ನವದೆಹಲಿ, ಸೆ. 26, 2020 (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‍ಡೌನ್ ಹೇರಲ್ಪಟ್ ಬಳಿಕ ಶೈಕ್ಷಣಿಕ ವರ್ಷವನ್ನು ಆರಂಭಿಸುವ ನಿಟ್ಟಿನಲ್ಲಿ ಸರಕಾರಗಳು ಗೊಂದಲದ ಪರಿಸ್ಥಿತಿ ಎದುರಿಸುತ್ತಿದೆ. ಕೇಂದ್ರ ಸರಕಾರ ಶಾಲಾ-ಕಾಲೇಜುಗಳನ್ನು ಆರಂಭಿಸಲು ಯಾವುದೇ ಸೂಕ್ತ ಮಾರ್ಗಸೂಚಿಗಳನ್ನು ಇನ್ನೂ ಪ್ರಕಟಿಸಿಲ್ಲದಿದ್ದರೂ, ಕೆಲ ರಾಜ್ಯಗಳು ಮಾತ್ರ ಶೈಕ್ಷಣಿಕ ವರ್ಷವನ್ನು ಆರಂಭಿಸಲು ಉತ್ಸುಕತೆ ತೋರಿದೆ. ಶೂನ್ಯ ಶೈಕ್ಷಣಿಕ ವರ್ಷ ಆಗಿ ಪರಿಣಮಿಸಿದರೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಋಣಾತ್ಮಕ ಪರಿಣಾಮ ಬಿರುತ್ತದೆ ಎಂಬ ಆತಂಕದಿಂದ ರಾಜ್ಯಗಳು ಆದಷ್ಟು ಶೀಘ್ರ ಶಾಲಾ-ಕಾಲೇಜುಗಳನ್ನ ಅರಂಭಿಸಲು ಬೆಳವಣಿಗೆಳನ್ನು ನಡೆಸುತ್ತಿದೆ. ಕೆಲ ರಾಜ್ಯಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಕೂಡಾ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಅನುಮತಿ ನೀಡುವಂತೆ ಸರಕಾರಗಳ ಬಳಿ ಕೋರಿಕೊಳ್ಳುತ್ತಿವೆ.
ಕೊರೋನಾ ಹೆಚ್ಚುತ್ತಿರುವ ಮಧ್ಯೆಯೇ ಕರ್ನಾಟಕ ಸಹಿತ ಕೆಲ ರಾಜ್ಯಗಳಲ್ಲಿ ಪ್ರಮುಖ ಶೈಕ್ಷಣಿಕ ಹಂತಗಳ ತರಗತಿಗಳ ಪರೀಕ್ಷೆಗಳನ್ನು ಈಗಾಗಲೇ ಮಾಡಿ ಮುಗಿಸಿದ್ದು, ಫಲಿತಾಂಶವನ್ನೂ ಪ್ರಕಟಿಸಿದೆ. ಪರೀಕ್ಷೆಗಳನ್ನು ನಡೆಸಲು ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ನ್ಯಾಯಾಲಯಗಳ ಮೆಟ್ಟಿಲನ್ನೂ ಏರಲಾಗಿತ್ತು. ನ್ಯಾಯಾಲಯಗಳು ವಿದ್ಯಾರ್ಥಿಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಪರೀಕ್ಷೆ ವಿರೋಧಿಸಿ ಸಲ್ಲಿಸಿದ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಹತ್ವ ನೀಡಿ ಪರೀಕ್ಷೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದ ಹಿನ್ನಲೆಯಲ್ಲಿ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿಕೊಂಡು ಪರೀಕ್ಷೆಗಳು ಸಾಂಗವಾಗಿ ನೆರವೇರಿತ್ತು. ಆ ಬಳಿಕ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಈಗಾಗಲೇ ತರಗತಿಗಳನ್ನು ಆನ್ ಲೈನ್ ಮೂಲಕ ಆರಂಭಿಲಾಗಿದ್ದು, ಈ ಬಾರಿಯ ಶೈಕ್ಷಣಿಕ ವರ್ಷದ ಪರೀಕ್ಷೆಗಳನ್ನು ನಡೆಸುವ ನಿಟ್ಟಿನಲ್ಲಿ ಶಾಲಾ-ಕಾಲೇಜು ತರಗತಿಗಳನ್ನು ಆರಂಭಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಳವಣಿಗೆಗಳು ಆರಂಭಗೊಂಡಿದೆ.
ಹರಿಯಾಣ, ಅಸ್ಸಾಂ ಮತ್ತು ಜಮ್ಮು ಕಾಶ್ಮೀರದಲ್ಲಿ ಶಾಲಾ-ಕಾಲೇಜುಗಳು ಪ್ರಾಯೋಗಿಕವಾಗಿ ಪುನಾರಂಭಕ್ಕೆ ರಾಜ್ಯ ಸರಕಾರಗಳು ಗ್ರೀನ್ ಸಿಗ್ನಲ್ ನೀಡಿರುವ ಹಿನ್ನಲೆಯಲ್ಲಿ ಇಂದಿನಿಂದ ಶಾಲಾ-ಕಾಲೇಜು ತರಗತಿ ಪ್ರಕ್ರಿಯೆಗಳು ಆರಂಭಗೊಂಡಿದೆ.
ಬಿಹಾರದಲ್ಲಿ ಸೆಪ್ಟೆಂಬರ್ 28 ರಿಂದ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿದ ಪ್ರದೇಶಗಳಲ್ಲಿ 9 ರಿಂದ 12ನೇ ತರಗತಿ ಮಕ್ಕಳು ಶಾಲೆಗೆ ತೆರಳಿ ಶಿಕ್ಷಕರಿಂದ ಶೈಕ್ಷಣಿಕ ಮಾಹಿತಿ ಪಡೆದುಕೊಳ್ಳಬಹುದು ಎಂದು ಸೂಚಿಸಲಾಗಿದೆ.
ತ್ರಿಪುರದಲ್ಲಿ ಅಕ್ಟೋಬರ್ 5 ರಿಂದ 9-12ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಬಂದು ಶಿಕ್ಷಕರನ್ನು ಸಂಪರ್ಕಿಸಬಹುದು ಎಂದು ಶಿಕ್ಷಣ ಸಚಿವ ರತನ್ ಲಾಲ್ ನಾಥ್ ತಿಳಿಸಿದ್ದಾರೆ. ಶಾಲೆಗೆ ಬರುವ ಮುನ್ನ ವಿದ್ಯಾರ್ಥಿಗಳಿಗೆ ಪೆÇಷಕರ ಅನುಮತಿ ಕಡ್ಡಾಯ ಎಂದು ಕೂಡಾ ತಿಳಿಸಲಾಗಿದೆ.
ತಮಿಳ್ನಾಡು ರಾಜ್ಯದಲ್ಲಿ ಅಕ್ಟೋಬರ್ 1 ರಿಂದ 10, 11, 12ನೇ ತರಗತಿ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಬಹುದಾಗಿದ್ದು ಶಿಕ್ಷಕರಿಂದ ಪ್ರಾಥಮಿಕ ಮಾಹಿತಿ ಪಡೆದುಕೊಳ್ಳಬಹುದು, ಶಾಲಾ ಕಾಲೇಜಿಗೆ ತೆರಳುವ ಮುನ್ನ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಕಡ್ಡಾಯ ಎಂದು ರಾಜ್ಯ ಸರಕಾರ ಹೇಳಿದೆ.
ಉತ್ತರ ಪ್ರದೇಶದಲ್ಲಿ ಖಾಸಗಿ ಶಾಲೆಗಳ ಸಂಘದ ಮುಖ್ಯಸ್ಥರು ಡಿಸಿಎಂ ದಿನೇಶ್ ಶರ್ಮಾ ಭೇಟಿ ಮಾಡಿ ಶಾಲೆಗಳ ಪುನಾರಂಭಕ್ಕೆ ಒತ್ತಾಯಿಸಿದ್ದಾರೆ. ಅರ್ಧ ವಾರ್ಷಿಕ ಪರೀಕ್ಷೆ ದೃಷ್ಟಿಯಲ್ಲಿಟ್ಟುಕೊಂಡು ಅಕ್ಟೋಬರ್ 12 ರಿಂದ 9-12ನೇ ತರಗತಿ ಮಕ್ಕಳಿಗೆ ಶಾಲೆ ತೆರಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಯುಪಿ ಸರ್ಕಾರ ತಯಾರಿ ಆರಂಭಿಸಿದೆಯಾದರೂ ಇದುವರೆಗೂ ತರಗತಿ ಪ್ರಾರಂಭದ ಬಗ್ಗೆ ದಿನಾಂಕ ಪ್ರಕಟಿಸಿಲ್ಲ.
ಪಶ್ಚಿಮ ಬಂಗಾಳದಲ್ಲಿ ಶಾಲೆಗಳ ಆರಂಭ ದುರ್ಗಾ ಪೂಜೆ ಹಿನ್ನಲೆ ಅಕ್ಟೋಬರ್ ಮಧ್ಯ ಭಾಗದಲ್ಲಿ ಅನುಮಾನ ಎನ್ನಲಾಗಿದ್ದು, ನವೆಂಬರ್ ಮಧ್ಯಭಾಗದಲ್ಲಿ ಪುನಾರಂಭಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ದೆಹಲಿಯಲ್ಲಿ ಅಕ್ಟೋಬರ್ 5 ರಿಂದ ಶಾಲಾ-ಕಾಲೇಜು ಪುನಾರಂಭಿಸಲು ಕೇಜ್ರಿವಾಲ್ ಸರಕಾರ ನಿರ್ಧಾರ ಮಾಡಿದ್ದು ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಇನ್ನು ಕರ್ನಾಟಕದಲ್ಲಿ ಈಗಾಗಲೇ 9-12ನೇ ತರಗತಿ ವಿದ್ಯಾರ್ಥಿಗಳು ಪೋಷಕರ ಅನುಮತಿಯೊಂದಿಗೆ ಶಾಲೆಗಳಿಗೆ ಭೇಟಿ ಆನ್‍ಲೈನ್ ಪಾಠಕ್ಕೆ ಸಂಬಂಧಿಸಿದ ಅನುಮಾನಗಳಿಗೆ ಪರಿಹಾರ ಕಂಡುಕೊಳ್ಳಲು ಅನುಮತಿ ನೀಡಿದೆ. ಅಲ್ಲದೆ ಶೇ 50 ರಷ್ಟು ಮಂದಿ ಶಿಕ್ಷಕರು-ಸಿಬ್ಬಂದಿಗಳು ಕಡ್ಡಾಯವಾಗಿ ಶಾಲೆಗಳಿಗೆ ಹಾಜರಾಗಬೇಕು ಎಂದು ಸರಕಾರ ಆದೇಶ ಹೊರಡಿಸಿದೆ.
ಈ ಎಲ್ಲಾ ಗೊಂದಲಗಳ ಮಧ್ಯೆ ಶಾಲಾ-ಕಾಲೇಜು ತರಗತಿ ಆರಂಭಕ್ಕೆ ಕೇಂದ್ರ ಸರಕಾರ ಯಾವ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಆದೇಶ ಹೊರಡಿಸಲಿದೆ ಇನ್ನು ಕೆಲವೇ ದಿನಗಳಲ್ಲಿ ತಿಳಿದು ಬರಲಿದೆ.
0 comments:
Post a Comment