ನವದೆಹಲಿ, ಸೆ. 11, 2020 (ಕರಾವಳಿ ಟೈಮ್ಸ್) : ಹರಿಯಾಣ ಮಾಜಿ ಶಾಸಕ, ಸಾಮಾಜಿಕ ಕಾರ್ಯಕರ್ತ ಸ್ವಾಮಿ ಆಗ್ನಿವೇಶ್ (80) ಅವರು ಅನಾರೋಗ್ಯದಿಂದ ಶುಕ್ರವಾರ ಸಂಜೆ ನಿಧನರಾಗಿದ್ದಾರೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಕಳೆದ ಮಂಗಳವಾರ ನವದೆಹಲಿಯ ಇನ್‍ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್ (ಐಎಸ್‍ಬಿಎಸ್) ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಅವರಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಶುಕ್ರವಾರ ಸಂಜೆ ನಿಧನರಾದರು.
1939 ರ ಸೆ. 21 ರಂದು ಆಂಧ್ರ ಪ್ರದೇಶದ ಶ್ರೀಕಾಕುಳಂ ಎಂಬಲ್ಲಿ ಜನಿಸಿದ್ದ ಅಗ್ನಿವೇಶ್ ಅವರು, 1970 ರಲ್ಲಿ ಆರ್ಯ ಸಭಾ ಎಂಬ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದ್ದರು. ಈ ಪಕ್ಷ ಆರ್ಯ ಸಮಾಜದ ತತ್ವಗಳನ್ನು ಆಧರಿಸಿದೆ. ಸ್ತ್ರೀ ಭ್ರೂಣ ಹತ್ಯೆ ಮತ್ತು ಮಹಿಳೆಯರ ಶೋಷಣೆಯ ವಿರುದ್ಧದ ಅಭಿಯಾನ, ಜೀತದಾಳುಗಳ ಮುಕ್ತಿಗಾಗಿ ಸೇರಿದಂತೆ ಸಾಮಾಜಿಕ ಕ್ರೀಯಾಶೀಲತೆಯ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಸ್ವಾಮಿ ಅಗ್ನಿವೇಶ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ವಕೀಲ ಪ್ರಶಾಂತ್ ಭೂಷಣ್, ಸ್ವಾಮಿ ಅಗ್ನಿವೇಶ್ ಅವರ ನಿಧನ ದೊಡ್ಡ ನಷ್ಟವಾಗಿದ್ದು, ಅವರು ಮಾನವೀಯತೆ ಮತ್ತು ಸಹಿಷ್ಣುತೆಯ ನಿಜವಾದ ಪ್ರತಿರೂಪವಾಗಿದ್ದರು. ಅಲ್ಲದೇ ಸಾರ್ವಜನಿಕರ ಒಳಿತಿಗಾಗಿ ಭಾರೀ ಅಪಾಯಗಳನ್ನು ಎದುರಿಸಲು ಸಿದ್ಧರಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಅವರ ಮೇಲೆ ನಡೆದ ಹಲ್ಲೆಯಿಂದಾಗಿ ಅವರ ಯಕೃತ್ ಹಾನಿಗೊಳಗಾಗಿತ್ತು ಎಂದವರು ಆರೋಪಿಸಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ವೇಳೆಯೂ ಅವರ ಮೇಲೆ ಹಲ್ಲೆ ನಡೆದಿತ್ತು.
0 comments:
Post a Comment