ಕೊರೋನಾ ಲಾಕ್‍ಡೌನ್ ಎಫೆಕ್ಟ್ : ಖಾಸಗಿಯಿಂದ ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಸೈ ಎನ್ನುತ್ತಿರುವ ವಿದ್ಯಾರ್ಥಿ ಪೋಷಕರು! - Karavali Times ಕೊರೋನಾ ಲಾಕ್‍ಡೌನ್ ಎಫೆಕ್ಟ್ : ಖಾಸಗಿಯಿಂದ ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಸೈ ಎನ್ನುತ್ತಿರುವ ವಿದ್ಯಾರ್ಥಿ ಪೋಷಕರು! - Karavali Times

728x90

2 September 2020

ಕೊರೋನಾ ಲಾಕ್‍ಡೌನ್ ಎಫೆಕ್ಟ್ : ಖಾಸಗಿಯಿಂದ ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಸೈ ಎನ್ನುತ್ತಿರುವ ವಿದ್ಯಾರ್ಥಿ ಪೋಷಕರು!



ಸರಕಾರಿ ಶಾಲೆ ಎಂದಾಕ್ಷಣ ಮೂಗು ಮುರಿಯುತ್ತಿರುವವರೂ ಇದೀಗ ಖಾಸಗಿ ಶಾಲೆಗೆ ಗುಡ್ ಬೈ 


ಬೆಂಗಳೂರು (ಕರಾವಳಿ ಟೈಮ್ಸ್) : ಕೋವಿಡ್-19 ವೈರಸ್ ಹಾಗೂ ಲಾಕ್‍ಡೌನ್ ಬಳಿಕದ ಬೆಳವಣಿಗೆಯಲ್ಲಿ ರಾಜ್ಯದಲ್ಲಿ ಜನ ಖಾಸಗಿ ಶಾಲೆಗಳಿಂದ ಮಾರುದ್ದ ದೂರ ಸರಿಯುತ್ತಿದ್ದು, ಸರಕಾರಿ ಶಾಲೆಗಳತ್ತ ಬೇಡಿಕೆ ಇಡುತ್ತಿರುವ ಸನ್ನಿವೇಶ ಕಂಡು ಬರುತ್ತಿದೆ. ಆಡಂಬರ, ಫ್ಯಾಶನ್, ಟೆಕ್ನಾಲಜಿ ಮೊದಲಾದ ಕಲರ್ ಕಲರ್ ಹೆಸರಿನ ಮೂಲಕ ರಾಜ್ಯದ ಜನ ತಮ್ಮ ಮಕ್ಕಳನ್ನು ಪ್ರತಿಷ್ಠೆಯ ಕಾರಣಕ್ಕಾಗಿ ಸಕಲ ಸೌಕರ್ಯಗಳಿದ್ದರೂ ಸರಕಾರಿ ಶಾಲೆಗಳನ್ನು ಕಡೆಗಣ್ಣಿನಿಂದ ನೋಡುತ್ತಾ ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಆಕರ್ಷಿತರಾಗಿದ್ದರು. ಆದರೆ ಜಗತ್ತಿನಾದ್ಯಂತ ಕಬಂಧ ಬಾಹು ವಿಸ್ತರಿಸಿದ ಕೊರೋನಾ ವೈರಸ್ ಹಾಗೂ ಬಳಿಕ ಹೇರಲ್ಪಟ್ಟ ಲಾಕ್‍ಡೌನ್ ಕಾರಣದಿಂದ ಆರ್ಥಿಕ ಸಂಕಷ್ಟ ಎದುರಾಗಿರುವ ಹಿನ್ನಲೆಯಲ್ಲಿ ಇದೀಗ ಜನ ತಮ್ಮ ಮಕ್ಕಳನ್ನು ಖಾಸಗಿ ಸಂಸ್ಥೆಗಳಿಂದ ಸರಕಾರಿ ಸಂಸ್ಥೆಗಳಿಗೆ ದಾಖಲಿಸಲು ಮನಸ್ಸು ಮಾಡುತ್ತಿದ್ದಾರೆ ಎಂಬುದು ಸದ್ಯದ ಅಂಕಿ ಅಂಶಗಳಿಂದ ತಿಳಿದು ಬರುತ್ತಿದೆ. 

ಹೈಟೆಕ್ ಸಿಟಿ, ಸಿಲಿಕಾನ್ ಸಿಟಿ ಎಂದೆಲ್ಲ ಕರೆಯುತ್ತಿರುವ ಬೆಂಗಳೂರು ನಗರದ ಮಂದಿ ಕೂಡಾ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ದೂರ ಸರಿದು ತಮ್ಮ ಮಕ್ಕಳನ್ನು ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸಲು ಮುಂದಾಗಿದ್ದಾರೆ. ಉಳಿದಂತೆ ಜಿಲ್ಲಾ ಕೇಂದ್ರ, ತಾಲೂಕು, ಹೋಬಳಿ, ಗ್ರಾಮೀಣ ಮಟ್ಟದಲ್ಲೂ ಹೆಚ್ಚಿನ ಮಕ್ಕಳು ಸರಕಾರಿ ಶಾಲೆಗೆ ಸೇರಿಕೊಳ್ಳುತ್ತಿದ್ದಾರೆ. ಸರಕಾರಿ ಶಾಲೆ ಎಂದಾಕ್ಷಣ ಮೂಗು ಮುರಿಯುತ್ತಿದ್ದ ಮಂದಿಗಳೂ ಕೂಡಾ ಇಂದು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ತೆಗೆದು ಸರಕಾರಿ ಶಾಲೆಗಳಿಗೆ ಸೇರಿಸುತ್ತಿರುವ ವಿದ್ಯಾಮಾನ ಕಂಡು ಬರುತ್ತಿದೆ. ಪರಿಣಾಮವಾಗಿ ಈ ಬಾರಿ ಸರಕಾರಿ ಶಾಲೆಗಳನ್ನು ದಾಖಲಾತಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. 

ಕೊರೊನಾ ಲಾಕ್‍ಡೌನ್ ಕಾರಣದಿಂದಾಗಿ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳ, ಅನ್‍ಲೈನ್ ಕ್ಲಾಸ್ ಶುಲ್ಕದಿಂದ ಪೋಷಕರು ಕಂಗೆಟ್ಟಿರುವುದರಲ್ಲದೆ ದೂರದ ಶಾಲೆಗಳಿಗೆ ತಮ್ಮ ಮಕ್ಕಳನ್ನು ವಾಹನಗಳಲ್ಲಿ ಕಳುಹಿಸಿಕೊಡಲು ಹೆದರುತ್ತಿರುವುದೇ ಈ ಬೆಳವಣಿಗೆಗಳಿಗೆ ಕಾರಣ ಎನ್ನಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 914 ಸರಕಾರಿ ಶಾಲೆಗಳ ಪೈಕಿ 350 ಶಾಲೆಗಳಲ್ಲಿ ದಾಖಲಾತಿ ಹೆಚ್ಚಳವಾಗಿದೆ. ಖಾಸಗಿ ಶಾಲೆ ಬಿಡಿಸಿ ಸರಕಾರಿ ಶಾಲೆಗಳಿಗೆ ಪೋಷಕರು ಮೊರೆ ಹೋಗುತ್ತಿದ್ದಾರೆ. ರಾಜ್ಯದ ಬಹುತೇಕ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳವಾಗುವ ಮೂಲಕ ಸರಕಾರಿ ಶಾಲೆಗಳಿಗೆ ಈಗ ಭಾರೀ ಬೇಡಿಕೆ ಶುರುವಾಗಿದೆ. 

ಹಾವೇರಿ ಜಿಲ್ಲೆಯಲ್ಲೂ ಸರ್ಕಾರಿ ಶಾಲೆಗಳಿಗೆ ಬೇಡಿಕೆ ಇದ್ದು, ಸಾವಿರಾರು ಮಕ್ಕಳು ಖಾಸಗಿ ಶಾಲೆ ತೊರೆದಿದ್ದು, ಸರಕಾರಿ ಶಾಲೆಗೆ ಸೇರಿಕೊಂಡಿದ್ದಾರೆ. 1 ರಿಂದ 7ನೇ ಕ್ಲಾಸ್ ತರಗತಿಗಳಿಗೆ ದಾಖಲಾತಿ ಹೆಚ್ಚಳವಾಗಿದೆ. ನಮ್ಮ ಕೈಯಲ್ಲಿ ಖಾಸಗಿ ಶಾಲೆಗೆ ಶುಲ್ಕ ಕಟ್ಟಲು ಹಣ ಇಲ್ಲ. ಸಣ್ಣ ಮಕ್ಕಳನ್ನು ವಾಹನದಲ್ಲಿ ಕಳಿಸಲು ಭಯ ಆಗುತ್ತಿದೆ. ಸರಕಾರಿ ಶಾಲಾ ಶಿಕ್ಷಕರಿಂದ ಉಚಿತ ಮತ್ತು ಮನೆ ಪಾಠ ಇದೆ. ಹೀಗಾಗಿ ನಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುತ್ತೇವೆ ಎಂದು ಪೋಷಕರ ಅಭಿಪ್ರಾಯಪಡುತ್ತಿದ್ದಾರೆ. 

ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿ, ಸರಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ಬಿಸಿಯೂಟ ಸೇರಿ ಹಲವು ಸೌಲಭ್ಯ, ಕೊರೊನಾ ಭೀತಿ ದೂರವಾಗಿಸಲು ಹತ್ತಿರದ ಸರಕಾರಿ ಶಾಲೆಗೆ ಆದ್ಯತೆ, ಖಾಸಗಿ ಶಾಲಾ ವಾಹನ ಸೌಕರ್ಯಕ್ಕೆ ಹೆಚ್ಚುವರಿ ಶುಲ್ಕ, ಕೊರೊನಾದಿಂದಾಗಿ ಹಳ್ಳಿಗಳಿಗೆ ವಲಸೆ ಹೋದವರಿಂದ ಸರಕಾರಿ ಶಾಲೆಗಳ ಮೊರೆ, ಸರಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಸಿಗುವ ಬಗ್ಗೆ ಮನವರಿಕೆ, ಆನ್‍ಲೈನ್ ಶಿಕ್ಷಣದ ಬಗ್ಗೆ ನಿರಾಸಕ್ತಿ, ಸರಕಾರದ ವಿದ್ಯಾಗಮ ಯೋಜನೆ ಬಗ್ಗೆ ಜನರಿಗೆ ಉತ್ತಮ ಅಭಿಪ್ರಾಯ ಇವೇ ಮೊದಲಾದ ಕಾರಣಗಳಿಂದ ಜನ ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ಸರಕಾರಿ ಸಂಸ್ಥೆಗಳೇ ಸರಿ ಎಂಬ ಅಭಿಪ್ರಾಯಕ್ಕೆ ಬರುವಂತಾಗಿದೆ ಎಂದು ಸಮೀಕ್ಷೆ ತಿಳಿಸುತ್ತಿದೆ.








  • Blogger Comments
  • Facebook Comments

0 comments:

Post a Comment

Item Reviewed: ಕೊರೋನಾ ಲಾಕ್‍ಡೌನ್ ಎಫೆಕ್ಟ್ : ಖಾಸಗಿಯಿಂದ ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಸೈ ಎನ್ನುತ್ತಿರುವ ವಿದ್ಯಾರ್ಥಿ ಪೋಷಕರು! Rating: 5 Reviewed By: karavali Times
Scroll to Top