ಬಿ ರಮಾನಾಥ ರೈ, ಬಂಟ್ವಾಳ ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಇರಾ ಗ್ರಾ ಪಂ ನಿಕಟಪೂರ್ವಾಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಜಿಲ್ಲಾ ವಕ್ಫ್ ಸಮಿತಿ ಮಾಜಿ ಉಪಾಧ್ಯಕ್ಷ ಎಸ್ ಅಬೂಬಕ್ಕರ್ ಸಜಿಪ, ಪುದು ಗ್ರಾ ಪಂ ಸದಸ್ಯ ಹಾಶೀರ್ ಪೇರಿಮಾರ್, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಮಂಗಳೂರು ಹಿದಾಯ ಫೌಂಡೇಶನ್ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಅಖಿಲ ಭಾರತ ಬ್ಯಾರಿ ಪರಿಷತ್ ಪ್ರಧಾನ ಕಾರ್ಯದರ್ಶಿ ಹಾಜಿ ಕೆ ಎಸ್ ಅಬೂಬಕ್ಕರ್ ಪಲ್ಲಮಜಲು, ಉದ್ಯಮಿ ಹಂಝ ಬಸ್ತಿಕೋಡಿ, ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನಂದಾವರ, ಅಬ್ದುಲ್ ಮಜೀದ್ ಕರ್ಬೆಟ್ಟು, ಅಬ್ದುಲ್ ಕರೀಂ ಬೊಳ್ಳಾಯಿ ಮೊದಲಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
0 comments:
Post a Comment