ಕೆ.ಸಿ.ರೋಡು, ಕೊಮರಂಗಳ, ಅಜ್ಜಿನಡ್ಕ ನಿವಾಸಿಗಳಿಂದ ಟೋಲ್ ಶುಲ್ಕ ವಸೂಲಿ ಮಾಡುವ ಕಂಪೆನಿಯ ದ್ವಿಮುಖ ನೀತಿಗೆ ಉಳ್ಳಾಲ ಡಿ.ವೈ.ಎಫ್.ಐ. ಖಂಡನೆ
ಮಂಗಳೂರು, ಸೆ. 14, 2020 (ಕರಾವಳಿ ಟೈಮ್ಸ್) : ತಲಪಾಡಿ ಟೋಲ್ ಕೇಂದ್ರದಿಂದ ಕೂಗಳತೆ ದೂರದಲ್ಲಿರುವ ಕೆ.ಸಿ.ರೋಡಿನ ಕೊಮರಂಗಳ ಹಾಗೂ ಅಜ್ಜಿನಡ್ಕ ಪ್ರದೇಶದ ಜನ ಕೋಟೆಕಾರ್ ಪಂಚಾಯತ್ ವ್ಯಾಪ್ತಿಗೆ ಸೇರುತ್ತಾರೆ ಎನ್ನುವ ಕಾರಣಕ್ಕಾಗಿ ಅಲ್ಲಿನ ವಾಸಿಗಳಿಂದ ಇದೀಗ ತಲಪಾಡಿ ನವಯುಗ ಕಂಪೆನಿಗೆ ಸೇರಿದ ಟೋಲ್ ಕೇಂದ್ರದಲ್ಲಿ ಟೋಲ್ ಶುಲ್ಕ ಸಂಗ್ರಹಿಸಲಾಗುತ್ತಿದೆ. ಇದು ಸಂಸ್ಥೆ ಈ ಹಿಂದೆ ಸ್ಥಳೀಯರಿಗೆ ಅಂದರೆ 5 ಕಿ ಮೀ ವ್ಯಾಪ್ತಿಯ ಸಾರ್ವಜನಿಕರಿಗೆ ನೀಡಿದ್ದ ಟೋಲ್ ವಿನಾಯಿತಿ ನಿಯಮದ ಉಲ್ಲಂಘನೆಯಾಗಿದೆ. ಟೋಲ್ ಕಂಪೆನಿಯ ಈ ದ್ವಿಮುಖ ನೀತಿಯನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ( ಡಿವೈಎಫ್‍ಐ) ಉಳ್ಳಾಲ ವಲಯ ಸಮಿತಿ ಖಂಡಿಸಿದೆ. ನವಯುಗ ಸಂಸ್ಥೆ ಈ ನೂತನ ಟೋಲ್ ಸಂಗ್ರಹ ನೀತಿಯನ್ನು ಕೈಬಿಟ್ಟು ಈ ಹಿಂದೆ ಮಾಡಿಕೊಂಡ ಒಪ್ಪಂದದಂತೆ 5 ಕಿಮೀ ವ್ಯಾಪ್ತಿಯವರಿಗೆ ಟೋಲ್ ರಹಿತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದೆ.
ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಗಡಿ ಬಂದ್ ಆದ ಕಾರಣ ಉಭಯ ರಾಜ್ಯಗಳ ನಡುವೆ ವಾಹನ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಈಗ ಪುನರ್ ಆರಂಭವಾದ ನಂತರ ಟೋಲ್ ಕೇಂದ್ರದಲ್ಲಿ ವಾಹನ ಪ್ರಯಾಣಿಕರಿಂದ ಕೇವಲ ಏಕ ಮುಖ ಸಂಚಾರಕ್ಕೆ ಮಾತ್ರ ಟೋಲ್ ಪಡೆದು ವಾಪಾಸ್ಸು ಬರುವಾಗ ಮತ್ತೆ ಟೋಲ್ ಪಡೆಯುತ್ತಾರೆ. ಒಮ್ಮೆಲೇ ದ್ವಿಮುಖ ಸಂಚಾರದ ಟೋಲ್ ಕೇಳಿದರೆ ಕೊಡುತ್ತಿಲ್ಲ ಎನ್ನುವ ದೂರುಗಳು ಬಂದಿವೆ. ಹೀಗೆ ಮಾಡುವುದರಿಂದ ದ್ವಿಮುಖ ಸಂಚಾರ ಮಾಡುವ ಪ್ರಯಾಣಿಕರು ಹೆಚ್ಚು ಟೋಲ್ ಪಾವತಿಸಬೇಕಾಗಿ ಬರುತ್ತವೆ. ಇದೊಂದು ರೀತಿಯಲ್ಲಿ ಸಂಸ್ಥೆ ನಡೆಸುತ್ತಿರುವ ಹಗಲು ದರೋಡೆಯಾಗಿದ್ದು, ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಂಡು ಸಮಸ್ಯೆ ಪರಿಹರಿಸಬೇಕು ಎಂದು ಡಿವೈಎಫ್‍ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆ.ಸಿ.ರೋಡ್ ಆಗ್ರಹಿಸಿದ್ದಾರೆ.
0 comments:
Post a Comment