ನವದೆಹಲಿ, ಸೆ. 09, 2020 (ಕರಾವಳಿ ಟೈಮ್ಸ್) : ಸಿಎಎ, ಎನ್ ಆರ್ ಸಿ, ಎನ್ ಪಿ ಆರ್ ವಿರೋಧಿಸಿ ನಡೆದ ಮಂಗಳೂರಿನಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ಪ್ರತಿಭಟನೆ, ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ 21 ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಹಾಗೂ ನ್ಯಾಯಮೂರ್ತಿ ವಿ ರಾಮ ಸುಬ್ರಮಣಿಯನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಕರ್ನಾಟಕ ಹೈಕೋರ್ಟ್ ಆರೋಪಿಗಳಿಗೆ ಜಾಮೀನು ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.
ಡಿಸೆಂಬರ್ 19 ರಂದು ಸಿಎಎ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಅಚಾತುರ್ಯ ನಡೆದು ಪೊಲೀಸರು ಗೋಲಿಬಾರ್ ನಡೆಸಿದ್ದರು. ಪೊಲೀಸ್ ಗೋಲಿಬಾರ್ ಗೆ ಇಬ್ಬರು ಯುವಕರು ಬಲಿಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 21 ಮಂದಿಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಈ ಎಲ್ಲಾ ಆರೋಪಿಗಳಿಗೆ ರಾಜ್ಯ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ರಾಜ್ಯ ಸರಕಾರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರತಿಯೊಬ್ಬ ಆರೋಪಿಗೆ 25 ಸಾವಿರ ರೂಪಾಯಿಗಳ ಜಾಮೀನು ನೀಡುವಂತೆ ಸೂಚಿಸಿದೆ. ಅಲ್ಲದೆ ಪ್ರತಿ ಸೋಮವಾರ ಹತ್ತಿರದ ಪೊಲೀಸ್ ಠಾಣೆಗೆ ವರದಿ ಸಲ್ಲಿಸಬೇಕು ಮತ್ತು ಯಾವುದೇ ಹಿಂಸಾತ್ಮಕ ಚಟುವಟಿಕೆಗಳಲ್ಲಿ / ಸಭೆಗಳಲ್ಲಿ ಭಾಗವಹಿಸಬಾರದು ಎಂಬ ಶರತ್ತು ವಿಧಿಸಿದೆ.
0 comments:
Post a Comment