ಬಂಟ್ವಾಳ (ಕರಾವಳಿ ಟೈಮ್ಸ್) : ಬಿ ಸಿ ರೋಡು ಸೋಮಯಾಜಿ ಹೌಸ್ ಬಳಿ ಹೆದ್ದಾರಿ ಬದಿಯ ಅಪಾಯಕಾರಿ ಮರ ಇನ್ನೂ ತೆರವುಗೊಳಿಸದೆ ನಿಷ್ಕ್ರಿಯತೆ ಪ್ರದರ್ಶಿಸುರುವ ಅಧಿಕಾರಿಗಳ ಕ್ರಮದ ಬಗ್ಗೆ ಇಲ್ಲಿನ ವಾಹನ ಚಾಲಕರು, ಅಂಗಡಿ ಮಾಲಕರು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಇಲ್ಲಿ ಹೆದ್ದಾರಿ ಬದಿ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿದ್ದು, ಸಾರ್ವಜನಿಕರು ಸ್ಥಳೀಯ ಪುರಸಭೆ, ತಾಲೂಕು ತಹಶೀಲ್ದಾರ್ ಹಾಗೂ ಕೊನೆಗೆ ಜಿಲ್ಲಾಧಿಕಾರಿಗೂ ಲಿಖಿತ ಮನವಿ ಸಲ್ಲಿಸಿ ಸೂಕ್ತ ಕ್ರಮ ವಹಿಸಿ ರಕ್ಷಣೆ ನೀಡುವಂತೆ ಆಗ್ರಹಿಸಿದ್ದರು. ಆದರೆ ಇದುವರೆಗೂ ಇಲ್ಲಿನ ಸಮಸ್ಯೆಗೆ ಯಾವುದೇ ಪರಿಹಾರ ದೊರೆತಿಲ್ಲ. ಈ ಮರದ ಅಡಿಯಲ್ಲಿ ಕೆಲವೊಂದು ರಿಕ್ಷಾ ಚಾಲಕರು ಪಾರ್ಕ್ ಮಾಡುತ್ತಾರೆ, ಕೆಲ ಸಣ್ಣ ಪುಟ್ಟ ವ್ಯಾಪಾರಸ್ಥರು ವ್ಯಾಪಾರಕ್ಕಾಗಿ ಕೂರುತ್ತಾರೆ. ಮಳೆಗಾಲದಲ್ಲಿ ಏನಾದರೂ ಅಚಾನಕ್ ಅವಾಂತರ ಉಂಟಾದರೆ ಗಂಭೀರ ಅಪಾಯ ತಪ್ಪಿದಲ್ಲ. ಮರದ ರೆಂಬೆ-ಕೊಂಬೆಗಳು ತೀರಾ ವಾಲಿಕೊಂಡಿದ್ದು ಈಗಲೋ, ಮತ್ತೆಯೋ ಮುರಿದು ಬೀಳುವ ಸ್ಥಿತಿಯಲ್ಲಿದೆ.
ಈಗಾಗಲೇ ಈ ಬಾರಿ ಮಳೆಗಾಲದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಲವು ಕಡೆ ಹೆದ್ದಾರಿ ಬದಿಯಲ್ಲಿರುವ ಮರದ ರೆಂಬೆ-ಕೊಂಬೆಗಳು ವಾಹನಗಳ ಮೇಲೆ ಉರುಳಿ ಬಿದ್ದು ಅಪಾಯ ಸಂಭವಿಸಿದ ಘಟನೆಗಳು ಹಲವಾರು ನಡೆದಿದೆ. ಬಿ ಸಿ ರೋಡಿನಲ್ಲಿಯೂ ಕೊಂಚ ಅವಾಂತರ ಉಂಟಾದರೆ ಅಪಾಯ ಉಂಟಾಗುವ ಎಲ್ಲ ಸಾಧ್ಯತೆಗಳೂ ಇದೆ ಎನ್ನುವ ಸಾರ್ವಜನಿಕರು ಸಂಬರ್ಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾಗಿ ಸಂಭಾವ್ಯ ಅಪಾಯಕ್ಕಿಂತ ಮುಂಚಿತವಾಗಿ ಸೂಕ್ತ ಕಾಯಕಲ್ಪ ಒದಗಿಸುವಂತೆ ಆಗ್ರಹಿಸಿದ್ದಾರೆ.
0 comments:
Post a Comment