ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕು ಕಛೇರಿಯಲ್ಲಿ ಉಪತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಧರ್ ಕೋಡಿಜಾಲ್ (47) ಅವರು ಭಾನುವಾರ ಬೆಳಿಗ್ಗೆ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪುತ್ತೂರು ತಾಲೂಕಿನ ಕಸ್ಬಾ ಕೋಡಜಾಲು ನಿವಾಸಿಯಾಗಿರುವ ಶ್ರೀಧರ್ ಅವರು ಪ್ರಸ್ತುತ ಪುತ್ತೂರಿನ ಜಿಡೆಕಲ್ಲು ಎಂಬಲ್ಲಿ ಕುಟುಂಬ ಸಹಿತ ವಾಸವಾಗಿದ್ದಾರೆ. ಕಳೆದ ಸೋಮವಾದರಿಂದ ಅಸೌಖ್ಯಕ್ಕೊಳಗಾಗಿರುವ ಶ್ರೀಧರ್ ಅವರು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಹಿನ್ನಲೆಯಲ್ಲಿ ಕಛೇರಿ ಕೆಲಸಕ್ಕೂ ರಜೆ ಹಾಕಿದ್ದರು ಎನ್ನಲಾಗಿದೆ. ಶನಿವಾರ ರಾತ್ರಿ ಅನಾರೋಗ್ಯ ಉಲ್ಬಣಗೊಂಡ ಹಿನ್ನಲೆಯಲ್ಲಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಲಾಕ್‍ಡೌನ್ ಅವಧಿಯಲ್ಲಿ ಕೊರೋನಾ ವಾರಿಯರ್ ಆಗಿ ಶ್ರೀಧರ್ ಕರ್ತವ್ಯ ನಿರ್ವಹಿಸಿದ್ದರು. ಪುತ್ತೂರಿನಲ್ಲಿ ವಿ ಎ ಆಗಿ ಸರಕಾರಿ ಕರ್ತವ್ಯ ಆರಂಭಿಸಿದ್ದ ಇವರು ಬಳಿಕ ಭಡ್ತಿ ಹೊಂದಿ ಕಂದಾಯ ನಿರೀಕ್ಷಕರಾಗಿ ಉಪ್ಪಿನಂಗಡಿ, ಪುತ್ತೂರು, ಸುಳ್ಯ ಕಛೇರಿಗಳಲ್ಲೂ ಕಾರ್ಯನಿರ್ವಹಿಸಿದ್ದರು. ಮಂಗಳೂರು ಜಿಲ್ಲಾಧಿಕಾರಿ ಕಛೇರಿಯಲ್ಲು ಕಾರ್ಯ ನಿರ್ವಹಿಸಿದ್ದ ಇವರು ಇತ್ತೀಚೆಗಷ್ಟೆ ಬಂಟ್ವಾಳ ತಾಲೂಕು ಕಛೇರಿಗೆ ವರ್ಗವಾಗಿ ಬಂದಿದ್ದರು. ಸರಕಾರಿ ಕೆಲಸದ ಜೊತೆಗೆ ಸಂಗೀತ, ಯಕ್ಷಗಾನ, ಕೃಷಿ ಚಟುವಟಿಕೆಗಳಲ್ಲೂ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಶ್ರೀಧರ್ ಅವರು ಕಛೇರಿ ಸಹದ್ಯೋಗಿಗಳೊಂದಿಗೂ, ಸಾರ್ವಜನಿಕರೊಂದಿಗೂ ಉತ್ತಮ ಒಡನಾಟ, ಸರಳ ಸ್ವಭಾವನ್ನು ಹೊಂದಿದ್ದರು. ಇವರ ನಿಧನಕ್ಕೆ ತಾಲೂಕಿನ ಜನ ದಿಗ್ಬ್ರಮೆ ಹಾಗೂ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತ ಶ್ರೀಧರ್ ಪತ್ನಿ, ಇಬ್ಬರು ಪುತ್ರರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
0 comments:
Post a Comment