ಬೆಂಗಳೂರು, ಅಕ್ಟೋಬರ್ 01, 2020 (ಕರಾವಳಿ ಟೈಮ್ಸ್) : ಕೊರೊನಾ ನಿಯಮ ಉಲ್ಲಂಘಿಸಿ ಯಾವುದೇ ರಾಜಕೀಯ ಹಾಗೂ ಧಾರ್ಮಿಕ ರ್ಯಾಲಿಗಳನ್ನು ನಡೆಸಕೂಡದು ಎಂದು ಕೇಂದ್ರ ಸರಕಾರ ಸ್ಪಷ್ಟವಾಗಿ ಹೇಳಿದ್ದರೂ ಬಿಜೆಪಿ ಪಕ್ಷದ್ದೇ ಸಂಸದ ತೇಜಸ್ವಿ ಸೂರ್ಯ ಸರಕಾರದ ಕೋವಿಡ್ ನಿಯಮ ಉಲ್ಲಂಘಿಸಿ ಆಡಂಬರದ ರ್ಯಾಲಿ ನಡೆಸುವ ಮೂಲಕ ತಮ್ಮದೇ ಪಕ್ಷದ ನೇತೃತ್ವದ ಕೇಂದ್ರ ಸರಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.
ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ದೆಹಲಿಯಿಂದ ಬಂದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದ್ದಾರೆ. ಅಲ್ಲದೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೇಜಸ್ವಿ ಸೂರ್ಯ ಅವರ ಮೆರವಣಿಗೆ ಮಾಡಿದ್ದಾರೆ. ನೂರಾರು ಜನ ಸೇರಿ ಮೆರವಣಿಗೆ ಮಾಡುವ ಮೂಲಕ ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ. ನೂರಾರು ಕಾರ್ಯಕರ್ತರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಲ್ಲೇಶ್ವರದ ಬಿಜೆಪಿ ಕಚೇರಿವರೆಗೂ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು, ರ್ಯಾಲಿಯಲ್ಲಿ ಪಾಲ್ಗೊಂಡ ಹಲವರು ಮಾಸ್ಕ್ ಕೂಡಾ ಧರಿಸದೆ ನಿಯಮ ಉಲ್ಲಂಘನೆ ಮಾಡಿದ್ದಾರೆ. ಜನಪ್ರತಿನಿಧಿಗಳ ಈ ನಡವಳಿಕೆ ಇದೀಗ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರ್ಯಾಲಿ ಬಳಿಕ ಬಿಜೆಪಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ತೇಜಸ್ವಿ ಸೂರ್ಯ ಮಾತನಾಡಿದ್ದು, ಈ ವೇಳೆ ಸಹ ನೂರಾರು ಕಾರ್ಯಕರ್ತರು ಜಮಾವಣೆಯಾಗಿದ್ದರು. ಈ ವೇಳೆ ಸಹ ಸಾಮಾಜಿಕ ಅಂತರವನ್ನೂ ಪಾಲಿಸಲಾಗಿಲ್ಲ. ಪೆÇಲೀಸರು ಸ್ಥಳದಲ್ಲೇ ಇದ್ದರೂ ನಿಯಮ ನೆನಪಿಸುವ ಗೋಜಿಗೆ ಹೋಗದೆ ಮೂಕ ಪ್ರೇಕ್ಷಕರಾಗಿದ್ದರು. ಪಕ್ಷದ ಕಾರ್ಯಕರ್ತರು ತೇಜಸ್ವಿ ಸೂರ್ಯರನ್ನು ಹೆಗಲ ಮೇಲೆ ಹೊತ್ತು ಬಿಜೆಪಿ ಕಚೇರಿ ಒಳಗೆ ಕರೆತಂದಿದ್ದಾರೆ.
0 comments:
Post a Comment